ಸಿನಿಮಾ ಶುರುವಾಗುವ ಮುನ್ನ 22 ನಿಮಿಷ ಜಾಹೀರಾತು ಪ್ರಸಾರ: PVR ಸಿನಿಮಾಸ್‌ಗೆ ಬಿತ್ತು ಭಾರಿ ದಂಡ!
ಸಿನಿಮಾ ನೋಡಬೇಕು ಎಂದು ಖುಷಿ ಖುಷಿಯಿಂದ ಟಿಕೆಟ್ ಖರೀದಿಸುವ ಪ್ರೇಕ್ಷಕರಿಗೆ ಥಿಯೇಟರ್‌ಗಳಲ್ಲಿ ಕಿರಿಕಿರಿ ಉಂಟುಮಾಡುವ ಪ್ರಮುಖ ಅಂಶವೆಂದರೆ ಜಾಹೀರಾತುಗಳು. ಸಿನಿಮಾ ಶುರುವಾಗುವ ಸಮಯವಿದ್ದರೂ, ನಿರಂತರವಾಗಿ ಜಾಹೀರಾತುಗಳನ್ನ ಪ್ರಸಾರ ಮಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಟ್ರೆಂಡ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾನ್ಯವಾಗಿದೆ.
ಆದರೆ, ಹೈದರಾಬಾದ್‌ನ ವಕೀಲರೊಬ್ಬರು ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ಗೆದ್ದಿದ್ದಾರೆ. ನಿಗದಿತ ಸಮಯಕ್ಕಿಂತ 22 ನಿಮಿಷ ಹೆಚ್ಚು ಜಾಹೀರಾತು ಪ್ರಸಾರ ಮಾಡಿದ್ದಕ್ಕಾಗಿ ಪಿವಿಆರ್ ಸಿನಿಮಾಸ್ ಭಾರಿ ದಂಡ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೈದರಾಬಾದ್ ವಕೀಲರ ಕಾನೂನು ಹೋರಾಟ
ಹೈದರಾಬಾದ್ ಮೂಲದ ವಕೀಲರಾದ ಚಂದಾ ಅತೀಶ್ ಕುಮಾರ್ ಎಂಬುವವರು ತಡರಾತ್ರಿ ಶೋ ವೀಕ್ಷಿಸಲು ಪಿವಿಆರ್ ಸಿನಿಮಾಸ್‌ಗೆ ತೆರಳಿದ್ದರು. ಟಿಕೆಟ್‌ನಲ್ಲಿ ನಮೂದಿಸಿದ್ದ ಸಮಯಕ್ಕೆ ಸರಿಯಾಗಿ ಸಿನಿಮಾ ಆರಂಭವಾಗಬೇಕಿತ್ತು. ಆದರೆ, ಥಿಯೇಟರ್ ಆಡಳಿತ ಮಂಡಳಿಯು ಸಿನಿಮಾ ಆರಂಭಿಸುವ ಬದಲು ಬರೋಬ್ಬರಿ 22 ನಿಮಿಷಗಳ ಕಾಲ ಹೆಚ್ಚುವರಿಯಾಗಿ ವಾಣಿಜ್ಯ ಜಾಹೀರಾತುಗಳು, ಟ್ರೈಲರ್‌ಗಳು ಹಾಗೂ ಸಾರ್ವಜನಿಕ ಸೇವಾ ಸಂದೇಶಗಳನ್ನ ಪ್ರಸಾರ ಮಾಡಿದೆ.
ಹಣ ಕೊಟ್ಟು ಟಿಕೆಟ್ ಖರೀದಿಸಿದ ಗ್ರಾಹಕರನ್ನ ಬಲವಂತವಾಗಿ ಜಾಹೀರಾತು ನೋಡುವಂತೆ ಮಾಡಿದ್ದು ಅತೀಶ್ ಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ತಡರಾತ್ರಿ ಶೋ ವಿಳಂಬ
ಕೇವಲ 22 ನಿಮಿಷಗಳ ವಿಳಂಬ ತಾನೇ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ, ತಡರಾತ್ರಿ ಶೋಗೆ ತೆರಳಿದ್ದ ಅತೀಶ್ ಕುಮಾರ್ ಅವರಿಗೆ ಈ ವಿಳಂಬದಿಂದಾಗಿ ಸಿನಿಮಾ ಮುಗಿದು ಮನೆಗೆ ತಲುಪುವಾಗ ಬೆಳಗಿನ ಜಾವ 3 ಗಂಟೆಯಾಗಿತ್ತು. ಹಣ ಪಾವತಿಸಿದ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಸೇವೆ ಒದಗಿಸದಿರುವುದು ಸೇವೆಯ ನ್ಯೂನತೆ ಹಾಗೂ ಇದು ಅನ್ಯಾಯದ ವ್ಯಾಪಾರ ಅಭ್ಯಾಸ ಎಂದು ಆರೋಪಿಸಿ ಅವರು ಹೈದರಾಬಾದ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ-II ಕ್ಕೆ ದೂರು ಸಲ್ಲಿಸಿದರು.
ಪಿವಿಆರ್ ಐನಾಕ್ಸ್ ಗೆ ದಂಡ ವಿಧಿಸಿದ ಕೋರ್ಟ್
ವಾದ-ಪ್ರತಿವಾದಗಳನ್ನ ಆಲಿಸಿದ ಹೈದರಾಬಾದ್ ಗ್ರಾಹಕ ನ್ಯಾಯಾಲಯವು ವಕೀಲ ಅತೀಶ್ ಕುಮಾರ್ ಅವರ ವಾದವನ್ನ ಎತ್ತಿಹಿಡಿದಿದೆ. ಟಿಕೆಟ್ ಖರೀದಿಸಿದ ಗ್ರಾಹಕರಿಗೆ ನಿಗದಿತ ಸಮಯದ ನಂತರವೂ ಜಾಹೀರಾತುಗಳನ್ನ ತೋರಿಸುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಪಿವಿಆರ್ ಸಿನಿಮಾಸ್ ಮತ್ತು ಪಿವಿಆರ್ ಐನಾಕ್ಸ್ ಗೆ ದಂಡ ವಿಧಿಸಿ ಆದೇಶ ಹೊರಡಿಸಿದೆ.
ದಂಡದ ಮೊತ್ತ ಮತ್ತು ಆದೇಶದ ವಿವರ
ಗ್ರಾಹಕರಿಗೆ ಉಂಟಾದ ಮಾನಸಿಕ ಕಿರಿಕಿರಿ ಹಾಗೂ ಸೇವಾ ನ್ಯೂನತೆಗಾಗಿ ಪಿವಿಆರ್ ಸಂಸ್ಥೆಯು ದೂರುದಾರ ಅತೀಶ್ ಕುಮಾರ್ ಅವರಿಗೆ ₹20,000 ಪರಿಹಾರ ಹಾಗೂ ₹5,000 ಕಾನೂನು ಹೋರಾಟದ ವೆಚ್ಚವನ್ನ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಇದರ ಜೊತೆಗೆ, ದಂಡನಾತ್ಮಕ ಹಾನಿಯಾಗಿ ₹50,000 ಮೊತ್ತವನ್ನು 'ಜಿಲ್ಲಾ ಗ್ರಾಹಕ ಕಲ್ಯಾಣ ನಿಧಿ'ಗೆ ಜಮಾ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಮಹತ್ವದ ತೀರ್ಪು, ಮನಬಂದಂತೆ ಜಾಹೀರಾತು ಪ್ರಸಾರ ಮಾಡುವ ಎಲ್ಲಾ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಎಚ್ಚರಿಕೆ ಗಂಟೆಯಾಗಿದೆ.


Click it and Unblock the Notifications
