Gandhi Jayanthi: ಗಾಂಧೀಜಿ ವಿಚಾರದಲ್ಲಿ ಭಾರತದ ಮಹತ್ವದ ಹೆಜ್ಜೆ!
ಗಾಂಧೀಜಿ ಅವರ 154ನೇ ಜಯಂತಿ ಇಡೀ ಜಗತ್ತಿನಾದ್ಯಂತ ಸಂಭ್ರಮದಿಂದ ನಡೆದಿದೆ. ಇದೇ ವೇಳೆ ಗಾಂಧೀಜಿ ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳ ಕುರಿತು ಭಾರತೀಯರು ಮೆಲುಕು ಹಾಕಿದ್ದಾರೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ಕೂಡ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಹೋರಾಡಿದ ರಾಷ್ಟ್ರಪಿತನ ವಿಚಾರದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಅಂದಹಾಗೆ ಮುಂದಿನ ಪೀಳಿಗೆಗೆ ನಾವು ಗಾಂಧೀಜಿ ಅವರ ಬಗ್ಗೆ ತಿಳಿಸಲು ಅವರ ಸ್ಮಾರಕದ ರಕ್ಷಣೆ ಅತ್ಯಗತ್ಯ. ಅದರಲ್ಲೂ ವಿದೇಶದಲ್ಲಿ ಇರುವ ಗಾಂಧೀಜಿ ಸ್ಮಾರಕಗಳ ರಕ್ಷಣೆ ಆಧುನಿಕ ಕಾಲಘಟ್ಟದಲ್ಲಿ ತುರ್ತು ಅಗತ್ಯವಾಗಿದೆ. ಭಾರತದ ರೀತಿಯೇ, ದಕ್ಷಿಣ ಆಫ್ರಿಕಾದಲ್ಲಿ ಕೂಡ ಗಾಂಧೀಜಿ ಅವರ ಹಲವು ಸ್ಮಾರಕ ಇವೆ. ಆದರೆ ಅವುಗಳ ನಿರ್ವಹಣೆಯೇ ತುಂಬಾ ಕಷ್ಟ ಎಂಬಂತಾಗಿತ್ತು. ಭಾರತ ಇದೀಗ ಈ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಬಾಪು ಸ್ಮಾರಕ ರಕ್ಷಣೆಗೆ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಗಾಂಧೀಜಿ ಸ್ಮಾರಕಗಳ ರಕ್ಷಣೆಗೆ ನೆರವಿನ...
ಹೌದು, ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧೀಜಿ ಅವರಿಗೆ ಸಂಬಂಧಿಸಿದ ಎಲ್ಲಾ ಸ್ಮಾರಕಗಳ ನಿರ್ವಹಣೆಗೆ ಅಲ್ಲಿನ ಸರ್ಕಾರಕ್ಕೆ ಬೇಕಾಗಿರುವ ನೆರವನ್ನು ನೀಡಲಾಗುವುದು ಎಂದು ಭಾರತದ ಹೈಕಮಿಷನರ್ ಪ್ರಭಾತ್ ಕುಮಾರ್ ಭರವಸೆ ನೀಡಿದ್ದಾರೆ. ಗಾಂಧೀಜಿ ಅವರ 154ನೇ ಜಯಂತಿ ಹಿನ್ನೆಲೆ, ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು. ಮಹಾತ್ಮಾ ಗಾಂಧೀಜಿ ಅವರಿಗೆ ಪುಷ್ಪ ನಮನ ಸಲ್ಲಿಸಿ ಈ ಭರವಸೆ ನೀಡಿದ್ದಾರೆ.
ಮತ್ತೊಂದು ಕುತೂಹಲದ ಸಂಗತಿ ಏನೆಂದರೆ ಭಾರತಕ್ಕೆ ಮೊದಲು ಗಾಂಧೀಜಿ ದ.ಆಫ್ರಿಕಾ ನೆಲದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ್ದರು. ಅಲ್ಲಿನ ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನುಡಿ ಬರೆದಿದ್ದರು. 1908ರಿಂದ 1913ರವರೆಗೆ ಗಾಂಧೀಜಿ 4 ಬಾರಿ ಸೆರೆವಾಸ ಅನುಭವಿಸಿದರು. ಅವರ ಮೊದಲ ಸೆರೆವಾಸ ದಕ್ಷಿಣ ಆಫ್ರಿಕಾದಲ್ಲೇ ಆಗಿತ್ತು. 2012ರಲ್ಲಿ ದಕ್ಷಿಣ ಆಫ್ರಿಕಾ ಭೇಟಿ ನೀಡಿದ್ದ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗಾಂಧೀಜಿ ಅವ್ರ ಪ್ರತಿಮೆ ಅಲ್ಲಿ ಅನಾವರಣ ಮಾಡಿದ್ರು. ಇದೀಗ ಖುದ್ದು ಭಾರತದ ಹೈಕಮಿಷನರ್ ನೆರವಿನ ಭರವಸೆ ನೀಡಿದ್ದಾರೆ.

ಗುರುಗಳಿಗೆ ಬೆಲೆಕೊಟ್ಟು ಭಾರತಕ್ಕೆ ವಾಪಸ್
ಇನ್ನು ಗಾಂಧೀಜಿ ಅವರ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಭಾರತದ ಹೈಕಮಿಷನರ್ ಪ್ರಭಾತ್ ಕುಮಾರ್, ನಾನು ಕರ್ತವ್ಯ ನಿರ್ವಹಿಸಿದ ಎಲ್ಲಾ ರಾಷ್ಟ್ರಗಳಲ್ಲೂ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೇನೆ. ದಕ್ಷಿಣ ಆಫ್ರಿಕಾದಲ್ಲೂ ಮಾಡುತ್ತಿದ್ದೇನೆ. 21 ವರ್ಷ ಗಾಂಧೀಜಿ ಅವರಿದ್ದ ದ.ಆಫ್ರಿಕಾ ಹೆಚ್ಚು ಮಹತ್ವದ್ದು, ಎಂದು ಈ ವೇಳೆ ತಮ್ಮ ಭಾಷಣದಲ್ಲಿ ಪ್ರಭಾತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಷ್ಟಕ್ಕೂ ಗಾಂಧೀಜಿ ಅವರು 1915ರಲ್ಲಿ ಆಫ್ರೀಕಾದಿಂದ ಭಾರತಕ್ಕೆ ಮರಳಿ ಬಂದ್ರು. ಮಹಾತ್ಮ ಗಾಂಧೀಜಿ ಅವರು ತಮ್ಮ ಗುರು ಗೋಪಾಲಕೃಷ್ಣ ಗೋಖಲೆಯವರ ಸೂಚನೆ ಹಿನ್ನೆಲೆ ಮರಳಿ ಭಾರತಕ್ಕೆ ಬಂದಿದ್ದರು. ಇದೀಗ ಗಾಂಧೀಜಿ ಸ್ಮಾರಕಗಳ ರಕ್ಷಣೆಗೆ ಭಾರತ ಭರವಸೆ ನೀಡಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ಬಗ್ಗೆ ತಿಳಿಸಲು ಅವರ ಸ್ಮಾರಕಗಳನ್ನು ರಕ್ಷಿಸುವುದು ಅತ್ಯಗತ್ಯ. ಈ ಬಗ್ಗೆ ಭಾರತ ಮಹತ್ವದ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.
ಕನ್ನಡ ನಾಡಿಗೆ ಗಾಂಧೀಜಿ ಭೇಟಿ
ಅಷ್ಟಕ್ಕೂ ಮಹಾತ್ಮ ಗಾಂಧೀಜಿ 1915ರಲ್ಲಿ ಆಫ್ರೀಕಾದಿಂದ ಭಾರತಕ್ಕೆ ಮರಳಿದ ಬಳಿಕ, ಕೆಲವೇ ದಿನಗಳ ಅಂತರದಲ್ಲಿ ಕನ್ನಡ ನಾಡಿಗೂ ಭೇಟಿ ನೀಡಿದ್ದರು. ಗೋಪಾಲಕೃಷ್ಣ ಗೋಖಲೆಯವರ ಸೂಚನೆ ಹಿನ್ನೆಲೆ ದೇಶ ಪರ್ಯಟನೆ ಹೊರಟ ಅವರಿಗೆ ಕನ್ನಡನಾಡು ಕೂಡ ಕೈಬೀಸಿ ಕರೆದಿತ್ತು. 1915ರ ಮೇ 8ಕ್ಕೆ ಬೆಂಗಳೂರಿಗೆ ಪತ್ನಿ ಜೊತೆ ಆಗಮಿಸಿದ್ದ ಗಾಂಧೀಜಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಗೋಪಾಕೃಷ್ಣ ಗೋಖಲೆ ಅವರ ಭಾವಚಿತ್ರ ಅನಾವರಣ ಮಾಡಿದರು. ಈ ಮೂಲಕ ಕನ್ನಡಿಗರ ಇತಿಹಾಸದಲ್ಲೂ ಗಾಂಧೀಜಿ ಅವರ ನೆನಪು ಬೆರೆತು ಹೋಗಿದೆ.












Click it and Unblock the Notifications