ಹೈದರಾಬಾದ್; ಓವೈಸಿ ಎದುರಾಳಿ ಬಿಜೆಪಿ ಅಭ್ಯರ್ಥಿ ಆಸ್ತಿ 221 ಕೋಟಿ!
ಹೈದರಾಬಾದ್, ಏಪ್ರಿಲ್ 26: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಹೈದರಾಬಾದ್ ಸಹ ಒಂದು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪ್ರತಿನಿಧಿಸುವ ಕ್ಷೇತ್ರವಿದು. ಬಿಜೆಪಿ ಒವೈಸಿಗೆ ಎದುರಾಳಿಯಾಗಿ ಮಹಿಳೆಯನ್ನು ಕಣಕ್ಕಿಳಿಸಿದೆ.
ಹೈದರಾಬಾದ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿರುವ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು 221 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವಾಗಿ ಘೋಷಣೆ ಮಾಡಿದ್ದಾರೆ. ಮೇ 13ರಂದು ದೇಶದ 3ನೇ ಹಂತದ ಮತದಾನ ನಡೆಯುವಾಗ ಹೈದರಾಬಾದ್ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಮಾಧವಿ ಲತಾ ಆಸ್ತಿ ವಿವರ: ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು 221 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಮಾಧವಿ ಅವರ ಕುಟುಂಬ ವಿರಿಂಚಿ ಕಂಪನಿಯಲ್ಲಿ 94.44 ಕೋಟಿ ಮೌಲ್ಯದ 2.94 ಕೋಟಿ ಷೇರುಗಳನ್ನು ಹೊಂದಿದೆ.
ಕೆ. ಮಾಧವಿ ಲತಾ ಅವರ ಪತಿ ವಿಶ್ವನಾಥ ಕಂಪಲ್ಲೆ ಮದ್ರಾಸ್ ಐಐಟಿಯಿಂದ ಪದವಿ ಪಡೆದವರು. ಫಿನ್‌ಟೆಕ್ ಅಂಡ್ ಹೆಲ್ತ್ ಕೇರ್ ಕಂಪನಿ ಸಂಸ್ಥಾಪಕರೂ ಸಹ ಹೌದು. ಮಾಧವಿ ಅವರ ಬಳಿ 165.46 ಕೋಟಿ ಚರಾಸ್ತಿ ಮತ್ತು 55.92 ಕೋಟಿಯಷ್ಟು ಸ್ತಿರಾಸ್ತಿ ಇದೆ ಎಂದು ನಾಮಪತ್ರದೊಂದಿಗೆ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಕೆ. ಮಾಧವಿ ಲತಾ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ನಡುವೆ ಈ ಬಾರಿಯ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಉಭಯ ಅಭ್ಯರ್ಥಿಗಳು ಸಹ ಬಿರುಸಿನಿಂದ ಪ್ರಚಾರವನ್ನು ನಡೆಸುತ್ತಿದ್ದಾರೆ.
ಹೈದರಾಬಾದ್ ಕ್ಷೇತ್ರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಬಹಳಷ್ಟು ಪ್ರಭಾವ ಹೊಂದಿದ್ದಾರೆ. ಬಿಜೆಪಿ ಅವರ ಎದುರಾಳಿಯಾಗಿ ಮಹಿಳೆಯನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕ್ಷೇತ್ರದಲ್ಲಿ ಬಿಜೆಪಿಯ ಕೆ. ಮಾಧವಿ ಲತಾ, ಎಐಎಂಐಎಂನಿಂದ ಅಸಾದುದ್ದೀನ್ ಒವೈಸಿ ಮತ್ತು ಕಾಂಗ್ರೆಸ್‌ನಿಂದ ವಲಿಯುಲ್ಲಾ ಸಮೀರ್ ಅಭ್ಯರ್ಥಿಗಳು. ಅಸಾದುದ್ದೀನ್ ಒವೈಸಿ 23.87 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಕೆ. ಮಾಧವಿ ಲತಾ ಅವರು ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಹೈದರಾಬಾದ್ ಕ್ಷೇತ್ರ ಎಐಎಂಐಎಂ ಭದ್ರಕೋಟೆ. ಅಸಾದುದ್ದೀನ್ ಒವೈಸಿ ಹಾಲಿ ಸಂಸದರು. 2004ರಿಂದ ನಾಲ್ಕು ಬಾರಿ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ 6 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಹೈದರಾಬಾದ್ ಮೂಲದ ವಿರಿಂಚಿ ಆಸ್ಪತ್ರೆಗಳ ಅಧ್ಯಕ್ಷರು. ವಿದ್ಯಾರ್ಥಿಯಾಗಿದ್ದಾಗ ಎನ್‌ಸಿಸಿಯಲ್ಲಿದ್ದ ಅವರು, ಭರತನಾಟ್ಯ ಕಲಾವಿದರೂ ಹೌದು.












Click it and Unblock the Notifications