ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ
ನವದೆಹಲಿ, ಆಗಸ್ಟ್ 05: ಉತ್ತರ ಭಾರತದಲ್ಲಿ ಮುಂಗಾರು ಪ್ರಭಾವ ಮುಂದುವರೆದಿದ್ದು, ಕೆಲವು ರಾಜ್ಯಗಳಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಬುಧವಾರ ಕೂಡ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.
Recommended Video
ಹಲವು ರಾಜ್ಯಗಳಲ್ಲಿ ಮುಂದಿನ ಐದು ದಿನಗಳವರೆಗೂ ಮಳೆ ಮುಂದುವರೆಯುವ ಸೂಚನೆ ನೀಡಲಾಗಿದೆ. ಆದರೆ ಉತ್ತರ ಭಾರತದಲ್ಲಿ ಗುರುವಾರದ ನಂತರ ಮಳೆ ಕ್ಷೀಣಿಸುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದೇಶದ ಮಧ್ಯ ಭಾಗಗಳಲ್ಲಿ ಮಳೆ ಕ್ಷೀಣಿಸಲಿದೆ ಎಂದು ತಿಳಿಸಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಗುಜರಾತ್‌ನಲ್ಲಿ ಮುಂದಿನ 3-4 ದಿನಗಳ ಕಾಲ ಸಣ್ಣ ಪ್ರಮಾಣದಲ್ಲಿ ಮಳೆ ಮುಂದುವರೆಯುವುದಾಗಿಯೂ ತಿಳಿಸಿದೆ.
ಆಗಸ್ಟ್ 7ರಿಂದ ದೇಶದ ವಾಯವ್ಯ ಭಾಗದಲ್ಲಿ ಅಧಿಕ ಮಳೆಯಾಗುವುದಾಗಿ ಮುನ್ಸೂಚನೆ ನೀಡಲಾಗಿದೆ. ಮುಂದಿನ ಐದು ದಿನಗಳ ಕಾಲ ಪೂರ್ವ ರಾಜಸ್ಥಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಮಳೆ ಮುಂದುವರೆಯುವುದು. ಗುರುವಾರ ಈ ಭಾಗಗಳಲ್ಲಿ ಅತಿ ಹೆಚ್ಚಿನ ಮಳೆಯಾಗುವುದು ಎಂದು ತಿಳಿಸಿದೆ. ಮುಂದೆ ಓದಿ...

ಈ ರಾಜ್ಯಗಳಲ್ಲಿ ಇಂದು ಅತಿ ಹೆಚ್ಚು ಮಳೆ ಸಂಭವ
ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹೆಚ್ಚಿನ ಮಳೆಯಾಗುವುದು. ಹಿಮಾಚಲದಲ್ಲಿ ಎರಡು ದಿನಗಳ ನಂತರ ಮಳೆ ತಗ್ಗುವುದು ಎಂದು ಇಲಾಖೆ ತಿಳಿಸಿದೆ. ಉತ್ತರಾಖಂಡದಲ್ಲಿ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದ್ದು, ಗುರುವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಭಾರತದಲ್ಲಿ ಗುರುವಾರ ಹೆಚ್ಚಿನ ಮಳೆ ದಾಖಲಾಗುವುದು. ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳದಲ್ಲಿಯೂ ಗುರುವಾರ ಅಧಿಕ ಮಳೆಯಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 7ರಿಂದ ಈಶಾನ್ಯ ರಾಜ್ಯಗಳಲ್ಲಿ ಮಳೆ ಹೆಚ್ಚಾಗುವುದು. ಆಗಸ್ಟ್ 8ರಂದು ಅಧಿಕ ಪ್ರಮಾಣದ ಮಳೆಯಾಗುವುದು ಎಂದು ಮುನ್ಸೂಚನೆ ನೀಡಲಾಗಿದೆ.
ರಾಜಸ್ಥಾನದಲ್ಲಿ ಪ್ರವಾಹ ಪರಿಸ್ಥಿತಿ
ಕೆಲವು ದಿನಗಳಿಂದ ರಾಜಸ್ಥಾನದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಹಲವು ಗ್ರಾಮಗಳು ಜಲಾವೃತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೋಟಾ, ಬರಾನ್, ಬಂಡಿ, ಜಲಾವರ್‌ನಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ. ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಎನ್‌ಡಿಆರ್‌ಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ನಿರಾಶ್ರಿತರಿಗೆ ಪರಿಹಾರ ಕಲ್ಪಿಸಲಾಗುತ್ತಿದೆ.

ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಮಳೆ
ಮಹಾರಾಷ್ಟ್ರ, ಕರ್ನಾಟಕ, ಗುಜರಾತ್‌ನಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಸಣ್ಣ ಪ್ರಮಾಣದಲ್ಲಿ ಮಳೆ ಮುಂದುವರೆಯಲಿದೆ ಎಂದು ಸೂಚನೆ ನೀಡಲಾಗಿದೆ. ಕೇರಳ, ತಮಿಳುನಾಡು, ಆಂಧ್ರದಲ್ಲಿ ಚದುರಿದ ಮಳೆಯಾಗುವುದು. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರಾ, ಜಾರ್ಖಂಡ್, ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ, ಜಮ್ಮು ಕಾಶ್ಮೀರ, ಚಂಡೀಗಢ, ಹರಿಯಾಣ, ಲಡಾಖ್ ಮುಂತಾದೆಡೆ ಸಾಧಾರಣ ಮಳೆಯಾಗುವುದಾಗಿ ತಿಳಿಸಿದೆ.

ರಾಜ್ಯದ ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಗುರುವಾರ ಮತ್ತೆ ಮುಂಗಾರು ಚುರುಕು ಪಡೆಯಲಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಸೂಚನೆ ನೀಡಲಾಗಿದೆ.
ಆಗಸ್ಟ್ 5ರಂದು ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗಸ್ಟ್ 8ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇದ್ದು, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ತಿಳಿಸಲಾಗಿದೆ.











Click it and Unblock the Notifications