ರಾಹುಲ್ ಗಾಂಧಿಯನ್ನು ಕೇಳಿ ಗಡಿಯಲ್ಲಿ ಸೇನೆ ನಿಯೋಜನೆ ಮಾಡಬೇಕೇ?
ನವದೆಹಲಿ, ಡಿಸೆಂಬರ್ 19: ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿರುಗೇಟು ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಆದೇಶದ ಮೇರೆಗೆ ಭಾರತೀಯ ಸೇನೆಯನ್ನು ನಿಯೋಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೋಮವಾರ ಮಾಧ್ಯಮ ಸಮಾವೇಶದಲ್ಲಿ ಮಾತನಾಡಿದ ಸಚಿವ ಜೈಶಂಕರ್, ಇದು ಭಾರತದಿಂದ ಅತಿದೊಡ್ಡ ಎಲ್ಎಸಿ ನಿಯೋಜನೆಯಾಗಿದೆ. ಕಳೆದ 2020 ರಿಂದ ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಲಾದ ಚೀನಾದ ನಿಯೋಜನೆಗಳನ್ನು ಎದುರಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿದರು.
"ಎಲ್‌ಎಸಿಯಲ್ಲಿ ಏಕಪಕ್ಷೀಯ ಬದಲಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಸೇನೆಯನ್ನು ನಿಯೋಜಿಸಲಾಗುತ್ತದೆ, ಅಂಥ ಪ್ರಯತ್ನವನ್ನು ತಡೆಯುವುದು ಭಾರತೀಯ ಸೇನೆಯ ಬದ್ಧತೆಯಾಗಿದೆ. ಅದನ್ನು ನಾವು ನಿರಾಕರಿಸಿದ್ದರೆ, ಸೇನೆಯನ್ನು ಅಲ್ಲಿ ನಿಯೋಜಿಸಲಾಗುತ್ತಿರಲಿಲ್ಲ," ಎಂದು ಜೈಶಂಕರ್ ಹೇಳಿದರು.

ಭಾರತದ ಸೇನೆ ನಿಯೋಜನೆಗೆ ರಾಹುಲ್ ಗಾಂಧಿ ಆದೇಶಿಸಬೇಕೇ?
ಭಾರತೀಯ ಸೈನಿಕರು ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ಗಡಿ ನಿಯಂತ್ರಣ ರೇಖೆಗೆ ಹೋಗುವುದಿಲ್ಲ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶದ ಮೇಲೆ ಸೇನೆ ನಿಯೋಜಿಸಲಾಗುತ್ತದೆ ಎಂದು ಸಚಿವ ಜೈಶಂಕರ್ ಹೇಳಿದರು. ಇದಕ್ಕೂ ಮುನ್ನ, ಬೀಜಿಂಗ್‌ನಿಂದ ಬೆದರಿಕೆಯನ್ನು ಸರ್ಕಾರ ಕಡಿಮೆ ಮಾಡುತ್ತದೆ ಎಂದು ಆರೋಪಿಸಿದ ರಾಹುಲ್, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎಂದು ಹೇಳಿದ್ದರು.

ಸಚಿವ ಜೈಶಂಕರ್ ಪುತ್ರನ ಬಗ್ಗೆ ಕಾಂಗ್ರೆಸ್ ಸಿಡಿಮಿಡಿ
"ಇಂದು ಒಂದು ಮಾಹಿತಿಯನ್ನು ಬಹಿರಂಗಪಡಿಸುವುದು ಮುಖ್ಯವಾಗಿದೆ. ವಿದೇಶಾಂಗ ಸಚಿವರ ಪುತ್ರನ ನೇತೃತ್ವದ ಯುಎಸ್‌ಎ ಘಟಕದ ಪ್ರತಿಷ್ಠಾನವು ಚೀನಾ ರಾಯಭಾರ ಕಚೇರಿಯಿಂದ ಒಂದಲ್ಲ, ಎರಡಲ್ಲ, ಮೂರು ಬಾರಿ ಹಣವನ್ನು ಪಡೆದುಕೊಂಡಿದೆ. ಇದು ಇತ್ತೀಚೆಗೆ ನಡೆದಿದೆ. ಈ ನಿಧಿಯನ್ನು ಏಕೆ ಸ್ವೀಕರಿಸಲಾಗಿದೆ? ಏನು ಕಾರಣ? ಚೀನಾದ ಬಗ್ಗೆ ಭಾರತ ಸರ್ಕಾರ ಪದೇ ಪದೇ ಮೌನ ವಹಿಸಲು ಕಾರಣವೇನು?", ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದರು. "ಇಂಡಿಯಾ ಫೌಂಡೇಶನ್ ಅದರೊಂದಿಗೆ ಸಂಘದಿಂದ ಸಾಕಷ್ಟು ಜನರನ್ನು ಹೊಂದಿದೆ. ಫೌಂಡೇಶನ್ ಏಕೆ ಆಗಾಗ್ಗೆ ಚೀನಾಕ್ಕೆ ಭೇಟಿ ನೀಡುತ್ತದೆ? ಚೀನಾದೊಂದಿಗೆ ಅದು ಯಾವ ಸಂಬಂಧವನ್ನು ಹೊಂದಿದೆ?", ಎಂದು ಖೇರಾ ಪ್ರಶ್ನಿಸಿದ್ದರು.

ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆರೋಪವೇನು?
"ಕೇಂದ್ರ ಸರ್ಕಾರವು ನಿದ್ರಿಸುತ್ತಿದೆ. ಇದು ಈ ಸತ್ಯವನ್ನು ಕೇಳಲು ಬಯಸುವುದಿಲ್ಲ ಅಥವಾ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ಬಳಸುತ್ತಿರುವ ಅಸ್ತ್ರಗಳನ್ನು ನೋಡಿದರೆ ಅವರು ಯುದ್ಧಕ್ಕೆ ತಯಾರಿ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ,'' ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಕಳೆದ 10 ದಿನಗಳ ಹಿಂದೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆ ನಡೆಸಿದರು. ಕನಿಷ್ಠ ಆರು ಭಾರತೀಯ ಯೋಧರಿಗೆ ಗಾಯಗಳಾಗಿದ್ದು, ಗುವಾಹಟಿಯ ಸೇನಾ ಆಸ್ಪತ್ರೆಗೆ ದಾಖಲಾದರು. ಈ ಹಿಂದೆ ಜೂನ್ 2020 ರಲ್ಲಿ ಮಾರಣಾಂತಿಕ ಗಾಲ್ವಾನ್ ಕಣಿವೆಯ ಘಟನೆಯ ನಂತರ ಇದು ಮೊದಲ ಘರ್ಷಣೆಯಾಗಿತ್ತು.

ಚೀನಾದಿಂದ ಎಲ್ಎಸಿಯಲ್ಲಿ ನುಸುಳುವಿಕೆ ಯತ್ನ
ಚೀನಾಗೆ ಸೇರಿದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ 300-400 ಸೈನಿಕರು ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಮೂಲಕ ಒಳನುಗ್ಗಲು ಪ್ರಯತ್ನಿಸಿದರು. ಈ ಹಿನ್ನೆಲೆ ಡಿಸೆಂಬರ್ 9ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ಇದನ್ನು ಭಾರತೀಯ ಸೈನಿಕರು "ದೃಢವಾಗಿ ಎದುರಿಸಿದರು, ಗಡಿಯಲ್ಲಿ ನಿಯೋಜನೆಯಾಗಿದ್ದ ಯೋಧರು, ಚೀನಿಯರನ್ನು ಹಿಮ್ಮೆಟ್ಟುವಂತೆ ಮಾಡಿದರು.












Click it and Unblock the Notifications