ವಿಚಾರವಾದಿಗಳ ಬಂಧನ: ಮತ್ತೆ ಗೃಹಬಂಧನ ಅವಧಿ ವಿಸ್ತರಿಸಿದ ಸುಪ್ರೀಂ
ಮುಂಬೈ, ಸೆಪ್ಟೆಂಬರ್ 17: ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು, ಮೋದಿ ಹತ್ಯೆ ಸಂಚು, ಭೀಮಾಕೊರೆಗಾಂವ್ ಹಿಂಸೆಗೆ ಕುಮ್ಮಕ್ಕು ಆರೋಪದಡಿ ಪುಣೆ ಪೊಲೀಸರು ಬಂಧಿಸಿದ್ದ ವಿಚಾರವಾದಿಗಳ ಗೃಹ ಬಂಧನ ಅವಧಿಯನ್ನು ಸುಪ್ರೀಂಕೋರ್ಟ್ ಮತ್ತೆ ವಿಸ್ತರಿಸಿದೆ.
ಆಗಸ್ಟ್ 28 ರಂದು ಪುಣೆ ಪೊಲೀಸರು ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ಬಂಧಿಸಿದ್ದರು.
ಬಾಂಬೆ ಹೈಕೋರ್ಟ್ ಎಲ್ಲ ಆರೋಪಿಗಳಿಗೆ ಮೊದಲಿಗೆ ಸೆಪ್ಟೆಂಬರ್ 6ರವರೆಗೆ ಗೃಹ ಬಂಧನದಲ್ಲಿರಿಸಿ ಆದೇಶ ಹೊರಡಿಸಿತ್ತು. ಜೊತೆಗೆ ಅಂದೇ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಸೆಪ್ಟೆಂಬರ್ 6ರಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಚಾರವಾದಿಗಳ ಗೃಹ ಬಂಧನವನ್ನು ಸೆಪ್ಟೆಂಬರ್ 12ರ ವರೆಗೆ ವಿಸ್ತರಿಸಿತು. ಈಗ ಮತ್ತೆ ಸೆಪ್ಟೆಂಬರ್ 19ರ ವರೆಗೆ ಬಂಧನ ಅವಧಿ ವಿಸ್ತರಿಸಿದೆ.

ಸೆಪ್ಟೆಂಬರ್ 19 ರಂದು ಅಂತಿಮ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಕೋರ್ಟ್ ಮುಂದೆ ಅಂದು ಹಾಜರುಪಡಿಸುವುದಾಗಿಯೂ ಹೇಳಲಾಗಿದೆ. ಹಾಗಾಗಿ ವಿಚಾರವಾದಿಗಳ ಬಂಧನದ ಪ್ರಕರಣ ಸೆಪ್ಟೆಂಬರ್ 19ರಂದು ಒಂದು ಹಂತಕ್ಕೆ ಬಂದು ನಿಲ್ಲಲಿದೆ.












Click it and Unblock the Notifications