ಪತ್ರಕರ್ತರ ಹತ್ಯೆ: ಭಾರತಕ್ಕೆ ಏಷ್ಯಾದಲ್ಲಿ 3ನೇ ಸ್ಥಾನ
ಪತ್ರಕರ್ತರ ಹತ್ಯೆ ವಿಚಾರದಲ್ಲಿ ಅಪಾಯಕಾರಿ ಎನಿಸಿರುವ ಭಾರತ. ವಿಶ್ವದಲ್ಲಿ 8ನೇ ಸ್ಥಾನ, ಏಷ್ಯಾದಲ್ಲಿ ಮೂರನೇ ಸ್ಥಾನ.
ನವದೆಹಲಿ, ಸೆಪ್ಟೆಂಬರ್ 6: ಅಚ್ಚರಿಯೆನಿಸಿದರೂ, ಇದು ಸತ್ಯ. ನೇರ, ನಿಷ್ಠರ ವರದಿಗಾರರಿಕೆಗೆ ಭಾರತದಲ್ಲಿ ಜೀವ ತೆರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಎಂಬ ಮಾತು ಕೇಳಿಬರುತ್ತಿದೆ.
ಭ್ರಷ್ಟಾಚಾರ, ಅವ್ಯವಸ್ಥೆ, ಹಗರಣಗಳ ವಿರುದ್ಧ ಲೇಖನಿ ಹಿಡಿದ ಅನೇಕ ವರದಿಗಾರರು ಸಾವನ್ನಪ್ಪಿದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಇದೇ ಕಾರಣಕ್ಕಾಗಿ ಏಷ್ಯಾದಲ್ಲೇ ಪತ್ರಕರ್ತರ ಪಾಲಿಗೆ ಡೆಡ್ಲಿಯೆಸ್ಟ್ ಎನಿಸಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳಲ್ಲಿ ಇರಾಕ್ ಹಾಗೂ ಪಾಕಿಸ್ತಾನಗಳಿವೆ. ಇನ್ನು, ವಿಶ್ವದ ಮಟ್ಟದಲ್ಲಿ ಹೇಳುವುದಾದರೆ, ಪತ್ರಕರ್ತರಿಗೆ ಅಪಾಯಕಾರಿ ಎನಿಸುವ ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ.

ಅಂತಾರಾಷ್ಟ್ರೀಯ ಪತ್ರಕರ್ತರ ಸಂಘಗಳ ಒಕ್ಕೂಟದ (ಐಎಫ್ ಜೆ) ಪ್ರಕಾರ, 2016ರಲ್ಲಿ ವಿಶ್ವದ ನಾನಾ ದೇಶಗಳಲ್ಲಿ ಸುಮಾರು 112 ಪತ್ರಕರ್ತರು ಹತ್ಯೆಯಾಗಿದ್ದಾರೆ.
ಈ ಪಟ್ಟಿಯಲ್ಲಿ ಆಫ್ಘಾನಿಸ್ತಾನ ಮೊದಲ ಸ್ಥಾನದಲ್ಲಿದೆ. 2016ರಲ್ಲಿ ಈ ದೇಶದಲ್ಲಿ ಹತ್ಯೆಯಾದ ಪತ್ರಕರ್ತರ ಸಂಖ್ಯೆ 13. ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಮೆಕ್ಸಿಕೋದ್ದು. ಇಲ್ಲಿ ಹತ್ಯೆಗೊಳಗಾದ ಪತ್ರಕರ್ತರ ಸಂಖ್ಯೆ 11. ಇದೇ ಪಟ್ಟಿಯ ಆನಂತರದ ಸ್ಥಾನಗಳಲ್ಲಿ, ಯೆಮೆನ್ (8), ಗ್ವಾಟೆಮಾಲಾ (6), ಸಿರಿಯಾ (6) ಇದ್ದು, 8ನೇ ಸ್ಥಾನವನ್ನು ಭಾರತ ಮತ್ತು ಪಾಕಿಸ್ತಾನ (ತಲಾ 5) ಹಂಚಿಕೊಂಡಿವೆ.












Click it and Unblock the Notifications