ಬಿಸಾಡುವ ಪ್ಲಾಸ್ಟಿಕ್‌ನಿಂದ ಪೆಟ್ರೋಲ್, ಡೀಸೆಲ್ ಉತ್ಪಾದನೆ: ಇದು ಎಂಜಿನಿಯರ್ ಸತೀಶ್ ಕುಮಾರ್ ಸಾಧನೆ
ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಭೂಮಿಗೆ ಹಾಗೂ ಪರಿಸರಕ್ಕೆ ಅತಿದೊಡ್ಡ ಕಂಟಕವಾಗಿದೆ. ನಾವು ನಿತ್ಯ ಬಳಸುವ ಪ್ಲಾಸ್ಟಿಕ್ ವಸ್ತುಗಳು ಕರಗದೆ ನೂರಾರು ವರ್ಷಗಳ ಕಾಲ ಭೂಮಿಯಲ್ಲಿ ಹಾಗೆಯೇ ಉಳಿಯುತ್ತವೆ ಅಲ್ಲವೇ?. ಆದರೆ, ನಾವು ಕಸದ ಬುಟ್ಟಿಗೆ ಎಸೆಯುವ ಇದೇ ಪ್ಲಾಸ್ಟಿಕ್‌ನಿಂದ ವಾಹನಗಳಿಗೆ ಬಳಸುವ ಇಂಧನವನ್ನ ತಯಾರಿಸಿದರೆ ಹೇಗಿರುತ್ತದೆ?.
ಹೌದು, ಇದು ಕೇವಲ ಕಲ್ಪನೆಯಲ್ಲ. ಹೈದರಾಬಾದ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಪ್ರೊಫೆಸರ್ ಸತೀಶ್ ಕುಮಾರ್ ಅವರು ಈ ಐಡಿಯಾವನ್ನಾ ಸಾಕಾರಗೊಳಿಸಿದ್ದಾರೆ. 2016ರಿಂದಲೂ ಈ ವಿನೂತನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೌಲ್ಯಯುತ ಇಂಧನವನ್ನಾಗಿ ಪರಿವರ್ತಿಸಿ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ.

ಪ್ಲಾಸ್ಟಿಕ್ ಪೈರೋಲಿಸಿಸ್: ತ್ಯಾಜ್ಯ ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಕಾ ತಂತ್ರಜ್ಞಾನ
ಬಳಸಿ ಬಿಸಾಕಿದ, ಮರುಬಳಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ಅನ್ನ ಇಂಧನವಾಗಿ ಪರಿವರ್ತಿಸಲು ಸತೀಶ್ ಕುಮಾರ್ ಅವರು ಪ್ಲಾಸ್ಟಿಕ್ ಪೈರೋಲಿಸಿಸ್ (Plastic pyrolysis) ಎಂಬ ವಿಶೇಷ ವೈಜ್ಞಾನಿಕ ಪ್ರಕ್ರಿಯೆಯನ್ನ ಬಳಸುತ್ತಾರೆ.
ಆಮ್ಲಜನಕದ ಅನುಪಸ್ಥಿತಿಯಲ್ಲಿ ಪ್ಲಾಸ್ಟಿಕ್ ಅನ್ನು ಹೆಚ್ಚಿನ ತಾಪಮಾನದಲ್ಲಿ ಕಾಯಿಸುವ ಮೂಲಕ ಅದನ್ನ ವಿಭಜಿಸುವ ಪ್ರಕ್ರಿಯೆಯೇ ಪೈರೋಲಿಸಿಸ್. ಈ ವಿಧಾನದ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನಯಾನಕ್ಕೆ ಬಳಸುವ ಇಂಧನದ ರೂಪದಲ್ಲಿ ಹೊರಹೊಮ್ಮುತ್ತದೆ. ಈ ತಂತ್ರಜ್ಞಾನವು ಪ್ಲಾಸ್ಟಿಕ್ ವಿಲೇವಾರಿಗೆ ಅತ್ಯುತ್ತಮ ವೈಜ್ಞಾನಿಕ ಪರಿಹಾರ ಒದಗಿಸಿದೆ.
ನಿತ್ಯ 200 ಲೀಟರ್ ಪರ್ಯಾಯ ಇಂಧನ ಉತ್ಪಾದನೆ
ಸತೀಶ್ ಕುಮಾರ್ ಅವರು ಸ್ಥಾಪಿಸಿರುವ ಘಟಕವು ಪ್ರಸ್ತುತ ಪ್ರತಿದಿನ ಸುಮಾರು 200 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿತ್ಯ 200 ಲೀಟರ್‌ನಷ್ಟು ಪರ್ಯಾಯ ಇಂಧನ ಉತ್ಪಾದನೆಯಾಗುತ್ತಿದೆ. ಉತ್ಪಾದನೆಯಾದ ಈ ಗುಣಮಟ್ಟದ ಇಂಧನವನ್ನ ಸ್ಥಳೀಯ ಕೈಗಾರಿಕೆಗಳಿಗೆ ಪ್ರತಿ ಲೀಟರ್‌ಗೆ ಕೇವಲ 50 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ವರದಿಗಳ ಪ್ರಕಾರ, ಅವರು ಈವರೆಗೆ ಬರೋಬ್ಬರಿ 50 ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನ ಯಶಸ್ವಿಯಾಗಿ ಇಂಧನವನ್ನಾಗಿ ಪರಿವರ್ತಿಸಿದ್ದಾರೆ. ಈ ಮೂಲಕ ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ಇಂಧನ ಲಭ್ಯವಾಗುತ್ತಿದ್ದು, ಉತ್ಪಾದನಾ ವೆಚ್ಚವೂ ತಗ್ಗುತ್ತಿದೆ.
ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ಜಲ ಉತ್ಪತ್ತಿಯಾಗಲ್ಲ
ಈ ಯೋಜನೆಯ ಅತ್ಯಂತ ಪ್ರಮುಖ ಅಂಶವೆಂದರೆ, ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಸುಮಾರು 500 ಕೆಜಿ ಮರುಬಳಕೆಯಾಗದ ಪ್ಲಾಸ್ಟಿಕ್‌ನಿಂದ 400 ಲೀಟರ್ ಇಂಧನವನ್ನ ಸುಲಭವಾಗಿ ಪಡೆಯಬಹುದು ಎಂದು ಸತೀಶ್ ಕುಮಾರ್ ವಿವರಿಸುತ್ತಾರೆ.
ಈ ಪೈರೋಲಿಸಿಸ್ ಪ್ರಕ್ರಿಯೆಗೆ ಒಂದು ಹನಿ ನೀರಿನ ಅಗತ್ಯವೂ ಇಲ್ಲ. ಹಾಗಾಗಿ, ಇದರಲ್ಲಿ ಯಾವುದೇ ರೀತಿಯ ಕಲುಷಿತ ನೀರು ಅಥವಾ ತ್ಯಾಜ್ಯ ಜಲ ಉತ್ಪತ್ತಿಯಾಗುವುದಿಲ್ಲ. ಇದು ಜಲಮಾಲಿನ್ಯದ ಭೀತಿಯನ್ನು ಸಂಪೂರ್ಣವಾಗಿ ನಿವಾರಿಸಿದೆ.
ಕ್ಷಣಾರ್ಧದಲ್ಲಿ ನಾವು ಕಸವೆಂದು ಬಿಸಾಡುವ ಪ್ಲಾಸ್ಟಿಕ್ ವಸ್ತುಗಳು, ಇಂದು ಕೈಗಾರಿಕೆ ಯಂತ್ರಗಳಿಗೆ ಇಂಧನವಾಗಿ ಬಳಕೆಯಾಗುತ್ತಿರುವುದು ನಿಜಕ್ಕೂ ಅದ್ಭುತ. ಸತೀಶ್ ಕುಮಾರ್ ಅವರ ಈ ಶ್ರಮವು 'ತ್ಯಾಜ್ಯದಿಂದ ಸಂಪತ್ತು' ಎಂಬ ಪರಿಕಲ್ಪನೆಗೆ ಅತ್ಯುತ್ತಮ ಉದಾಹರಣೆಯಾಗಿದೆ.
ಭವಿಷ್ಯದಲ್ಲಿ ಇಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಸರ್ಕಾರ ಮತ್ತು ಸಾರ್ವಜನಿಕರ ಬೆಂಬಲ ಸಿಕ್ಕರೆ, ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣದ ಜೊತೆಗೆ ಇಂಧನ ಸ್ವಾವಲಂಬನೆಯನ್ನೂ ಸಾಧಿಸಲು ಸಾಧ್ಯವಾಗಲಿದೆ.


Click it and Unblock the Notifications
