ಯುಪಿಎಸ್‌ಸಿ ಫಲಿತಾಂಶ: ದೇಶದಲ್ಲೇ ಅಗ್ರಸ್ಥಾನ ಪಡೆದ ಶೃತಿ ಶರ್ಮಾ ಗೆಲುವಿನ ಗುಟ್ಟು
ನವದೆಹಲಿ, ಮೇ 30: "ನಾನು ತರಬೇತಿ ಕೇಂದ್ರಗಳಲ್ಲಿ ನೀಡುತ್ತಿದ್ದ ಟಿಪ್ಪಣಿಗಳ ಮೇಲೆ ಹೆಚ್ಚು ಅವಲಂಬಿತವಾಗಿರದೇ, ನನ್ನ ಸ್ವಂತ ಟಿಪ್ಪಣಿಗಳನ್ನು ಮಾಡಿಟ್ಟುಕೊಂಡಿದ್ದೆನು," ಎಂದು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಟಾಪರ್ ಶ್ರುತಿ ಶರ್ಮಾ ತಿಳಿಸಿದ್ದಾರೆ.
ಸೋಮವಾರ ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಯಶಸ್ಸಿನ ಗುಟ್ಟಿನ ಬಗ್ಗೆ ಅವರು ಮಾತನಾಡಿದ್ದಾರೆ. "ತಮ್ಮ ಗೆಲುವಿನ ದಾರಿಯಲ್ಲಿ ಪೋಷಕರು, ಸ್ನೇಹಿತರು ಹಾಗೂ ಆಪ್ತರು ನೀಡಿದ ಬೆಂಬಲವು ಹೆಚ್ಚು ಸಹಕಾರಿ ಆಗಿದ್ದು, ಗೆಲುವಿಗೆ ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಅಗತ್ಯವಿತ್ತು," ಎಂದು ಹೇಳಿದರು.
ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ 2021ನೇ ಸಾಲಿನ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ. ನವದೆಹಲಿಯ ಶೃತಿ ಶರ್ಮಾ ದೇಶಕ್ಕೆ ಮೊದಲ ರ್‍ಯಾಂಕ್ ಗಳಿಸಿದ್ದು, ಅಂಕಿತಾ ಅಗರ್ ವಾಲ್ ದ್ವಿತೀಯ ಹಾಗೂ ಗಾಮಿನಿ ಸಿಂಗ್ಲಾ ತೃತೀಯ ಸ್ಥಾನ ಗಳಿಸಿದ್ದಾರೆ.

ಅಚ್ಚರಿ ಮೂಡಿಸಿದ ಯುಪಿಎಸ್ ಸಿ ಫಲಿತಾಂಶ
ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿ ಆಗಿರುವ ದೆಹಲಿ ಮೂಲದ ಶೃತಿ ಶರ್ಮಾ, ಇಂತಹ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಈ ಫಲಿತಾಂಶವು ಆಶ್ಚರ್ಯಕರವಾಗಿದ್ದು, ಹೆಚ್ಚು ಸಂತೋಷವನ್ನು ನೀಡಿದೆ," ಎಂದು ತಿಳಿಸಿದರು.
"ನಾನು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದದ್ದು ನಿಜ, ಆದರೆ ದೇಶದಲ್ಲಿ ಅಗ್ರಸ್ಥಾನ ಗಳಿಸುತ್ತೇನೆ ಎಂದುಕೊಂಡಿರಲಿಲ್ಲ. ಇದನ್ನು ನನ್ನಿಂದ ನಂಬುವುದಕ್ಕೂ ಆಗುತ್ತಿಲ್ಲ," ಎಂದಿದ್ದಾರೆ.

ಗೆಲುವಿನ ಹಿಂದೆ ನಾಲ್ಕು ವರ್ಷಗಳ ಪರಿಶ್ರಮ
ದೆಹಲಿಯ ಶೃತಿ ಶರ್ಮಾ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್‌ಯು) ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಅದಕ್ಕಾಗಿ ತರಬೇತಿಯನ್ನೂ ಪಡೆದುಕೊಂಡಿದ್ದರು.
ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರಂತಹ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲು RCA ಯು ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (UGC) ಧನಸಹಾಯ ಪಡೆದಿರುವುದಾಗಿ ಹೇಳಿದ್ದಾರೆ.

ಯುಪಿಎಸ್‌ಸಿಯಿಂದ ಸೋಮವಾರ ಫಲಿತಾಂಶ ಪ್ರಕಟ
2021ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಶ್ರುತಿ ಶರ್ಮಾ, ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಸ್ಥಾನವನ್ನು ಗಳಿಸಿದ್ದಾರೆ. ಸೋಮವಾರ ಕೇಂದ್ರ ಲೋಕಸೇವಾ ಆಯೋಗವು ಯುಪಿಎಸ್ ಸಿ ಫಲಿತಾಂಶಗಳನ್ನು ಪ್ರಕಟಿಸಿತು. 685 ಅಭ್ಯರ್ಥಿಗಳು ಪ್ರತಿಷ್ಠಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ.

ಯುಪಿಎಸ್‌ಸಿ ಪರೀಕ್ಷೆಯ ಹಂತಗಳ ಬಗ್ಗೆ ತಿಳಿದುಕೊಳ್ಳೋಣ
ಭಾರತದಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗವು (UPSC) ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸುತ್ತದೆ. ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳ ಆಯ್ಕೆಗಾಗಿ ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.












Click it and Unblock the Notifications