ಈ ರಾಜ್ಯಗಳಲ್ಲಿ ಆಗಸ್ಟ್ 23ರವರೆಗೂ ಭಾರೀ ಮಳೆ; IMD
ನವದೆಹಲಿ, ಆಗಸ್ಟ್ 20: ಕೆಲವು ದಿನಗಳಿಂದ ವಿರಾಮ ಪಡೆದುಕೊಂಡಿದ್ದ ನೈಋತ್ಯ ಮುಂಗಾರು ಗುರುವಾರದಿಂದ ಮತ್ತೆ ಚುರುಕಾಗಿದೆ. ಮುಂಗಾರು ಪ್ರಭಾವ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಿ ಅಧಿಕ ಮಳೆಯಾಗುವುದಾಗಿ ಗುರುವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲವು ರಾಜ್ಯಗಳಲ್ಲಿ ಆಗಸ್ಟ್ 19ರಿಂದ ಆರಂಭವಾಗಿ ಆಗಸ್ಟ್ 23ರವರೆಗೂ ವ್ಯಾಪಕ ಮಳೆಯಾಗುವುದಾಗಿ ಶುಕ್ರವಾರ ತಿಳಿಸಿದೆ.
ಬಿಹಾರ, ಉತ್ತರ ಪ್ರದೇಶದ ಪೂರ್ವ ಭಾಗಗಳು ಹಾಗೂ ಉತ್ತರಾಖಂಡದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ವಾಯವ್ಯ ಭಾರತ ಹಾಗೂ ಬಿಹಾರದಲ್ಲಿ ಕ್ರಮೇಣವಾಗಿ ಮಳೆ ಚಟುವಟಿಕೆ ಅಧಿಕವಾಗಲಿದೆ. ಬಿಹಾರ, ಉತ್ತರ ಪ್ರದೇಶದ ಪೂರ್ವ ಭಾಗ, ಉತ್ತರಾಖಂಡದಲ್ಲಿ ಆಗಸ್ಟ್ 23ರವರೆಗೂ ಸಾಧಾರಣದಿಂದ ವ್ಯಾಪಕ ಮಳೆಯಾಗಲಿದೆ. ಉತ್ತರಾಖಂಡದಲ್ಲಿ ಆಗಸ್ಟ್ 19ರಂದು ಹಾಗೂ 20ರಂದು, ಉತ್ತರ ಪ್ರದೇಶದಲ್ಲಿ ಆಗಸ್ಟ್ 20ರಂದು, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ, ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಢ ಹಾಗೂ ರಾಜಸ್ಥಾನದ ಪೂರ್ವ ಭಾಗದಲ್ಲಿ ಆಗಸ್ಟ್ 20ರಿಂದ 23ರವರೆಗೂ ಅಧಿಕ ಮಳೆ ಬೀಳಲಿದೆ. ಆಗಸ್ಟ್ 20 ಹಾಗೂ 21ರಂದು ವ್ಯಾಪಕ ಮಳೆಯಾಗಲಿದೆ ಎಂದು ತಿಳಿಸಿದೆ.
ದೇಶದ ಕೇಂದ್ರ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗಲಿದೆ. ಗುಜರಾತ್, ಕೊಂಕಣ ಹಾಗೂ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಆಗಸ್ಟ್ 21ರವರೆಗೂ ಮಳೆಯಾಗಲಿದೆ ಎಂದು ತಿಳಿಸಿದೆ.
ಆಂಧ್ರದ ಕರಾವಳಿ, ತೆಲಂಗಾಣ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೂಡ ಇದರ ಪ್ರಭಾವ ಮುಂದುವರೆಯಲಿದೆ ಎಂದು ಹೇಳಿದೆ.
ಆನಂತರ ಈ ಪ್ರದೇಶಗಳಲ್ಲಿ ಮಳೆ ಕ್ರಮೇಣವಾಗಿ ತಗ್ಗಲಿದೆ ಎಂದು ತಿಳಿಸಿದೆ. ವಾಯವ್ಯ ರಾಜ್ಯಗಳಲ್ಲಿ ಕೂಡ ಮಳೆಯಾಗಲಿದೆ. ಸಿಕ್ಕಿಂ, ಪಶ್ಚಿಮ ಬಂಗಾಳದಲ್ಲಿ ಮಳೆಯಾಗಲಿದೆ. ಮುಂದಿನ ಎರಡು ದಿನಗಳಲ್ಲಿ ಮಳೆ ತೀವ್ರತೆ ಕಡಿಮೆಯಾಗಿ, ಆಗಸ್ಟ್ 22ರ ನಂತರ ಮತ್ತೆ ಅಧಿಕವಾಗಲಿದೆ ಎಂದು ಮಾಹಿತಿ ನೀಡಿದೆ.
ಬಿಹಾರದ ದಕ್ಷಿಣ ಭಾಗದಲ್ಲಿ ಚಂಡಮಾರುತದ ಪ್ರಭಾವದಿಂದ ಅಧಿಕ ಮಳೆಯಾಗಲಿದ್ದು, ಮುಂದಿನ ಮೂರು ದಿನಗಳ ನಂತರ ಆ ಪ್ರಭಾವ ತಗ್ಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹೇಳಿದೆ.

ದೇಶದಲ್ಲಿ ಮತ್ತೆ ನೈಋತ್ಯ ಮುಂಗಾರು ಚುರುಕಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಗುರುವಾರ ನೀಡಿದೆ. ಆಗಸ್ಟ್ ಮೊದಲ ವಾರದಲ್ಲಿ ಕ್ಷೀಣಿಸಿದ್ದ ಮುಂಗಾರು ಇದೀಗ ಮತ್ತೆ ಚುರುಕಾಗಲಿದೆ. ಮಳೆಯಿಂದ ಬಿಡುವು ಪಡೆದುಕೊಂಡಿದ್ದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ ಚಟುವಟಿಕೆ ಆರಂಭವಾಗಲಿದೆ ಎಂದು ತಿಳಿಸಿದೆ. ಆಗಸ್ಟ್ 19ರಿಂದ ಉತ್ತರ ಭಾರತದಲ್ಲಿ ಮುಂಗಾರು ಮತ್ತೆ ಚುರುಕುಗೊಳ್ಳಲಿದೆ ಎಂದಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
ಆಗಸ್ಟ್ ತಿಂಗಳಿನಲ್ಲಿ ವಿರಾಮದ ನಂತರ ದಕ್ಷಿಣ ಭಾರತದಲ್ಲಿ ಮತ್ತೆ ಮುಂಗಾರು ಚಟುವಟಿಕೆ ಆರಂಭವಾಗಲಿದೆ. ಮಳೆ ಬಿರುಸುಪಡೆಯಲಿದೆ ಎಂದು ಗುರುವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದೊಂದಿಗೆ ಮುಂಗಾರು ಕೂಡ ಮತ್ತೆ ಚುರುಕು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ. ಜುಲೈ ದ್ವಿತೀಯಾರ್ಧದಲ್ಲಿ ಭಾರೀ ಮಳೆಯಾದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮಳೆ ಚಟುವಟಿಕೆ ಕ್ಷೀಣಿಸಿತ್ತು. ಇದೀಗ ಮತ್ತೆ ಚುರುಕುಗೊಳ್ಳಲಿರುವುದಾಗಿ ಇಲಾಖೆ ಮುನ್ಸೂಚನೆ ನೀಡಿದೆ. ದೇಶದಲ್ಲಿ ಮುಂಗಾರು ಪ್ರಭಾವ ಮುಂದುವರೆದಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಆಂಧ್ರದ ಕರಾವಳಿ ಪ್ರದೇಶಗಳು, ತೆಲಂಗಾಣ, ಮಧ್ಯಪ್ರದೇಶದಲ್ಲಿ ಕೆಲವು ದಿನ ಮಳೆಯಾಗುವುದಾಗಿ ಮಾಹಿತಿ ನೀಡಿದೆ.












Click it and Unblock the Notifications