ರೈಲ್ವೆ ಪರೀಕ್ಷೆ ವಂಚನೆ ಬಗ್ಗೆ ಅಭ್ಯರ್ಥಿಗಳ ರೋಷಾಗ್ನಿ: ಜನವರಿ 28ರಂದು ಬಿಹಾರ ಬಂದ್
ಪಾಟ್ನಾ, ಜನವರಿ 27: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯ NTPC ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ಉದ್ಯೋಗಾಕಾಂಕ್ಷಿಗಳು ಮಾಡುತ್ತಿರುವ ಆರೋಪಗಳ ಕುರಿತು ಪರಿಶೀಲನೆಗೆ ಕೇಂದ್ರ ರೈಲ್ವೇ ಸಚಿವಾಲಯ ರಚಿಸಿರುವ ಸಮಿತಿಯಲ್ಲೇ ವಂಚನೆಯಿದೆ ಎಂಬ ಆರೋಪ ಕೇಳಿ ಬಂದಿದೆ.
ಕೇಂದ್ರ ಸರ್ಕಾರದ ಸಮಿತಿ ರಚನೆ ಹೊರತಾಗಿಯೂ ವಿದ್ಯಾರ್ಥಿ ಸಂಘ AISA ಮತ್ತು ಇತರ ಯುವ ಸಂಘಟನೆಗಳು ಶುಕ್ರವಾರ "ಬಿಹಾರ ಬಂದ್"ಗೆ ಕರೆ ನೀಡಿವೆ. ಕೇಂದ್ರ ರೈಲ್ವೆ ಸಚಿವಾಲಯವು ರಚಿಸಿರುವ ಸಮಿತಿಯು ಉತ್ತರ ಪ್ರದೇಶದ ಚುನಾವಣೆಯವರೆಗೆ ವಿಷಯವನ್ನು ಮುಂದೂಡುವ "ಪಿತೂರಿ" ಎಂದು AISA ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸಂದೀಪ್ ಸೌರವ್ ದೂಷಿಸಿದ್ದಾರೆ.
ಬಿಹಾರದ ಗಯಾದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಆಗಿದೆ. ಚಲಿಸುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ನಿಂತಿದ್ದ ರೈಲಿಗೆ ಕೆಲವರು ಬೆಂಕಿ ಹಚ್ಚಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರ ಮಧ್ಯೆ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ವಿದ್ಯಾರ್ಥಿಗಳ ಪ್ರಶ್ನೆಯಲ್ಲಿ ಯಾವುದೇ ಸಂದೇಹವಿಲ್ಲ
ರೈಲ್ವೆ ನೇಮಕಾತಿ ಮಂಡಳಿ ಕುರಿತು ಪರೀಕ್ಷಾರ್ಥಿಗಳು ಕೇಳುತ್ತಿರುವ ಪ್ರಶ್ನೆಗಳಲ್ಲಿ ಯಾವುದೇ ಸಂದೇಹವಿಲ್ಲ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಅತಿಹೆಚ್ಚು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಈ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಇದರ ಒತ್ತಡವನ್ನು ನಿರ್ವಹಿಸುವುದಕ್ಕಾಗಿ ಕೇಂದ್ರ ಸರ್ಕಾರವು ಪರೀಕ್ಷೆಗಳನ್ನು ಮುಂದೂಡುವ ಮತ್ತು ಸಮಿತಿ ರಚನೆಯ ಷಡ್ಯಂತ್ರವನ್ನು ಹೂಡಿದೆ ಎಂದು AISA ಪ್ರಧಾನ ಕಾರ್ಯದರ್ಶಿ ಸಂದೀಪ್ ಸೌರವ್ ಆರೋಪಿಸಿದ್ದಾರೆ.

ಭಾರತೀಯ ರೈಲ್ವೆ ಇಲಾಖೆ ಹೇಳುವುದೇನು?
ಭಾರತೀಯ ರೈಲ್ವೆ ಇಲಾಖೆ ಪ್ರಕಾರ, ಸಮಿತಿಯು 2019ರಲ್ಲಿ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ (NTPC) ಸ್ಪರ್ಧಾತ್ಮಕ ಪರೀಕ್ಷೆ ನೀಡಲಾದ ಕೇಂದ್ರೀಕೃತ ಉದ್ಯೋಗಿಗಳ 1ನೇ ಹಂತದ CBT ಫಲಿತಾಂಶಗಳನ್ನು ಪರಿಶೀಲಿಸುತ್ತದೆ. ಈಗಾಗಲೇ ಶಾರ್ಟ್‌ಲಿಸ್ಟ್ ಮಾಡಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಎರಡನೇ ಹಂತದ ಸಿಬಿಟಿ ಅಭ್ಯರ್ಥಿಗಳ ಪಟ್ಟಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಗುವುದು ಎಂದು ತಿಳಿಸಿದೆ. ಅಭ್ಯರ್ಥಿಗಳು ತಮ್ಮ ಕಾಳಜಿ ಮತ್ತು ಸಲಹೆಗಳನ್ನು ಸಮಿತಿಗೆ [email protected] ನಲ್ಲಿ ಸಲ್ಲಿಸಬಹುದು ಎಂದು ರೈಲ್ವೆ ತಿಳಿಸಿದೆ.

ಉದ್ಯೋಗಾಕಾಂಕ್ಷಿಗಳಿಂದ ದೂರು ಸ್ವೀಕಾರಕ್ಕೆ ಸೂಚನೆ
ರೈಲ್ವೆ ನೇಮಕಾತಿ ಮಂಡಳಿಯ ಎಲ್ಲಾ ಅಧ್ಯಕ್ಷರು ಅಭ್ಯರ್ಥಿಗಳಿಂದ ಕುಂದುಕೊರತೆಗಳನ್ನು ಸ್ವೀಕರಿಸಬೇಕು. ಈ ಕುಂದುಕೊರತೆಗಳನ್ನು ಸಂಗ್ರಹಿಸಿ, ಅದನ್ನು ಸಮಿತಿಗೆ ಕಳುಹಿಸಿ ಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಫೆಬ್ರವರಿ 16ರವರೆಗೆ ಅಂದರೆ ಮುಂದಿನ ಮೂರು ವಾರಗಳ ತನಕ ಅಭ್ಯರ್ಥಿಗಳು ತಮ್ಮ ದೂರುಗಳನ್ನು ಮತ್ತು ಸಲಹೆಗಳನ್ನು ಸಮಿತಿಗೆ ಸಲ್ಲಿಸುವಂತೆ ಅವಕಾಶ ನೀಡಲಾಗಿದೆ. ಅಂತಿಮವಾಗಿ ಸಮಿತಿಯು ಮಾರ್ಚ್ 4ರೊಳಗೆ ತನ್ನ ಶಿಫಾರಸ್ಸುಗಳನ್ನು ಸಚಿವಾಲಯಕ್ಕೆ ಸಲ್ಲಿಸಲಿದೆ.
ಸಮಿತಿಯಲ್ಲಿ ಎಷ್ಟು ಸದಸ್ಯರಿದ್ದಾರೆ?:
ಸಮಿತಿಯ ಸದಸ್ಯರು ದೀಪಕ್ ಪೀಟರ್, ಅಧ್ಯಕ್ಷರು, ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ (ಕೈಗಾರಿಕಾ ಸಂಬಂಧ),
ರೈಲ್ವೆ ಮಂಡಳಿಯ ರಾಜೀವ್ ಗಾಂಧಿ, ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಾಹಕ ನಿರ್ದೇಶಕ ಎಸ್ಟಾಬ್ಲಿಷ್ಮೆಂಟ್ (RRB),
ರೈಲ್ವೆ ಮಂಡಳಿಯ ಆದಿತ್ಯ ಕುಮಾರ್, ಸದಸ್ಯರು, ಮುಖ್ಯ ಸಿಬ್ಬಂದಿ ಅಧಿಕಾರಿ (ಆಡಳಿತ),
ಪಶ್ಚಿಮ ರೈಲ್ವೆಯ ಜಗದೀಶ್ ಅಲಗರ್, ಸದಸ್ಯ ಅಧ್ಯಕ್ಷ ಆರ್‌ಆರ್‌ಬಿ/ಚೆನ್ನೈ
ಮುಖೇಶ್ ಗುಪ್ತಾ, ಸದಸ್ಯ ಅಧ್ಯಕ್ಷ ಆರ್‌ಆರ್‌ಬಿ, ಭೋಪಾಲ್

ಬಿಹಾರದ ಗಯಾದಲ್ಲಿ ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ
ಬಿಹಾರದ ಗಯಾದ ಬಳಿ ರೈಲು ನಿಲ್ದಾಣದ ಹಲವೆಡೆ ಅಭ್ಯರ್ಥಿಗಳು ರೈಲಿಗೆ ನುಗ್ಗಿ ದಾಂಧಲೆ ನಡೆಸಿದರು. ಕೆಲವು ಅಭ್ಯರ್ಥಿಗಳು ರೈಲಿಗೆ ಬೆಂಕಿ ಹಚ್ಚಿದ್ದಾರೆ. ವಿದ್ಯಾರ್ಥಿಗಳು ನಿರಂತರ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಬುಧವಾರ ತೀವ್ರ ಆಕ್ರೋಶಗೊಂಡಿದ್ದಾರೆ ಎಂದು ರೈಲ್ವೆ ಕಾರ್ಮಿಕರೊಬ್ಬರು ಹೇಳಿದರು. ಗಯಾ ರೈಲು ನಿಲ್ದಾಣದ ಆವರಣದಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕಳುಹಿಸಿ ಕೊಡಲಾಗಿತ್ತು. ಆದರೆ, ಸಿಟ್ಟಿಗೆದ್ದ ವಿದ್ಯಾರ್ಥಿಗಳ ಮುಂದೆ ಪೊಲೀಸರ ನಿಯಂತ್ರಣ ಕೈತಪ್ಪಿತು. ಪ್ರತಿಭಟನಾಕಾರರು ಶ್ರಮಜೀವಿ ಎಕ್ಸ್‌ಪ್ರೆಸ್‌ಗೂ ಭಾರಿ ಹಾನಿಯನ್ನುಂಟು ಮಾಡಿದ್ದರು.












Click it and Unblock the Notifications