ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ಬಿಜೆಪಿ ಪತನ ಆರಂಭವಾದರೆ ಸಂತೋಷ: ಮಮತಾ ಬ್ಯಾನರ್ಜಿ
ಕೊಲ್ಕತ್ತಾ, ಮೇ. 04: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ದೇಶಾದ್ಯಂತ ಗಮನ ಸೆಳೆದಿದೆ. ಚುನಾವಣ ಫಲಿತಾಂಶ ರಾಷ್ಟ್ರ ರಾಜಕೀಯದಲ್ಲೂ ಪ್ರಭಾವ ಬೀರಲಿದೆ. ಹೀಗಾಗಿ ಹಲವು ನಾಯಕರು ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಒಬ್ಬರು.
ಗುರುವಾರ ಕರ್ನಟಕ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿರುವ ಅವರು, ಕರ್ನಾಟಕದಿಂದ ಬಿಜೆಪಿಯ "ಅಧಃಪತನ" ಪ್ರಾರಂಭವಾದರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಟಿಎಂಸಿಯ ಸಾಮೂಹಿಕ ಪ್ರಚಾರ ಅಭಿಯಾನದಲ್ಲಿ ಭಾಷಣ ಮಾಡುವಾಗ, ಕೇಸರಿ ಪಕ್ಷವು ತನ್ನ ಸ್ವಂತ ಹಿತಾಸಕ್ತಿಗಳಿಗಾಗಿ ಹಿಂದೂ ಧರ್ಮವನ್ನು ಹಾಳು ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

"ಮೊದಲು ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟರೆ ಅದು ದೇಶಕ್ಕೆ ಒಳ್ಳೆಯದು... ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ. ನೀವು ಇಷ್ಟಪಡುವ ಯಾವುದೇ ಪಕ್ಷಕ್ಕೆ ಮತ ನೀಡಿ. ಬಿಜೆಪಿಯ ಅವನತಿ ಕರ್ನಾಟಕದಿಂದ ಪ್ರಾರಂಭವಾದರೆ ನನಗೆ ಸಂತೋಷವಾಗುತ್ತದೆ. ಬಿಜೆಪಿ ಹಿಂದೂ ಧರ್ಮದಲ್ಲಿನ ಆಧ್ಯಾತ್ಮಿಕತೆಯನ್ನು ನಾಶಪಡಿಸಿದೆ" ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಹಿಂದೆ ಜಾತ್ಯಾತೀತ ಜನರಾದಳದ ನಾಯಕ ಎಚ್.ಡಿ ಕುಮಾರಸ್ವಾಮಿ ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಮಮತಾ ಬ್ಯಾನರ್ಜಿ ಅವರ ಜತೆ ರ್ನಾಟಕದ ವಿಧಾನಸಭೆ ಚುನಾವಣೆ, ರಾಷ್ಟ್ರ ರಾಜಕಾರಣ, ರಾಹುಲ್ ಗಾಂಧಿ ಅವರ ಅನರ್ಹತೆ ಸೇರಿ ಅನೇಕ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದರು. ಜೊತೆಗೆ ಅವರು ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ನೀಡಿದ್ದರು.

"ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ, ಕಳೆದ ಬಾರಿ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದಾಗಲೂ ಕೇಂದ್ರ ಸರಕಾರ ತುಂಬಾ ಕಿರುಕುಳ ನೀಡಿತ್ತು. ಆದರೆ ಜನತೆಯ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಅದೇ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಅಧಿಕಾರಕ್ಕೆ ಬರಲಿದೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾಗಿ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದರು.
ಮುಂದುವರಿದು, "ನೀವು ಯಾವಾಗ ಹೇಳಿದರೂ ನಾನು ಕರ್ನಾಟಕಕ್ಕೆ ಬಂದು ಜೆಡಿಎಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ. ನೀವು ವೇಳಾಪಟ್ಟಿಯನ್ನು ಸಿದ್ಧಪಡಿಸಿ ತಿಳಿಸಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅವರು ನನ್ನನ್ನು ಅತ್ಯಂತ ಅದರಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದರು" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಈವರೆಗೆ ಅವರು ಜೆಡಿಎಸ್ ಪರ ಪ್ರಚಾರ ನಡೆಸಿಲ್ಲ. ಯಾವಾಗ ಪ್ರಚಾರಕ್ಕೆ ಬರುತ್ತಾರೆ ಎಂಬ ಬಗ್ಗೆ ಪಕ್ಷವು ಮಾಹಿತಿ ನೀಡಿಲ್ಲ.












Click it and Unblock the Notifications