India Weather Alert: ವಾಯುಭಾರ ಕುಸಿತ, ಈ ಭಾಗಗಳಲ್ಲಿ ಮುಂದಿನ 7 ದಿನ ಧಾರಾಕಾರ ಮಳೆ ಎಚ್ಚರಿಕೆ
IMD Weather Alert: ದೇಶದ ವಾಯುವ್ಯ, ಮಧ್ಯ ಹಾಗೂ ಉತ್ತರ ಭಾಗದ ರಾಜ್ಯಗಳಲ್ಲಿ ಮುಂಗಾರು ಮಾರುತಗಳ ಹೆಚ್ಚು ಸಕ್ರಿಯವಾಗಿವೆ. ಅರಬ್ಬಿ ಸಮುದ್ರದ ಉತ್ತರ ಭಾಗ, ಗುಜರಾತ್, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನ ಸೇರಿದಂತೆ ಆ ಭಾಗಗಳಿಗೆ ಮುಂಗಾರು ವಿಸ್ತರಣೆ ಆಗಲು ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಸಮುದ್ರ ಮಟ್ಟದಲ್ಲಿ ಪೂರಕ ವಾತಾವರಣ ನಿರ್ಮಾಣಗೊಂಡಿದೆ. ಪರಿಣಾಮ ಮುಂದಿನ 7 ದಿನ ಭಾರೀಯಿಂದ ಅತೀ ಭಾರೀ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ಕೊಟ್ಟಿದೆ.
ಐಎಂಡಿ ಪ್ರಕಾರ, ಇಂದು ಜುಲೈ 6 ರಿಂದ 12 ರವರೆಗೆ ದೇಶದ ಅನೇಕ ರಾಜ್ಯಗಳಲ್ಲಿ ಧಾರಾಕಾರ ಮುಂಗಾರು ಮಳೆ ಅಬ್ಬರಿಸಲಿದೆ. ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಜಾರ್ಖಂಡ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಒಡಿಶಾ ಕರಾವಳಿ ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮುಂದಿನ ಎರಡು ದಿನ ಈ ಭಾಗಗಳಲ್ಲಿ ಪ್ರತಿ ಗಂಟೆಗೆ 40 ರಿಂದ 60 ಕಿಲೋ ಮೀಟರ್ ವೇಗದಲ್ಲಿ ಜೋರು ಗಾಳಿ ಬೀಸಲಿದೆ. ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

ಹವಾಮಾನ ವೈಪರೀತ್ಯಗಳಿಂದ ಮುಂಗಾರು ಚುರುಕು
ಇನ್ನೂ ದೆಹಲಿ ಮತ್ತು ಮುಂಬೈ ಭಾಗದಲ್ಲಿ ಮುಂಗಾರು ಅಧಿಕೃತ ಪ್ರವೇಶ ಬೆನ್ನಲ್ಲೇ ಮಳೆ ಅಬ್ಬರ ಜೋರಾಗಿದೆ. ರೈಲ್ವೆ ಹಳಿ, ಬಸ್ ನಿಲ್ದಾಣ, ತಗ್ಗು ಪ್ರದೇಶಗಳು, ರಸ್ತೆಗಳಲ್ಲಿ ನೀರು ನಿಂತುಕೊಂಡಿದೆ. ನಿರಂತರವಾಗಿ ಸುರಿದ ಧಾರಾಕಾರ ಮಳೆಯು ಮುಂಬೈ ಜನರ ನಿದ್ದೆಗೆಡಿಸಿದೆ. ಅಂಡಮಾನ್, ನಿಕೋಬಾರ್, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಸಮುದ್ರಮಟ್ಟದಲ್ಲಿ ವಾಯು ಚಂಡಮಾರುತ ಮತ್ತು ವಾಯುಭಾರ ಕುಸಿತ ಸಂಭವಿಸಿದೆ. ಈ ಹವಾಮಾನ ಬದಲಾವಣೆಯು ದೇಶಾದ್ಯಂತ ಮುಂಗಾರು ವಿಸ್ತರಣೆ ಹಾಗೂ ಭಾರೀ ಮಳೆಯ ಆಗಮನಕ್ಕೆ ಕಾರಣವಾಗಿದೆ ಎಂದು ಐಎಂಡಿ ತಿಳಿಸಿದೆ.
ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಜಮ್ಮು-ಕಾಶ್ಮೀರದಲ್ಲಿ ಜುಲೈ 12 ರವರೆಗೆ ಸಾಧರಣದಿಂದ ಭಾರೀ ಮಳೆ, ಆಗಾಗ ಬಿರುಗಾಳಿ ಸಹಿತ ಮಳೆ ಆಗಲಿದೆ. ನಾಳೆ ಮಂಗಳವಾರ (ಜುಲೈ 7) ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದಲ್ಲಿ, ರಾಜಸ್ಥಾನ ಪೂರ್ವ ಭಾಗದಲ್ಲಿ ಜುಲೈ 9 ರವರೆಗೆ, ಉತ್ತರ ಪ್ರದೇಶದಲ್ಲಿ ಜುಲೈ 10ರಿಂದ ಎರಡು ದಿನ ಅತ್ಯಧಿಕ ಮಳೆ ಸಂಭವವಿದೆ.
ಇದೇ ಅವಧಿಯಲ್ಲಿ ಛತ್ತೀಸಗಢ, ಮಧ್ಯಪ್ರದೇಶ, ವಿದರ್ಭ ವ್ಯಾಪ್ತಿಯಲ್ಲಿ ಇಂದಿನಿಂದಲೂ ಬಿಟ್ಟು ಬಿಡದೇ ವ್ಯಾಪಕ ಮಳೆ ಆಗುತ್ತಿದೆ. ಛತ್ತೀಸ್‌ಗಢದ ಅನೇಕ ಕಡೆಗಳಲ್ಲಿ ಭಾರಿ ಸುರಿಯುತ್ತಿದ್ದು, ಸ್ಥಳೀಯರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಗುಜರಾತ್ ಭಾಗದ ಕರಾವಳಿಯಿಂದ ಉತ್ತರ ಪ್ರದೇಶದ ವರೆಗೆ ಬಿರುಗಾಳಿ ಪ್ರಭಾವ ಹೆಚ್ಚಿರಲಿದೆ ಎಂದು ಹವಾಮಾನ ವಿಜ್ಞಾನಿಗಳು ತಿಳಿಸಿದ್ದಾರೆ.
ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆ
ಕೊಂಕಣ, ಗೋವಾ ಹಾಗೂ ಮಧ್ಯ ಮಹಾರಾಷ್ಟ್ರ ರಾಜ್ಯ ಹಾಗೂ ದಕ್ಷಿಣ ಭಾರತ ಪ್ರಮುಖ ಕರಾವಳಿ ರಾಜ್ಯಗಳಾದ ಕರ್ನಾಟಕ, ಕೇರಳ, ಕೇರಳ ಭಾಗದ ಅನೇಕ ಕಡೆಗಳಲ್ಲಿ ಜುಲೈ 11 ರವರೆಗೆ ವ್ಯಾಪಕ ಮಳೆ ನಿರೀಕ್ಷೆ ಇದೆ. ಕರ್ನಾಟಕ ಒಳನಾಡಿನ ಪಶ್ಚಿಮ ಘಟ್ಟಗಳ ಸಾಲು, ಕರಾವಳಿ ಜಿಲ್ಲೆಗಳು, ಆಂಧ್ರಪ್ರದೇಶದ ಕರಾವಳಿ ಭಾಗ, ತೆಲಂಗಾಣದ ಒಳನಾಡು ಭಾಗಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆ ದಾಖಲಾಗಿದೆ.
ಇನ್ನೂ ರಾಯಲಸೀಮೆ ಮತ್ತು ತಮಿಳುನಾಡಿನಲ್ಲಿ ಜುಲೈ 12 ರವರೆಗೆ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಜುಲೈ 10 ರವರೆಗೆ ಕರ್ನಾಟಕದಾದ್ಯಂತ ಗಂಟೆಗೆ 40 ರಿಂದ 60 ಕಿಲೋ ಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ರಾಜ್ಯದ ಮೀನುಗಾರರು ಮೀನುಗಾರಿಕೆ ಇಳಿಯದಂತೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.














Click it and Unblock the Notifications