ಪ್ರಧಾನಿಯಾದರೂ ಕಲಿಯುವುದು ಸಾಕಷ್ಟಿದೆ ಎಂದ ಮೋದಿ
ನವದೆಹಲಿ, ಜೂ. 28 : "ನಾನು ಮೊದಲ ಬಾರಿಗೆ ಸಂಸದನಾಗಿ ಆಯ್ಕೆ ಆಗಿದ್ದೇನೆ. ಆದ್ದರಿಂದ ನಾನು ಕಲಿಯುವುದು ಬಹಳಷ್ಟಿದೆ ಮತ್ತು ಕಲಿಯುತ್ತಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭ್ರಷ್ಟಾಚಾರ ಮತ್ತು ಸಜ್ಜನ ಪಕ್ಷಪಾತದಿಂದ ದೂರವಿರುವಂತೆ ನರೇಂದ್ರ ಮೋದಿ ನೂತನ ಸಂಸದರಿಗೆ ಕರೆ ನೀಡಿದ್ದಾರೆ.
ಹರ್ಯಾಣದ ಸೂರಜ್ ಕುಂಡ್ ನಲ್ಲಿ ಮೊದಲ ಬಾರಿಗೆ ಚುನಾಯಿತರಾಗಿರುವ ಬಿಜೆಪಿಯ ಸಂಸತ್ ಸದಸ್ಯರಿಗೆ ಎರಡು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, "ನಾನು ಮೊದಲ ಬಾರಿಗೆ ಸಂಸದನಾಗಿದ್ದೇನೆ, ಆದ್ದರಿಂದ ನನಗೂ ಸಾಕಷ್ಟು ಕಲಿಯುವುದು ಇದೆ" ಎಂದು ಹೇಳಿದರು.

"ಮೊದಲ ಬಾರಿಗೆ ಸಂಸತ್ ಸದಸ್ಯನಾಗಿ ಆಯ್ಕೆ ಆಗಿರುವ ನಾನು ಬಹಳ ಕಲಿಯುವುದಿದೆ. ನಮ್ಮ ಹಿರಿಯರಿಂದ ನಾನು ಕಲಿಯುತ್ತೇನೆ" ಎಂದು ಹೇಳಿದ ಪ್ರಧಾನಿ ಮೋದಿ, ಭ್ರಷ್ಟಾಚಾರ ಮತ್ತು ಸಜ್ಜನ ಪಕ್ಷಪಾತದಿಂದ ದೂರವಿರುವಂತೆ ನೂತನ ಸಂಸದರಿಗೆ ಸಲಹೆ ನೀಡಿದ್ದಾರೆ. ನಿಮಗೆ ಸಹಾಯ ಬೇಕಿದ್ದರೆ ನೇರವಾಗಿ ನನ್ನನ್ನು ಅಥವಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುವಂತೆ ಸೂಚಿಸಿದರು.
"ಸಾರ್ವಜನಿಕ ಜೀವನದಲ್ಲಿ ವಿವಾದಗಳಿಗೆ ಸಿಲುಕದಂತೆ ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತಮ ಸರ್ಕಾರ ಎಂಬ ಸಂದೇಶವನ್ನು ದೇಶದ ಪ್ರತಿಯೊಬ್ಬರಿಗೂ ತಲುಪಿಸಬೇಕು" ಎಂದು ಸಂಸದರಿಗೆ ಸೂಚಿಸಿದರು. ಮಾಧ್ಯಮ ಅದರಲ್ಲೂ ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳವ ಮೂಲಕ, ಜನರನ್ನು ತಲುಪುವಂತೆ ಮೋದಿ ಸಂಸದರಿಗೆ ನಿರ್ದೇಶನ ನೀಡಿದರು. [ಕರ್ನಾಟಕದಿಂದ ಮೊದಲ ಬಾರಿ ಸಂಸತ್ ಪ್ರವೇಶಿಸಿದವರು]
ಎರಡು ದಿನದ ಈ ಕಾರ್ಯಗಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಮುಂತಾದವರು ಪಾಲ್ಗೊಂಡಿದ್ದಾರೆ. ಭಾನುವಾರ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ನೂತನ ಸಂಸದರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 2014ರ ಲೋಕಸಭೆ ಚುನಾವಣೆಗೆ ವಡೋದರಾ ಮತ್ತು ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅವರು ವಡೋದರಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಾರಣಾಸಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.











Click it and Unblock the Notifications