ಮಾಂಸಹಾರಿಗಳಿಗೆ ಸಿಹಿಸುದ್ದಿ: ಆನ್ ಲೈನ್ ನಲ್ಲೇ ಚಿಕನ್, ಫಿಶ್ ಮಾರಾಟ!
ನವದೆಹಲಿ, ಏಪ್ರಿಲ್.19: ಭಾರತ ಲಾಕ್ ಡೌನ್ ಹಿನ್ನೆಲೆ ದೇಶದಲ್ಲಿ ಕೋಳಿ ಮತ್ತು ಮೀನು ಮಾರಾಟ ಮಾಡುವ ಚಿಲ್ಲರೇ ವ್ಯಾಪಾರಿಗಳ ವ್ಯಾಪಾರಕ್ಕೆ ತೀವ್ರ ಹೊಡೆತ ಬೀಳುತ್ತಿದೆ. ಇದರ ಮಧ್ಯೆ ಆನ್ ಲೈನ್ ಮೂಲಕ ಬುಕ್ಕಿಂಗ್ ಗೆ ಜನರು ಮುಗಿ ಬೀಳುತ್ತಿದ್ದಾರೆ.
ವಿಶ್ವದಲ್ಲೇ ಭಾರತ ಅತಿಕಡಿಮೆ ಮಾಂಸ ಆಹಾರ ಬಳಸುವ ದೇಶ ಎಂದು ಗುರುತಿಸಿಕೊಂಡಿದೆ. 2013ರಲ್ಲಿ ಪ್ರಪಂಚಕ್ಕೆ ಹೋಲಿಸಿ ನೋಡಿದಾಗ ಅತಿಕಡಿಮೆ ಮಾಂಸ ಬಳಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಕೂಡಾ ಒಂದಾಗಿದೆ.
ಕೋಳಿ ಮಾಂಸ, ಕೋಳಿ ಮೊಟ್ಟೆ ಮಾರಾಟ ಮಾಡುತ್ತಿದ್ದ ಬೆಂಗಳೂರು ಮೂಲದ ನಾಯ್ಡುಸ್ ಚಿಕನ್ ಸಂಸ್ಥೆಯ 49 ಅಂಗಡಿಗಳ ಪೈಕಿ 26 ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಆದರೆ ಅಚ್ಚರಿ ವಿಚಾರ ಎಂದರೆ ಈ ಅಂಗಡಿಗಳಲ್ಲಿ ನಿರೀಕ್ಷೆಗೂ ಮೀರಿ ಅತಿಹೆಚ್ಚು ವ್ಯಾಪಾರವಾಗುತ್ತಿದೆ ಎಂದು ನಾಯ್ಡುಸ್ ಸಂಸ್ಥಾಪಕ ನರೇಂದ್ರ ಪಸ್ಪೂರ್ತಿ ತಿಳಿಸಿದ್ದಾರೆ.

1 ಕೆಜಿ ಚಿಕನ್ ಗೆ 250 ರೂಪಾಯಿ
ಬೆಂಗಳೂರಿನ ನಾಯ್ಡುಸ್ ಚಿಕನ್ ಶಾಪ್ ನಲ್ಲಿ ಒಂದು ಕೆಜಿ ಚಿಕನ್ ನ್ನು 250 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಚಿಕನ್ ಬಿರಿಯಾನಿ, ಚಿಕನ್ ಕರ್ರಿ ಜೊತೆಗೆ ಹೀಟ್ ಆಂಡ್ ಈಟ್ ಪ್ರಾಟೆಕ್ಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಚಿಕನ್ ಪಾಪ್ ಕಾರ್ನ್, ಚಿಕನ್ ಬರ್ಗರ್ ಸಂಗ್ರಹಿಸಿಡಲು ಅನುಕೂಲವಾಗಿದ್ದು ಹೆಚ್ಚಿನ ಬೇಡಿಕೆ ಬಂದಿದೆ.

ನಾಯ್ಡುಸ್ ಚಿಕನ್ ಕಂಪನಿಯಲ್ಲಿ 110 ಉದ್ಯೋಗಿಗಳು
ಇನ್ನು, ನಾಯ್ಡುಸ್ ಚಿಕನ್ ಕಂಪನಿಯಲ್ಲಿ 110 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 17 ಮಂದಿಯ ತಂಡಗಳನ್ನು ರಚಿಸಿ ಮಾರಾಟ, ವಿತರಣೆ ಮತ್ತು ಆರ್ಡರ್ ತೆಗೆದುಕೊಳ್ಳುವುದಕ್ಕೆ ನೇಮಿಸಲಾಗಿದೆ. ಕಡ್ಡಾಯವಾಗಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವಂತೆ ಕಟ್ಟಪ್ಪಣೆ ಹೊರಡಿಸಿಲ್ಲ. ಬದಲಿಗೆ ಅನುಕೂಲವಿರುವ ಉದ್ಯೋಗಿಗಳನ್ನೇ ಬಳಸಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ಕಂಪನಿ ಸಂಸ್ಥಾಪಕ ನರೇಂದ್ರ ತಿಳಿಸುತ್ತಾರೆ.

ಬೆಂಗಳೂರಿನಲ್ಲಿ 15,000 ಆನ್ ಲೈನ್ ಆರ್ಡರ್
ಭಾರತ ಲಾಕ್ ಡೌನ್ ನಡುವೆ ಮಾಂಸ ಪ್ರಿಯರ ಆನ್ ಲೈನ್ ಬುಕ್ಕಿಂಗ್ ಜೋರಾಗಿದೆ. ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ 15,000 ಆನ್ ಲೈನ್ ಆರ್ಡರ್ ಬಂದಿದ್ದು, ಸ್ವಿಗ್ಗಿ ಮತ್ತು ಡುಂಜೋ ಮೂಲಕ ವಿತರಣೆ ಮಾಡಲಾಗಿದೆ. ಲಾಕ್ ಡೌನ್ ಗಿಂತ ಮೊದಲು ತಿಂಗಳಿಗೆ 40,000 ಆನ್ ಲೈನ್ ಆರ್ಡರ್ ಗಳು ಬರುತ್ತಿದ್ದವು. ಆದರೆ ಇದೀಗ ತಿಂಗಳಿಗೆ 65,000 ಆರ್ಡರ್ ಗಳು ಬರುತ್ತಿದ್ದು, ಗಣನೀಯ ಏರಿಕೆ ಕಂಡು ಬಂದಿದೆ.

ದೇಶದಲ್ಲಿ ಮಾಂಸಹಾರಕ್ಕೆ ಹೆಚ್ಚಿದ ಬೇಡಿಕೆ
ಭಾರತ ಲಾಕ್ ಡೌನ್ ಗಿಂತ ಮೊದಲು ಮತ್ತು ಲಾಕ್ ಡೌನ್ ನಂತರದ ಅಂಕಿಅಂಶಗಳನ್ನು ತುಲನೆ ಮಾಡಿದಾಗ ಶೇ.200ರಷ್ಟು ಬೇಡಿಕೆ ಹೆಚ್ಚಾಗಿದೆ. ಒಂದು ವಾರದ ವ್ಯಾಪರದಲ್ಲಿ ಶೇ.40ರಷ್ಟು ಏರಿಕೆ ಕಂಡು ಬಂದಿದೆ ಎಂದು ಲಿಸಿಯಸ್ ಕಂಪನಿಯ ಸಹ ಸಂಸ್ಥಾಪಕ ವಿವೇಕ್ ಗುಪ್ತಾ ತಿಳಿಸಿದ್ದಾರೆ. ಲಾಕ್ ಡೌನ್ ಬಳಿಕ ಕೋಳಿ ಮತ್ತು ಮೀನಿನ ಮಾಂಸಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ದೇಶದ ಏಳು ಮಹಾನಗರಗಳಲ್ಲಿ ಶಾಖೆಗಳನ್ನು ಹೊಂದಿರುವ ಲಿಸಿಯಸ್ ಕಂಪನಿಗೆ ನಿತ್ಯ 18,000 ಆರ್ಡರ್ ಗಳು ಬರುತ್ತವೆ ಅಂತಾರೆ ವಿವೇಕ್ ಗುಪ್ತಾ.

ಮೀನಿನ ಮಾಂಸ ಮಾರಾಟ ಹೆಚ್ಚಿದ ಬೇಡಿಕೆ
ಕೋಳಿ ಮಾಂಸವಷ್ಟೇ ಅಲ್ಲದೇ ಮೀನುಗಳ ಮಾರಾಟಕ್ಕೂ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಮುಂಬೈ ಮೂಲದ ಪೆಸ್ಕಾ ಫ್ರೆಶ್ ಕಂಪನಿಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ ಕೆಲವು ವಾರಗಳಿಂದ ವ್ಯಾಪಾರವು ಡಬಲ್ ಆಗಿದೆ. ಪ್ರತಿನಿತ್ಯ 1,500 ಆನ್ ಲೈನ್ ಆರ್ಡರ್ ಗಳು ಬರುತ್ತವೆ ಎಂದು ಪೆಸ್ಕಾ ಫ್ರೆಶ್ ಸಂಸ್ಥಾಪಕ ಸಂಗ್ರಾಮ್ ಸಾವಂತ್ ತಿಳಿಸಿದ್ದಾರೆ. ಶೇ.80ರಷ್ಟು ವಲಸೆ ಮೀನುಗಾರರು ಲಾಕ್ ಡೌನ್ ನಿಂದ ಊರನ್ನೇ ತೊರೆದಿದ್ದು, ಇನ್ನುಳಿದ ಸ್ಥಳೀಯ ಮೀನುಗಾರರು ಬೋಟ್ ಗಳಲ್ಲಿ ತೆರಳಿ ಮೀನುಗಳನ್ನು ಹಿಡಿದುಕೊಂಡು ಬರುತ್ತಿದ್ದಾರೆ. ಅಂಥ ಮೀನುಗಾರರ ಜೊತೆ ಕಂಪನಿಯು ನೇರವಾಗಿ ವ್ಯವಹರಿಸುತ್ತಿದೆ ಎಂದು ಸಂಸ್ಥಾಪಕ ಸಂಗ್ರಾಮ್ ಸಾವಂತ್ ತಿಳಿಸಿದ್ದಾರೆ.












Click it and Unblock the Notifications