ಬರಡು ಗಣಿ ಪ್ರದೇಶವನ್ನ ಹಸಿರು ಕಾಡನ್ನಾಗಿಸಿದ IFS ಅಧಿಕಾರಿ: ದೀಪಿಕಾ ಅವರ ಪರಿಸರ ಪ್ರೇಮಕ್ಕೆ ಒಲಿದ ಎಕೋ ವಾರಿಯರ್ ಅವಾರ್ಡ್
ಗಣಿಗಾರಿಕೆಯಿಂದ ಹಾಳಾಗಿ, ಸಂಪೂರ್ಣವಾಗಿ ಬರಡಾಗಿದ್ದ ಭೂಮಿಯನ್ನ ಮತ್ತೆ ದಟ್ಟವಾದ ಹಸಿರು ಕಾಡನ್ನಾಗಿ ಪರಿವರ್ತಿಸುವುದು ಅತ್ಯಂತ ಸವಾಲಿನ ಕೆಲಸ ಎನ್ನವುದು ಎಲ್ಲರಿಗೂ ಗೊತ್ತೇಯಿದೆ. ಆದರೆ, 2020ರ ಬ್ಯಾಚ್‌ನ ಮಧ್ಯಪ್ರದೇಶ ಕೇಡರ್‌ನ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಎಸ್. ದೀಪಿಕಾ ಅವರು ಈ ಅಸಾಧ್ಯವಾದ ಕೆಲಸವನ್ನಾ ಸಾಧಿಸಿ ತೋರಿಸಿದ್ದಾರೆ.
ಹೌದು ನೋಡಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಗಣಿ ಪ್ರದೇಶಗಳಲ್ಲಿ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು, ಸುಮಾರು 1,500 ಹೆಕ್ಟೇರ್ ಗಣಿಗಾರಿಕೆ ಪ್ರದೇಶಕ್ಕೆ ಮರುಜೀವ ನೀಡಿದ್ದಾರೆ. ಇವರ ಈ ಅಪ್ರತಿಮ ಪರಿಸರ ಸೇವೆಗೆ 'ಎಕೋ ವಾರಿಯರ್ ಅವಾರ್ಡ್ಸ್ 2026' ರ ಪ್ರತಿಷ್ಠಿತ ಪರಿಸರ ಸಂರಕ್ಷಣೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ಮಧ್ಯಪ್ರದೇಶ ರಾಜ್ಯ ಅರಣ್ಯ ವಿಕಾಸ ನಿಗಮದ ಛಿಂದ್ವಾರಾ ಯೋಜನಾ ವಿಭಾಗದ ವಿಭಾಗೀಯ ವ್ಯವಸ್ಥಾಪಕರಾಗಿರುವ ಎಸ್. ದೀಪಿಕಾ, ವೆಸ್ಟರ್ನ್ ಕೋಲ್ಡ್‌ಫೀಲ್ಡ್ಸ್ ಲಿಮಿಟೆಡ್ ವ್ಯಾಪ್ತಿಯ ಕಲ್ಲಿದ್ದಲು ಗಣಿಗಾರಿಕೆ ಪ್ರದೇಶಗಳಲ್ಲಿ ಪರಿಸರ ಮರುಸ್ಥಾಪನೆ ಕೆಲಸವನ್ನಾ ಕೈಗೆತ್ತಿಕೊಂಡರು.
ತೆರೆದ ಗಣಿಗಾರಿಕೆಯಿಂದಾಗಿ ಮಣ್ಣಿನ ಫಲವತ್ತತೆ ಸಂಪೂರ್ಣವಾಗಿ ನಾಶವಾಗಿ, ಗುಡ್ಡಗಳಂತೆ ತ್ಯಾಜ್ಯ ಮಣ್ಣು ಗುಡ್ಡೆಯಾಗಿರುತ್ತಿತ್ತು. ಇಂತಹ ಪ್ರದೇಶಗಳಲ್ಲಿ ಗಿಡ ನೆಡುವುದು ಅತ್ಯಂತ ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ಮಣ್ಣು ಕುಸಿಯುವ ಭೀತಿ ಸಹ ಇರುತ್ತಿತ್ತು.
ಆದರೆ, ದೀಪಿಕಾ ಅವರ ನೇತೃತ್ವದ ತಂಡ ಈ ಮಣ್ಣಿನ ಗುಡ್ಡೆಗಳನ್ನ ವೈಜ್ಞಾನಿಕವಾಗಿ ಸಮತಟ್ಟು ಮಾಡಿ, ಬೆಂಚುಗಳ ಆಕಾರದಲ್ಲಿ ವಿನ್ಯಾಸಗೊಳಿಸಿ ಗಿಡ ನೆಡಲು ಯೋಗ್ಯವಾದ ವಾತಾವರಣವನ್ನ ನಿರ್ಮಿಸಿದರು.
ಮಿಯಾವಾಕಿ ಪದ್ಧತಿ ಅಳವಡಿಕೆ
ಐಎಫ್‌ಎಸ್ ಅಧಿಕಾರಿ ಎಸ್. ದೀಪಿಕಾ ಅವರು ಕೇವಲ ದಾಖಲೆಗಾಗಿ ಗಿಡ ನೆಡುವುದಕ್ಕಷ್ಟೇ ಸೀಮಿತವಾಗದೆ, ಸುಸ್ಥಿರ ಕಾಡು ಬೆಳೆಸುವತ್ತ ಹೆಚ್ಚಿನ ಗಮನ ಹರಿಸಿದರು. ಇದಕ್ಕಾಗಿ ಅವರು ವೇಗವಾಗಿ ಬೆಳೆಯುವ ವಿದೇಶಿ ತಳಿಗಳ ಮೊರೆ ಹೋಗುವ ಬದಲಿಗೆ, ಸ್ಥಳೀಯ ಹವಾಮಾನಕ್ಕೆ ಒಗ್ಗಿಕೊಳ್ಳುವ ಸ್ಥಳೀಯ ಸಸ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರು.
ಮಹಾರಾಷ್ಟ್ರದ ಸಾವ್ನೇರ್ ಪ್ರದೇಶದಲ್ಲಿ ಜನಪ್ರಿಯ 'ಮಿಯಾವಾಕಿ ಪದ್ಧತಿ' ಮೂಲಕ ಪ್ರತಿ ಹೆಕ್ಟೇರ್‌ಗೆ ಬರೋಬ್ಬರಿ 30,000 ಗಿಡಗಳನ್ನ ದಟ್ಟವಾಗಿ ನೆಡಲಾಗಿದೆ. ಈ ವಿಧಾನದಿಂದ ಗಿಡಗಳು ಅತ್ಯಂತ ವೇಗವಾಗಿ ಬೆಳೆದು ಹಸಿರು ಹೊದಿಕೆ ನಿರ್ಮಾಣವಾಗುತ್ತಿದೆ. ನಿರಂತರ ಮೇಲ್ವಿಚಾರಣೆ ಹಾಗೂ ಕಾಳಜಿಯಿಂದಾಗಿ ನೆಟ್ಟ ಗಿಡಗಳಲ್ಲಿ ಶೇ. 80ರಷ್ಟು ಗಿಡಗಳು ಜೀವಂತವಾಗಿ ಉಳಿದು ಬೆಳೆಯುತ್ತಿರುವುದು ಈ ಯೋಜನೆಯ ಅತಿದೊಡ್ಡ ಯಶಸ್ಸಾಗಿದೆ.
150 ಕೋಟಿ ರೂ. ಪರಿಸರ ಯೋಜನೆ ಹಾಗೂ ಮಹಿಳೆಯರಿಗೆ ಉದ್ಯೋಗ
ದೀಪಿಕಾ ಅವರ ಈ ಪರಿಸರ ಕಾಳಜಿಯ ಯೋಜನೆಯಿಂದ ಪ್ರಕೃತಿಗೆ ಮಾತ್ರವಲ್ಲ, ಸ್ಥಳೀಯ ಜನರಿಗೂ ಆರ್ಥಿಕವಾಗಿ ಲಾಭವಾಗಿದೆ. ಗಿಡ ನೆಡುವ, ನೀರುಣಿಸುವ ಹಾಗೂ ಪೋಷಿಸುವ ಕೆಲಸಕ್ಕೆ ಈ ಭಾಗದ ಗ್ರಾಮೀಣ ಹಾಗೂ ಗಣಿಗಾರಿಕೆ ಬಾಧಿತ ಪ್ರದೇಶದ ಮಹಿಳೆಯರನ್ನ ತೊಡಗಿಸಿಕೊಳ್ಳುವ ಮೂಲಕ ಅವರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
ಇವರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸುಮಾರು 150 ಕೋಟಿ ರೂಪಾಯಿ ಮೊತ್ತದ ಐದು ವರ್ಷಗಳ ಗಣಿ-ಪ್ರದೇಶ ಪುನರ್ವಸತಿ ಕಾರ್ಯಕ್ರಮವನ್ನ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಈ ಹಸಿರು ಕ್ರಾಂತಿಯಿಂದಾಗಿ ವಾರ್ಷಿಕವಾಗಿ ಅಂದಾಜು 7,000 ಟನ್ ಇಂಗಾಲದ ಡೈಆಕ್ಸೈಡ್ (CO2) ವಾತಾವರಣದಿಂದ ಹೀರಲ್ಪಡುತ್ತಿದೆ. ಇದರಿಂದ ಧೂಳಿನ ಮಾಲಿನ್ಯ ಕಡಿಮೆಯಾಗಿದ್ದು, ತಡೋಬಾ ಅರಣ್ಯ ಪ್ರದೇಶದ ವನ್ಯಜೀವಿಗಳ ಆವಾಸಸ್ಥಾನಕ್ಕೂ ಇದು ಪೂರಕವಾಗಿದೆ.
ಪ್ರಸ್ತುತ ಛಿಂದ್ವಾರಾ ಮತ್ತು ಪಾಂಡುರ್ಣ ಜಿಲ್ಲೆಗಳಲ್ಲಿ ಸುಮಾರು 22,000 ಹೆಕ್ಟೇರ್ ಅರಣ್ಯ ಪ್ರದೇಶವನ್ನ ಸಮರ್ಥವಾಗಿ ನಿರ್ವಹಿಸುತ್ತಿರುವ ದೀಪಿಕಾ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಅಭಿವೃದ್ಧಿ ಮತ್ತು ಗಣಿಗಾರಿಕೆಯ ಹೆಸರಿನಲ್ಲಿ ನಾಶವಾಗುತ್ತಿರುವ ಪ್ರಕೃತಿಯನ್ನ ವೈಜ್ಞಾನಿಕ ವಿಧಾನಗಳಿಂದ ಮತ್ತೆ ಹಸಿರಾಗಿಸಬಹುದು ಎಂಬುದಕ್ಕೆ ದೀಪಿಕಾ ಅವರ ಈ ಸಾಧನೆಯೇ ಒಳ್ಳೆಯ ಉದಾಹರಣೆ.


Click it and Unblock the Notifications
