ಬಾಗಿಲು ತೆಗೆದ ಶಬರಿಮಲೆ ದೇಗುಲ; ಅಪಾರ ಭಕ್ತರ ಆಗಮನ
ತಿರುವನಂತಪುರಂ, ನವೆಂಬರ್ 17: ಶಬರಿಮಲೆಯ ಪವಿತ್ರ ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯಲು ಅಯ್ಯಪ್ಪನ ದೇವಸ್ಥಾನದಲ್ಲಿ ಭಕ್ತರ ದಂಡು ಹೆಚ್ಚಾಗಿದ್ದು, ನೂಕುನುಗ್ಗಲು ಹೆಚ್ಚಾಗುತ್ತಿದೆ.
ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಾಲಯದ ಬಾಗಿಲುಗಳನ್ನು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಗಳಿಗಾಗಿ ಭಕ್ತರ ದರ್ಶನಕ್ಕೆ ಬುಧವಾರ ತೆರೆಯಲಾಗಿದೆ. ಇದರಿಂದ ಎರಡು ತಿಂಗಳುಗಳ ಕಾಲ ನಡೆಯುವ ಭಕ್ತರ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ.
ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಪ್ರಧಾನ ಅರ್ಚಕರು ದೇವಸ್ಥಾನದ ಗರ್ಭಗುಡಿಯನ್ನು ತೆರದು ದೀಪವನ್ನು ಬೆಳಗಿಸಿದರು. 41 ದಿನಗಳ ಮಂಡಲ ಋತುವು ಮಲಯಾಳಂ ಕ್ಯಾಲೆಂಡರ್ ವೃಶ್ಚಿಕಂ ತಿಂಗಳ ಪ್ರಾರಂಭದೊಂದಿಗೆ ಆರಂಭವಾಗಿ ಡಿಸೆಂಬರ್ 27ರಂದು ಕೊನೆಗೊಳ್ಳುತ್ತದೆ. ಆನ್‌ಲೈನ್ ಮೂಲಕ ತಮ್ಮ ದರ್ಶನ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗದ ಭಕ್ತರಿಗೆ ಭೌತಿಕವಾಗಿ ಬುಕಿಂಗ್ ಸೌಲಭ್ಯಗಳನ್ನು ಆರಂಭಿಸಲಾಗಿದೆ.

ಶಬರಿಮಲೆಯ ಪ್ರಧಾನ ಅರ್ಚಕರಾಗಿ ಕೆ. ಜಯರಾಮನ್ ನಂಬೂದರಿ ಮತ್ತು ಮಲಿಕಪ್ಪುರಂ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಹರಿಹರನ್ ನಂಬೂದರಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷ ಗಳಿಂದ ಸಾಂಕ್ರಾಮಿಕ ಪ್ರೋಟೋಕಾಲ್ ತೆಗೆದುಹಾಕಲಾಗಿದ್ದು, ಕೋವಿಡ್ ವೇಳೆ ಹಾಕಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಪ್ರಧಾನ ಅರ್ಚಕರ ಪ್ರಕಾರ ಈ ವರ್ಷ ಶಬರಿಮಲೆಗೆ 40 ಲಕ್ಷ ಜನ ಭಕ್ತರು ಭೇಟಿ ನೀಡುತ್ತಾರೆ ಎಂದು ನಿರೀಕ್ಷಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಮಾರ್ಗಸೂಚಿ ಅನುಸರಿಸಿ ಆನ್‌ಲೈನ್ ನೋಂದಣಿ ಮೂಲಕ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿತ್ತು. ಜನವರಿ 14, 2023 ರಂದು ಶಬರಿಮಲೆ ತೀರ್ಥಯಾತ್ರೆಗಾಗಿ ಡಿಸೆಂಬರ್ 30ರಂದು ದೇವಾಲಯವನ್ನು ಪುನಃ ತೆರೆಯಲಾಗುತ್ತದೆ. ಬಳಿಕ ಯಾತ್ರಾರ್ಥಿ ಋತುವನ್ನು ಮುಕ್ತಾಯಗೊಳಿಸಿ ಜನವರಿ 20ಕ್ಕೆ ದೇವಾಲಯವನ್ನು ಮುಚ್ಚಲಾಗುತ್ತದೆ.
ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಾಲಯವು ಕೇರಳದ ಎಲ್ಲಾ ಶಾಸ್ತಾ ದೇವಾಲಯಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯ ಬೆಟ್ಟದ ತುದಿಯಲ್ಲಿದೆ. ಇದು ಸಮುದ್ರಮಟ್ಟದಿಂದ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿ ಇದೆ. ಇದು ಎಲ್ಲ ಧರ್ಮಗಳ ಜನರಿಗೂ ಮುಕ್ತವಾಗಿರುತ್ತದೆ. ದೇವಾಲಯವು ವರ್ಷವಿಡಿ ತೆರೆದಿರುವುದಿಲ್ಲ. ಆದರೆ ಮಂಡಳ ಪೂಜೆ ಮಕರವಿಳಕ್ಕು, ವಿಷು ಹಾಗೂ ಪ್ರತಿ ಮಲಯಾಳಂ ತಿಂಗಳ ಮೊದಲ ದಿನದಂದು ಮಾತ್ರ ಪೂಜೆಗಾಗಿ ತೆರೆಯಲ್ಪಡುತ್ತದೆ.

ಯಾತ್ರಾರ್ಥಿಗಳು ಶಬರಿಮಲೆಗೆ ಹೋಗುವ ಮೊದಲು 41 ದಿನಗಳ ಕಾಲ ಬ್ರಹ್ಮಚರ್ಯವನ್ನು ಆಚರಿಸಬೇಕು ಎಂದು ಹೇಳಲಾಗುತ್ತದೆ. ಯಾತ್ರಾರ್ಥಿಗಳು ಸಾಂಪ್ರದಾಯಿಕ ಅರಣ್ಯ ಮಾರ್ಗಗಳನ್ನು ತೆಗೆದುಕೊಳ್ಳುತ್ತಾರೆ.












Click it and Unblock the Notifications