IAS: ಸ್ವಯಂ ನಿವೃತ್ತಿ ಪಡೆದ ಮಾಜಿ ಐಎಎಸ್ ಅಧಿಕಾರಿ ಪತ್ನಿ
ನವದೆಹಲಿ, ಮಾರ್ಚ್ 30: ಮಾಜಿ ಐಎಎಸ್ ಅಧಿಕಾರಿ ಮತ್ತು ಬಿಜು ಜನತಾ ದಳ (ಬಿಜೆಡಿ) ನಾಯಕ ವಿ. ಕೆ. ಪಾಂಡಿಯನ್ ಅವರ ಪತ್ನಿ ಐಎಎಸ್ ಅಧಿಕಾರಿ ಸುಜಾತಾ ಕಾರ್ತಿಕೇಯನ್ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮೂರು ತಿಂಗಳ ನೋಟಿಸ್ ಪಿರಿಯಡ್‌ನಲ್ಲಿ ಕೆಲಸ ಮಾಡುವ ಷರತ್ತು ವಿಧಿಸಿ, ಮಾರ್ಚ್ 13, 2025ರಂದು ಕೇಂದ್ರ ಸರ್ಕಾರ ಸುಜಾತಾ ಕಾರ್ತಿಕೇಯನ್ ಸ್ವಯಂ ನಿವೃತ್ತಿ ಅರ್ಜಿಯನ್ನು ಅನುಮೋದಿಸಿದೆ.
ಮಾಜಿ ಐಎಎಸ್ ಅಧಿಕಾರಿ ಮತ್ತು ಬಿಜೆಡಿ ನಾಯಕ ನವೀನ್ ಪಟ್ನಾಯಕ್ ನಿಕಟವರ್ತಿ ವಿ. ಕೆ. ಪಾಂಡಿಯನ್. ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಸುಜಾತಾ ಕಾರ್ತಿಕೇಯನ್ ಸ್ವಯಂ ನಿವೃತ್ತಿ ಅರ್ಜಿ ಅನುಮೋದಿಸಿದ್ದು, ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒಡಿಶಾ ರಾಜ್ಯ ಸರ್ಕಾರಕ್ಕೆ ನಿರ್ದೇಶವನ್ನು ನೀಡಿದೆ.

ಸುಜಾತಾ ಕಾರ್ತಿಕೇಯನ್ 2000ನೇ ಬ್ಯಾಚ್‌ನ ಒಡಿಶಾ ಕೇಡರ್‌ನ ಐಎಎಸ್ ಅಧಿಕಾರಿ. ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಪ್ರಭಾವಿ ಐಎಎಸ್ ಅಧಿಕಾರಿಗಳಲ್ಲಿ ಸುಜಾತಾ ಕಾರ್ತಿಕೇಯನ್ ಸಹ ಒಬ್ಬರಾಗಿದ್ದರು. ಐಎಎಸ್ ಅಧಿಕಾರಿಯಾಗಿದ್ದ ವಿ. ಕೆ. ಪಾಂಡಿಯನ್ ಸಹ 2023ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದು ಬಿಜೆಡಿ ಸೇರಿದ್ದರು, ಪಕ್ಷದ ನಾಯಕ ನವೀನ್ ಪಟ್ನಾಯಕ್ ನಿಕಟವರ್ತಿಯಾಗಿದ್ದರು.
ಸ್ವಯಂ ನಿವೃತ್ತಿಗೆ ಒಪ್ಪಿಗೆ: ಸ್ವಯಂ ನಿವೃತ್ತಿ ಪಡೆದು ಬಿಜೆಡಿ ಸೇರಿದ್ದ ವಿ. ಕೆ. ಪಾಂಡಿಯನ್ ಒಡಿಶಾ ವಿಧಾನಸಭೆ ಚುನಾವಣೆ 2024ರಲ್ಲಿ ಬಿಜೆಡಿ ಪ್ರಚಾರವನ್ನು ಮುನ್ನಡೆಸಿದ್ದರು. ಆದರೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿತ್ತು. ನವೀನ್ ಪಟ್ನಾಯಕ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣೆ ಸಮಯದಲ್ಲಿ ಸುಜಾತಾ ಕಾರ್ತಿಕೇಯನ್ ಅವರನ್ನು ಬಿಜೆಪಿ ಬಿಜೆಡಿಯ ಏಜೆಂಟ್ ಎಂದು ದೂರಿತ್ತು. ಸುಜಾತಾ ಕಾರ್ತಿಕೇಯನ್ ಅವರನ್ನು ಕಡಿಮೆ ಪ್ರಭಾವ ಇರುವ ಹುದ್ದೆಗೆ ಚುನಾವಣಾ ಆಯೋಗ ವರ್ಗಾವಣೆಯನ್ನು ಮಾಡಿತ್ತು.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸುಜಾತಾ ಕಾರ್ತಿಕೇಯನ್ 6 ತಿಂಗಳ ಮಕ್ಕಳ ಆರೈಕೆ ರಜೆಯನ್ನು ಪಡೆದರು. ಇನ್ನು 6 ತಿಂಗಳು ರಜೆಯನ್ನು ವಿಸ್ತರಣೆ ಮಾಡಬೇಕು ಎಂದು ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕಾರವಾಯಿತು. 2024ರ ನವೆಂಬರ್‌ನಲ್ಲಿ ಅವರು ಕರ್ತವ್ಯಕ್ಕೆ ವಾಪಸ್ ಆಗಿದ್ದರು. ಈಗ ಸ್ವಯಂ ನಿವೃತ್ತಿ ಪಡೆದಿರುವ ಸುಜಾತಾ ಕಾರ್ತಿಕೇಯನ್ ರಾಜ್ಯ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
49 ವರ್ಷದ ಸುಜಾತಾ ಕಾರ್ತಿಕೇಯನ್ ಒಡಿಶಾ ರಾಜ್ಯದ ಕೇಂದ್ರಪಾರ ಜಿಲ್ಲೆಯ ಬಲೂರಿಯಾ ಗ್ರಾಮದ ನಿವಾಸಿ. ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡಮೆಯಲ್ಲಿ ತರಬೇತಿ ಪಡೆಯುವಾಗ ಸುಜಾತಾ ಕಾರ್ತಿಕೇಯನ್ ವಿ. ಕೆ. ಪಾಂಡಿಯನ್ ಭೇಟಿಯಾಗಿದ್ದರು. ಮೊದಲು ವಿ. ಕೆ. ಪಾಂಡಿಯನ್ ಪಂಬಾಬ್ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ಬಳಿಕ ಒಡಿಶಾ ಕೇಡರ್‌ನ ಐಎಎಸ್ ಅಧಿಕಾರಿಯಾಗಿ ಬದಲಾವಣೆ ಪಡೆದುಕೊಂಡರು.
ಕಟಕ್ ಮತ್ತು ಸುಂಧರಗಡ ಜಿಲ್ಲೆಯಲ್ಲಿ ಸುಜಾತಾ ಕಾರ್ತಿಕೇಯನ್ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಡಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸುಜಾತಾ ಕಾರ್ತಿಕೇಯನ್ ಅವರನ್ನು 'ಮಿಷನ್ ಶಕ್ತಿ' ಯೋಜನೆಯ ಹೊಣೆಯನ್ನು ನೀಡಲಾಗಿತ್ತು. 70 ಲಕ್ಷ ಗ್ರಾಮೀಣ ಮಹಿಳೆಯರನ್ನು ಒಳಗೊಂಡ ಪ್ರಮುಖ ಕಾರ್ಯಕ್ರಮ ಇದಾಗಿತ್ತು.
ಜೂನ್ 2021ರಲ್ಲಿ ಸುಜಾತಾ ಕಾರ್ತಿಕೇಯನ್ ಕಾರ್ಯದರ್ಶಿ ಹುದ್ದೆಗೆ ಬಡ್ತಿಯನ್ನು ಪಡೆದರು. ಫೆಬ್ರವರಿ 2024ರಲ್ಲಿ ನಡೆದ ವಿಶ್ವ ಒಡಿಯಾ ಸಮ್ಮೇಳನದ ಆಯೋಜನೆಯಲ್ಲಿ ಸುಜಾತಾ ಕಾರ್ತಿಕೇಯನ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈಗ ಸುಜಾತಾ ಕಾರ್ತಿಕೇಯನ್ ಸ್ವಯಂ ನಿವೃತ್ತಿ ಪಡೆದಿದ್ದಾರೆ.












Click it and Unblock the Notifications