'9% ಕಡಿಮೆ ಮೊತ್ತಕ್ಕೆ ಸಿಕ್ಕರೂ 126ರ ಬದಲು 36 ವಿಮಾನ ಮಾತ್ರ ಏಕೆ?'
ಕಾರೈಕುಡಿ (ತಮಿಳುನಾಡು), ಅಕ್ಟೋಬರ್ 1: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 126 ರಫೇಲ್ ಯುದ್ಧ ವಿಮಾನವನ್ನು ಖರೀದಿಸಬೇಕು ಎಂದು ನಿರ್ಧರಿಸಿತ್ತು. ಅದನ್ನು ಈಗಿನ ಬಿಜೆಪಿ ಸರಕಾರ 36ಕ್ಕೆ ಕಡಿತಗೊಳಿಸಿದ ಕಾರಣ ಏನು ಎಂದು ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಪ್ರಶ್ನೆ ಮಾಡಿದ್ದಾರೆ.
ಎನ್ ಡಿಎ ಸರಕಾರವು ಈ ಹಿಂದಿನ ಒಪ್ಪಂದಕ್ಕಿಂತ 9% ಕಡಿಮೆ ಮೊತ್ತಕ್ಕೆ ಯುದ್ಧ ವಿಮಾನ ಖರೀದಿ ಮಾಡುವಾಗ 36 ಯುದ್ಧ ವಿಮಾನವನ್ನಷ್ಟೇ ಏಕೆ ಖರೀದಿಸುತ್ತಿದೆ ಎಂದು ಕೇಳಿದ್ದಾರೆ.
"ಇದು ಬಹಳ ಸರಳ ಲೆಕ್ಕಾಚಾರ. ನಾವು ಒಂದು ವಸ್ತುವಿನ ಖರೀದಿ ಮಾಡಬೇಕು ಅಂತಿರುವಾಗ ಅದರ ಬೆಲೆ ಕಡಿಮೆ ಆಯಿತು ಆದಾಗ ಅದರ ಲಾಭ ಪಡೆದು, ಇನ್ನೂ ಹೆಚ್ಚು ವಸ್ತು ಖರೀದಿ ಮಾಡುತ್ತೇವೆ. ಆದರೆ ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿರುವುದೇ ಬೇರೆ" ಎಂದು ಅವರು ಕುಟುಕಿದ್ದಾರೆ.

"ಐದನೇ ಕ್ಲಾಸಿನ ವಿದ್ಯಾರ್ಥಿಗಾದರೂ ಈ ಪ್ರಶ್ನೆ ಉದ್ಭವಿಸುತ್ತದೆ" ಎಂದಿರುವ ಅವರು, 126ರ ಬದಲು 36 ರಫೇಲ್ ಯುದ್ಧ ವಿಮಾನವನ್ನಷ್ಟೇ ಖರೀದಿ ಮಾಡುತ್ತಿರುವುದಕ್ಕೆ ಕಾರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸರಕಾರ ಬಂದ ಇಷ್ಟು ಸಮಯದಲ್ಲೇ ದೇಶವು ಮೂವರು ರಕ್ಷಣಾ ಸಚಿವರನ್ನು ಕಂಡಿದೆ. ಯಾರೂ ಉಪಯೋಗವಾಗುವಂಥ ಏನನ್ನೂ ಮಾಡಿಲ್ಲ. ರಫೇಲ್ ಯುದ್ಧ ವಿಮಾನ ಖರೀದಿ ಸಂಖ್ಯೆಯನ್ನು 126ರ ಬದಲು 36ಕ್ಕೆ ಇಳಿಸಿದ್ದೇ ಸಾಧನೆ. ವಾಯುಸೇನೆಯಲ್ಲಿ ಏಳು ಸ್ಕ್ವಾಡ್ರನ್ ಇದೆ. ಪ್ರತಿಯೊಂದಕ್ಕೆ ತಲಾ ಹದಿನೆಂಟು ಯುದ್ಧ ವಿಮಾನ ಅಗತ್ಯವಿದೆ ಎಂದಿದ್ದಾರೆ.
ಎರಡು ಸ್ಕ್ವಾಡ್ರನ್ ಗೆ ಆಗುವಷ್ಟು ವಿಮಾನವನ್ನು ಮಾತ್ರ ಖರೀದಿ ಮಾಡಿದರೆ ನಿಮಗೆ ಅನುಮಾನ ಬರುತ್ತದೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇದರ ಜತೆಗೆ ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇ ಈ ವ್ಯವಹಾರದಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ ಎಂದಿದ್ದಾರೆ.
ಭಾರತದ ಅರ್ಥ ವ್ಯವಸ್ಥೆ ಸಂಭಾಳಿಸುವ ಶಕ್ತಿ ಈ ಸರಕಾರಕ್ಕಿಲ್ಲ. ನೋಟು ನಿಷೇಧ, ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ, ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಹೀಗೆ ನಾನಾ ಸಮಸ್ಯೆಗಳನ್ನು ತಂದ ಸರಕಾರ ಇದು ಎಂದು ಹೇಳಿದ್ದಾರೆ.












Click it and Unblock the Notifications