ಭಾರತ-ಚೀನಾ ಗಡಿಯಲ್ಲಿ ಸೇನಾ ಪಡೆಗಳಿಂದ ಶಸ್ತ್ರಾಸ್ತ್ರ ರವಾನೆ: ಕಾರಣವೇನು?
ನವದೆಹಲಿ,ಜೂನ್ 1: ಭಾರತ-ಚೀನಾ ಗಡಿಯಲ್ಲಿ ಸ್ಥಿತಿ ಉದ್ವಿಗ್ನಗೊಂಡಿದೆ. ಸೇನಾ ಪಡೆಗಳಿಂದ ಶಸ್ತ್ರಾಸ್ತ್ರ ರವಾನೆಯಾಗಿದೆ.
ವಾಸ್ತವ ನಿಯಂತ್ರಣ ರೇಖೆ ಸಮೀಪದ ನೆಲೆಗಳಿಗೆ ಯುದ್ಧ ವಾಹನಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಚೀನಾ ಸಾಗಿಸಿದೆ. ಭಾರತ ಕೂಡ ತಾವೂ ಏನೂ ಕಡಿಮೆಯಿಲ್ಲ ಎಂಬಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗಡಿ ವಿವಾದವನ್ನು ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಇತ್ಯರ್ಥಗೊಳಿಸುವುದಾಗಿ ಉಭಯ ದೇಶಗಳು ಹೇಳಿಕೆ ನೀಡಿವೆ. ಹಾಗಿದ್ದರೂ ಗಡಿಯಲ್ಲಿ ಸೇನಾ ಚಟುವಟಿಕೆಗಳು ಬಿರುಸುಗೊಂಡಿವೆ.

ವಿವಾದಿತ ಪ್ರದೇಶದ ಮೇಲೆ ಭಾರತೀಯ ವಾಯು ಪಡೆ ನಿರಂತರವಾಗಿ ನಿಗಾ ಇರಿಸುತ್ತಾ ಬಂದಿದೆ. ಪೂರ್ವ ಲಡಾಖ್ ನಲ್ಲಿ ಚೀನಾ ಹಾಗೂ ಭಾರತ ಸೇನೆಗಳ ನಡುವೆ ಯುದ್ಧ ನಡೆದಿದೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಡಿಯೋಗಳು ಹರಿದಾಡುತ್ತಿವೆ ಆದರೆ ಅದ್ಯಾವುದೂ ಸತ್ಯವಾದುದ್ದಲ್ಲ. ಅಂತಹ ಘಟನೆಗಳು ನಡೆದೇ ಇಲ್ಲ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಸದ್ಯ ಗಡಿಯಲ್ಲಿ ಇರುವ ಸನ್ನಿವೇಶಕ್ಕೆ ಸಂಪರ್ಕ ಕಲ್ಪಿಸಿ ವಿಡಿಯೋವನ್ನು ತಿರುಚಲಾಗಿದೆ. ಹಡಿದಾಡುತ್ತಿರುವ ವಿಡಿಯೋ ವಾಸ್ತವವಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತ-ಚೀನಾ ಗಡಿಯಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ. ಈ ಸಂಬಂಧ ಹೊರಬಿದ್ದಿರುವ ವಿಡಿಯೋಗಳು 'ದುರುದ್ದೇಶ'ದಿಂದ ಕೂಡಿವೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಪೂರ್ವ ಲಡಾಕ್ ನ ಭಾರತ-ಚೀನಾ ಗಡಿಯಲ್ಲಿ ಭಾರತೀಯ ಸೇನೆಯ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ.
ಆದರೆ, ಅವುಗಳು ನಿಖರ ಮಾಹಿತಿಯಲ್ಲ. ಅದು ದುರುದ್ದೇಶದಿಂದ ಕೂಡಿದ ಮಾಹಿತಿಯಾಗಿದೆ. ಅಸಲಿಗೆ ಉತ್ತರದ ಗಡಿಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಗಡಿಯಲ್ಲಿ ಭಾರತೀಯ ಸೇನೆಯ ಮೇಲೆ ಚೀನಾ ಸೈನಿಕರು ದಾಳಿ ನಡೆಸಿ, ಕಲ್ಲು ಮತ್ತು ಕೋಲುಗಳಿಂದ ಹೊಡೆಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದವು.












Click it and Unblock the Notifications