Unified Pension Scheme: ಏಕೀಕೃತ ಪಿಂಚಣಿ ಯೋಜನೆ ಜಾರಿ ಬಗ್ಗೆ ಮಹತ್ವದ ಮಾಹಿತಿ
Unified Pension Scheme: ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (NPS) ಒಂದು ಆಯ್ಕೆಯಾಗಿ ಏಕೀಕೃತ ಪಿಂಚಣಿ ಯೋಜನೆ (UPS)ಯನ್ನು ಆರಂಭಿಸಿದೆ. ಈ ಯೋಜನೆಯನ್ನು ಜನವರಿ 24ರಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ. ಹಾಗಾದರೆ ಇದು ಯಾರಿಗೆಲ್ಲಾ ಅನ್ವಯ ಆಗಲಿದೆ ಹಾಗೂ ಏನೆಲ್ಲಾ ಉಪಯೋಗಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯುಪಿಎಸ್ ಈಗಾಗಲೇ ಎನ್‌ಪಿಎಸ್ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯ ಆಗುತ್ತದೆ. ಸರ್ಕಾರಿ ನೌಕರರು NPS ಅಥವಾ UPS ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಅವಕಶವನ್ನು ಹೊಂದಿರುತ್ತಾರೆ. NPS ಅಡಿಯಲ್ಲಿ ಅರ್ಹರಾಗಿರುವ ಕೇಂದ್ರ ಸರ್ಕಾರಿ ನೌಕರರು ಈಗ NPS ಅಡಿಯಲ್ಲಿ ಏಕೀಕೃತ ಪಿಂಚಣಿ ಯೋಜನೆಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದಾರೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಹಳೆಯ ಪಿಂಚಣಿ ಯೋಜನೆಗೆ (OPS) ಹೆಚ್ಚಿನ ಬೇಡಿಕೆ ಇದ್ದಾಗ ಯುಪಿಎಸ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಹಳೆಯ ಪಿಂಚಣಿ ಯೋಜನೆಯಲ್ಲಿ, ನಿವೃತ್ತ ನೌಕರರಿಗೆ ಅವರ ಸಂಬಳದ ಶೇಕಡ 50ರಷ್ಟನ್ನು ಪಿಂಚಣಿಯಾಗಿ ನೀಡಲಾಗುತ್ತಿತ್ತು. ಯುಪಿಎಸ್ ಅಡಿಯಲ್ಲಿ, ಈಗ ಕೇಂದ್ರ ಉದ್ಯೋಗಿಗಳಿಗೆ ಸ್ಥಿರ ಪಿಂಚಣಿ ನೀಡಲಾಗುತತದೆ. ಇದು ಕಳೆದ 12 ತಿಂಗಳ ಸರಾಸರಿ ಮೂಲ ವೇತನದ ಶೇಕಡ 50 ರಷ್ಟು ಆಗಿರುತ್ತದೆ.
ಈ ಪಿಂಚಣಿ ಪಡೆಯಲು ಉದ್ಯೋಗಿ ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಉದ್ಯೋಗಿ ಸಾವನ್ನಪ್ಪಿದರೆ, ಕುಟುಂಬಕ್ಕೆ ನಿಗದಿತ ಪಿಂಚಣಿಯನ್ನು ಸಹ ನೀಡಲಾಗುತ್ತದೆ. ಇದು ಉದ್ಯೋಗಿ ಪಡೆಯುವ ಪಿಂಚಣಿಯ ಶೇಕಡ 60ರಷ್ಟು ಆಗಿರುತ್ತದೆ. ಅಲ್ಲದೆ, ಕನಿಷ್ಠ ಖಚಿತ ಪಿಂಚಣಿಯನ್ನು ಸಹ ನೀಡಲಾಗುವುದು. ಅಂದರೆ 10 ವರ್ಷಗಳ ಕಾಲ ಕೆಲಸ ಮಾಡುವ ಜನರಿಗೆ ಕನಿಷ್ಠ 10,000 ರೂಪಾಯಿ ಪಿಂಚಣಿ ಸಿಗುತ್ತದೆ.
ಏಕೀಕೃತ ಪಿಂಚಣಿ ಯೋಜನೆಯಡಿಯಲ್ಲಿ ಸೂಚ್ಯಂಕವನ್ನು ಸಹ ಸೇರಿಸಲಾಗಿದೆ. ಅಂದರೆ, ನಿವೃತ್ತ ನೌಕರರ ಪಿಂಚಣಿ ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚಾಗುತ್ತಲೇ ಇರುತ್ತದೆ. ಈ ಹೆಚ್ಚಳವನ್ನು ಪಿಂಚಣಿಗೆ ತುಟ್ಟಿ ಭತ್ಯೆಯಾಗಿ ಸೇರಿಸಲಾಗುತ್ತದೆ. ಇದನ್ನು ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI-W) ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ನಿವೃತ್ತಿ ಬಳಿಕ ಒಂದು ದೊಡ್ಡ ಮೊತ್ತವನ್ನು ಕೂಡ ನೀಡಲಾಗುತ್ತದೆ. ಇದರಿಂದ ಸುಮಾರು 23 ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.
NPS ವ್ಯಾಪ್ತಿಗೆ ಒಳಪಡುವ ಕೇಂದ್ರ ನೌಕರರಿಗೆ ಈ ಏಕೀಕೃತ ಪಿಂಚಣಿ ಯೋಜನೆಯನ್ನು ಸರ್ಕಾರವು ಜನವರಿ 25, 2025ರ ಶನಿವಾರದಂದು ಅಧಿಸೂಚನೆ ಮಾಡಿದೆ. NPS ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಬರುವ ಮತ್ತು ಅದರ ಅಡಿಯಲ್ಲಿ UPS ಆಯ್ಕೆಯನ್ನು ಆರಿಸಿಕೊಳ್ಳುವ ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ಅನ್ವಯಿಸುತ್ತದೆ. ಯುಪಿಎಸ್ ಆಯ್ಕೆ ಮಾಡುವ ಜನರು ಬೇರೆ ಯಾವುದೇ ನೀತಿ ರಿಯಾಯಿತಿಗಳು, ನೀತಿ ಬದಲಾವಣೆಗಳು, ಆರ್ಥಿಕ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.
ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು ಆಗಸ್ಟ್ 24, 2024ರಂದು ಯುಪಿಎಸ್ ಘೋಷಿಸಿದ ವೇಳೆ, ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಂಚಿಕೊಡಿದ್ದರು. ಹೊಸ ಪಿಂಚಣಿ ಯೋಜನೆಯಲ್ಲಿ (NPS), ಉದ್ಯೋಗಿ ತನ್ನ ಮೂಲ ವೇತನದ ಶೇಕಡ 10 ರಷ್ಟು ಕೊಡುಗೆ ನೀಡಬೇಕು ಮತ್ತು ಸರ್ಕಾರದ ಕೊಡುಗೆ ಶೇಕಡ 14ರಷ್ಟಾಗಿದೆ. ಏಪ್ರಿಲ್ 1, 2025ರಿಂದ ಯುಪಿಎಸ್ ಅನುಷ್ಠಾನಗೊಂಡ ಬಳಿಕ, ಸರ್ಕಾರದ ಈ ಕೊಡುಗೆ ಉದ್ಯೋಗಿಯ ಮೂಲ ವೇತನದ 18.5 ಪ್ರತಿಶತದಷ್ಟಿರುತ್ತದೆ. ಇದರ ಪ್ರಕಾರ, ಮೊದಲ ವರ್ಷದಲ್ಲಿ ಸರ್ಕಾರಿ ಖಜಾನೆಯ ಮೇಲಿನ ಹೆಚ್ಚುವರಿ ಹೊರೆ 6,250 ಕೋಟಿ ರೂಪಾಯಿಗಳಾಗಿರುತ್ತದೆ.












Click it and Unblock the Notifications