SBI data leak ಆಯಿತು, ಈಗ RTO ಮಾಹಿತಿಯೂ ಸೋರಿಕೆ, ಹೀಗಾದ್ರೆ ಹೇಗ್ ಗುರು?
India Data Leak: ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಡೇಟಾ ಸೋರಿಕೆಯಾಯಿತು. ಇದರ ಬೆನ್ನಲ್ಲೇ ಇದೀಗ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಸಿಬಿಎಫ್‌ಸಿಯ ಪ್ರಮುಖ ಪೋರ್ಟಲ್‌ಗಳಲ್ಲಿ ಇಂತಹದ್ದೇ ಗಂಭೀರ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ದೇಶದ ಡಿಜಿಟಲ್ ಮೂಲಸೌಕರ್ಯಕ್ಕೆ ಸವಾಲೊಡ್ಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯ ಪ್ರಮುಖ ಪೋರ್ಟಲ್‌ಗಳಲ್ಲಿ ಗಂಭೀರ ಪ್ರಮಾಣದ ದತ್ತಾಂಶ (ಡೇಟಾ) ಸೋರಿಕೆಯಾಗಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಲೆಕ್ಕಪರಿಶೋಧನೆ (ಫೊರೆನ್ಸಿಕ್ ಆಡಿಟ್) ಮತ್ತು ಅಪ್ಲಿಕೇಶನ್‌ಗಳ ತೆರವಿಗೆ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗಿದೆ.

ವಾಹನ ಮಾಲೀಕರ ವೈಯಕ್ತಿಕ ಮಾಹಿತಿ ಸೋರಿಕೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ವಾಹನ್ (Vahan), ಸಾರಥಿ (Sarathi), ಇ-ಚಲನ್ (e-Challan) ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪೋರ್ಟಲ್‌ಗಳಿಂದ ಕೋಟ್ಯಂತರ ನಾಗರಿಕರ ಮಾಹಿತಿ ಸೋರಿಯಾಗಿದೆ. ವಾಹನ್ ಪೋರ್ಟಲ್ ವಾಹನ ನೋಂದಣಿ ವಿವರಗಳನ್ನು, ಸಾರಥಿ ಚಾಲನಾ ಪರವಾನಗಿಗಳನ್ನು, ಇ-ಚಲನ್ ಸಂಚಾರ ನಿಯಮ ಉಲ್ಲಂಘನೆ ಮತ್ತು ದಂಡದ ವಿವರಗಳನ್ನು ಹಾಗೂ ಸೈಬರ್ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ.
5 ರೂ.ಗೆ ವಾಹನ ಮಾಲೀಕರ ಖಾಸಗಿ ವಿವರಗಳ ಮಾರಾಟ
ಖಾಸಗಿ ಸೈಬರ್ ಭದ್ರತಾ ಸಂಸ್ಥೆಯಾದ 'ಸೈಡರೆಸ್' (Cyderes) ನಡೆಸಿದ ತನಿಖೆಯಲ್ಲಿ ಕೇವಲ 5 ರೂಪಾಯಿಗೆ ವಾಹನ ಮಾಲೀಕರ ಖಾಸಗಿ ವಿವರಗಳು ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಟೆಲಿಗ್ರಾಂ ಚಾನೆಲ್‌ಗಳು ಹಾಗೂ ಕೆಲವು ಮೊಬೈಲ್ ಆ್ಯಪ್‌ಗಳ ಮೂಲಕ ಕೇವಲ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿದರೆ ಸಾಕು, ವಾಹನ ಮಾಲೀಕರ ಪೂರ್ಣ ಹೆಸರು, ತಂದೆಯ ಹೆಸರು, ಖಾಯಂ ಮತ್ತು ಪ್ರಸ್ತುತ ವಿಳಾಸ, ಪಿನ್‌ಕೋಡ್, ಮೊಬೈಲ್ ಸಂಖ್ಯೆ ಲಭ್ಯವಾಗುತ್ತಿತ್ತು. ಅಷ್ಟೇ ಅಲ್ಲದೆ, ಚಾಲನಾ ಪರವಾನಗಿ (DL), ದಂಡದ ವಿವರ, ಫಾಸ್ಟ್ಯಾಗ್ ಮಾಹಿತಿ ಹಾಗೂ ಆರ್‌ಸಿ ಡಿಜಿಟಲ್ ಪ್ರತಿಗಳು ಸಾರ್ವಜನಿಕವಾಗಿ ಸೋರಿಕೆಯಾಗಿವೆ.
'ವೆಹಿಕಲ್ ಇನ್ಫರ್ಮೇಷನ್ ಆ್ಯಪ್' (1 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳು) ಮತ್ತು 'ವೆಹಿಕಲ್ ಸೇತು' (10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳು) ನಂತಹ ಆ್ಯಪ್‌ಗಳು ಈ ಡೇಟಾವನ್ನು ಬಳಸಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯವು ಇಂತಹ ಎಲ್ಲಾ ಆ್ಯಪ್‌ಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ತಕ್ಷಣವೇ ತೆರವುಗೊಳಿಸುವಂತೆ ಗೂಗಲ್ ಸೇರಿದಂತೆ ಪ್ರಮುಖ ಆ್ಯಪ್ ಸ್ಟೋರ್‌ಗಳಿಗೆ ಸೂಚಿಸಿದೆ. ಜೊತೆಗೆ ಕರ್ಟ್-ಇನ್ (CERT-In) ಸಂಸ್ಥೆಗೆ ಸಂಪೂರ್ಣ ಫೊರೆನ್ಸಿಕ್ ಆಡಿಟ್ ನಡೆಸಲು ಆದೇಶಿಸಿದೆ.
ಚಲನಚಿತ್ರ ಸೆನ್ಸಾರ್ ಮಂಡಳಿಯ ಪೋರ್ಟಲ್‌ನಲ್ಲೂ ಸಮಸ್ಯೆ
ಮತ್ತೊಂದೆಡೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC), e-Cinepramaan ಪೋರ್ಟಲ್‌ನಿಂದ 500ಕ್ಕೂ ಹೆಚ್ಚು ಚಲನಚಿತ್ರ ಶೀರ್ಷಿಕೆಗಳಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿದೆ. ಇದರಲ್ಲಿ ಹಲವಾರು ಪ್ರಮುಖ ಚಲನಚಿತ್ರಗಳ ಚಿತ್ರಕಥೆಗಳು, ಕಟ್ ಆರ್ಡರ್‌ಗಳು ಮತ್ತು ಪ್ರಮಾಣಪತ್ರಕ್ಕಾಗಿ ಸಲ್ಲಿಸಲಾದ ಅರ್ಜಿಯ ದಾಖಲೆಗಳು ಸೇರಿವೆ. ಆದರೆ ಚಲನಚಿತ್ರಗಳ ವೀಡಿಯೊ ಫೈಲ್‌ಗಳು ಸೋರಿಕೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಖಾಸಗಿ ದಾಖಲೆಗಳನ್ನು ಲಾಭರಹಿತ ಸಂಸ್ಥೆಯಾದ 'ಇಂಟರ್ನೆಟ್ ಆರ್ಕೈವ್' ವೆಬ್‌ಸೈಟ್‌ನಲ್ಲಿ ರಷ್ಯನ್ ಹೆಸರಿನ ಬಳಕೆದಾರರೊಬ್ಬರು ಅಪ್‌ಲೋಡ್ ಮಾಡಿದ್ದು, ಸಾರ್ವಜನಿಕರು ಉಚಿತವಾಗಿ ಡೌನ್‌ಲೋಡ್ ಮಾಡಲು ಮುಕ್ತವಾಗಿಸಲಾಗಿತ್ತು. ಅಕ್ಟೋಬರ್ 4ರಂದು ಈ ಪೋರ್ಟಲ್ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡ ನಂತರ ಅಪ್‌ಲೋಡ್ ಪ್ರಕ್ರಿಯೆ ನಿಂತಿತ್ತು. ಅಕ್ಟೋಬರ್ 12ರ ವೇಳೆಗೆ ಈ ಎಲ್ಲಾ ದಾಖಲೆಗಳನ್ನು ವೆಬ್‌ಸೈಟ್‌ನಿಂದ ತೆರವುಗೊಳಿಸಲಾಗಿದೆ.
ಸಿಬಿಎಫ್‌ಸಿಯ ಸ್ಪಷ್ಟನೆ ಏನು?
ಯಾವುದೇ ನಿರ್ದಿಷ್ಟ ನಿರ್ಮಾಪಕರ ಖಾತೆ ಹ್ಯಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಬಿಎಫ್‌ಸಿ, ತನ್ನ ಪೋರ್ಟಲ್‌ನ ಭದ್ರತೆಯನ್ನು ಬಲಪಡಿಸಲು ಸಂಪೂರ್ಣ ಸೆಕ್ಯೂರಿಟಿ ಆಡಿಟ್ ನಡೆಸುವುದಾಗಿ ಭರವಸೆ ನೀಡಿದೆ. ಸರ್ಕಾರಿ ವ್ಯವಸ್ಥೆಯಲ್ಲಿನ ಈ ಸೈಬರ್ ದೋಷಗಳು ನಾಗರಿಕರ ಮತ್ತು ಉದ್ಯಮಿಗಳ ಗೌಪ್ಯತೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ ಅಂತಲೇ ಹೇಳಬಹುದು.


Click it and Unblock the Notifications
