ಬೆಂಗಳೂರಲ್ಲಿ ಭೂಗಳ್ಳರ ಬುಡಕ್ಕೆ ಬಾಂಬ್, 34.17 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಒತ್ತುವರಿ ತೆರವು!
ಬೆಂಗಳೂರು ಬೆಳೆದಂತೆ ಭೂಮಿಗೆ ಭಾರಿ ಬೆಲೆ ಬರುತ್ತಿದ್ದು, ಚಿನ್ನವನ್ನೂ ಮೀರಿಸಿ ಭೂಮಿ ಬೆಲೆ ಬೆಂಗಳೂರಿನಲ್ಲಿ ಏರಿಕೆ ಕಾಣುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಒತ್ತುವರಿ ಮಾಡಿ ಭೂಮಿ ಗುಳುಂ ಮಾಡುವ ಭೂಗಳ್ಳರ ಕಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ ನಮ್ಮ ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಒತ್ತುವರಿ ತೆರವು ಮಾಡಲಾಗಿದ್ದು, ಇದೀಗ ಮತ್ತೆ 34.17 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಒತ್ತುವರಿ ತೆರವು ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮಹತ್ವದ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸುಮಾರು 34.17 ಕೋಟಿ ರೂಪಾಯಿ ಮೌಲ್ಯದ ಸರ್ಕಾರದ ಆಸ್ತಿ ವಶಕ್ಕೆ ಪಡೆಯಲಾಗಿದೆ. 12 ಎಕರೆ 0.25 ಗುಂಟೆ ಸರ್ಕಾರಿ ಜಮೀನು ಮರಳಿ ಸರ್ಕಾರದ ವಶಕ್ಕೆ ಸಿಕ್ಕಿದೆ. ಬೆಂಗಳೂರು ನಗರದಲ್ಲಿ ವಿವಿಧ ತಾಲೂಕುಗಳ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಗೋಮಾಳ, ಕುಂಟೆ, ಸ್ಮಶಾನ, ಗುಂಡುತೋಪು, ಸರ್ಕಾರಿ ಕಟ್ಟೆ, ಸರ್ಕಾರಿ ಕರೆ ಮತ್ತು ಸರ್ಕಾರಿ ಊರ ಮುಂದಲ ತಿಪ್ಪೆಗಳ ಒತ್ತುವರಿ ತೆರವು ಮಾಡಿಸಿದ್ದಾರೆ.

ಕೋಟಿ ಕೋಟಿ ಬೆಲೆಬಾಳುವ ಜಮೀನು
ಬಿದರಹಳ್ಳಿ ಹೋಬಳಿಯ ಯರಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ 20ರಲ್ಲಿ ಗೋಮಾಳವನ್ನೇ ಒತ್ತುವರಿ ಮಾಡಿಕೊಳ್ಳಲಾಗಿತ್ತು, ಇದೀಗ ಅದನ್ನ ತೆರವು ಮಾಡಲಾಗಿದೆ. ಒಟ್ಟು ವಿಸ್ತೀರ್ಣ 1 ಎಕರೆ 0.20 ಗುಂಟೆ ಒತ್ತುವರಿ ತೆರವು ಮಾಡಲಾಗಿದೆ. ಈ ಭೂಮಿಯ ಒಟ್ಟು ಮೌಲ್ಯವೇ 6 ಕೋಟಿ ರೂಪಾಯಿ ಆಗಿದೆ. ಹಾಗೂ ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹೋಬಳಿ ಗುಂಜೂರು ಗ್ರಾಮದ ಸ.ನಂ 124ರ ಕುಂಟೆ ಒತ್ತುವರಿ ತೆರವು ಮಾಡಲಾಗಿದೆ. ಈ ಭಾಗದಲ್ಲೂ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಜಮೀನು ರಕ್ಷಣೆ ಮಾಡಲಾಗಿದೆ.
ವರ್ತೂರು ಹೋಬಳಿ ಹಾಲನಾಯಕನ ಹಳ್ಳಿಯಲ್ಲಿ ಸ್ಮಶಾನ ಒತ್ತುವರಿ ತೆರವುಗೊಳಿಸಿ 0.04 ಗುಂಟೆ ಜಮೀನು ವಶಕ್ಕೆ ಪಡೆಯಾಗಿದ್ದು, ಇದರ ಅಂದಾಜು ಮೌಲ್ಯ 1.60 ಕೋಟಿ ರೂಪಾಯಿ ಎನ್ನಲಾಗಿದೆ. ಹಾಗೂ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ತಿಗಳಚೌಡೇನ ಹಳ್ಳಿ ಗ್ರಾಮದಲ್ಲಿ ಸುಮಾರು 0.02 ಗುಂಟೆ ಜಮೀನು ವಶಕ್ಕೆ ಪಡೆಯಲಾಗಿದೆ. ಹಾಗೇ ಇನ್ನೂ ಅನೇಕ ಭಾಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
34 ಕೋಟಿ ರೂಪಾಯಿ ಜಮೀನು ವಶಕ್ಕೆ
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಮಾದಾಪಟ್ಟಣ ಗ್ರಾಮದಲ್ಲಿ 1.23 ಕೋಟಿ ರೂಪಾಯಿ ಮೌಲ್ಯದ ಜಮೀನು ವಶಕ್ಕೆ ಪಡೆಯಲಾಗಿದೆ. ಚಿಕ್ಕನಹಳ್ಳಿಯಲ್ಲಿ ಸರ್ಕಾರಿ ಕಟ್ಟೆ ಒತ್ತುವರಿಯನ್ನು ತೆರವು ಮಾಡಲಾಗಿದ್ದು, 0.69 ಕೋಟಿ ಮೌಲ್ಯದ ಜಮೀನು ವಶಕ್ಕೆ ಪಡೆಯಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ಹಲವು ಕಡೆ ಕಾರ್ಯಾಚರಣೆ ನಡೆಸಿ ಸುಮಾರು 34.17 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಒತ್ತುವರಿ ತೆರವುಗೊಳಿಸಲಾಗಿದೆ.












Click it and Unblock the Notifications