Himachal Pradesh Results 2022: ಸಿಎಂ ಆಯ್ಕೆ ಬಗ್ಗೆ ಚಂಡೀಗಢದಲ್ಲಿ ಸಭೆ ಮಾಡಲು ಕಾಂಗ್ರೆಸ್ ಪ್ಲಾನ್
ಶಿಮ್ಲಾ, ಡಿಸೆಂಬರ್, 08: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 ಮತ ಎಣಿಕೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಭಾರಿ ಮುನ್ನಡೆಯತ್ತ ಸಾಗಿದೆ. ಬಿಜೆಪಿ ಹಿನ್ನೆಡೆ ಸಾಧಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಜೈರಾಮ್ ಠಾಕೂರ್ ರಾಜೀನಾಮೆ ಘೋಷಿಸಿದ್ದಾರೆ. ಇನ್ನು ಸಿಎಂ ಬಗ್ಗೆ ನಿರ್ಧರಿಸಲು ಕಾಂಗ್ರೆಸ್ ಹಿಮಾಚಲ ಶಾಸಕರು ನಾಳೆ ಚಂಡೀಗಢದಲ್ಲಿ ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ವರಿಷ್ಠರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ರಾಜಕೀಯವನ್ನು ಬದಿಗೊತ್ತಿ ರಾಜ್ಯದ ಅಭಿವೃದ್ಧಿಗೆ ಬದ್ಧನಾಗಿರುವುದಾಗಿ ಜೈರಾಮ್ ಠಾಕೂರ್ ಅವರು ತಿಳಿಸಿದ್ದಾರೆ. ಬಿಜೆಪಿ 25 ಸ್ಥಾನ ಪಡೆದಿದ್ದರೆ ಕಾಂಗ್ರೆಸ್ 40 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಈ ಮಧ್ಯೆ ಚುನಾವಣಾ ಫಲಿತಾಂಶ ಘೋಷಣೆ ನಂತರ ಕಾಂಗ್ರೆಸ್ ನೂತನ ಶಾಸಕರ ಸಭೆ ನಡೆಸಲಿದ್ದು, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಿಮಾಚಲದಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ
ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022 ಮತ ಎಣಿಕೆ ನಡೆದಿದ್ದು, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಿದೆ. ಇದೇ ಖುಷಿಯಲ್ಲಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಹಿಮಾಚಲ ಪ್ರದೇಶದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಹಾಗೂ ನಿಮಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಶೀಘ್ರವಾಗಿ ಈಡೇರಿಸಲಾಗುವುದು ಎಂದು ಜನರಿಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಜನರ ಆಶೀರ್ವಾದ, ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ನಮ್ಮ ಪಕ್ಷ ಬಿಜೆಪಿ ವಿರುದ್ಧ ಭಾರಿ ಮುನ್ನಡೆ ಸಾಧಿಸಿದೆ. ನಾವು ಪಟ್ಟ ಪರಿಶ್ರಮಕ್ಕೆ ಇಂದು ಫಲ ಸಿಕ್ಕಂತಾಗಿದೆ.
ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಲು ಕಾರಣರಾದ ನಿಮ್ಮೆಲ್ಲರಿಗೂ ಧನ್ಯವಾದ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ಹಿಮಚಲ ಪ್ರದೇಶದಲ್ಲಿ ಗೆದ್ದ ಅಭ್ಯರ್ಥಿಗಳನ್ನು ಬಜೆಪಿಯವರು ಎಲ್ಲಿ ತಮ್ಮತ್ತ ಸೆಳೆಯುತ್ತಾರೆಯೋ ಅನ್ನುವ ಚಿಂತೆ ಕಾಂಗ್ರೆಸ್‌ನಲ್ಲಿ ಕಾಡತೊಡಗಿದೆ. ಆದ್ದರಿಂದ ಮುಂಚೆಯೇ ಗೆದ್ದ ಅಭ್ಯರ್ಥಿಗಳಿಗೆ ರಾಜಸ್ಥಾನದ ಕಡೆಗೆ ಪ್ರಯಾಣ ಬೆಳೆಸುವಂತೆ ಕಾಂಗ್ರೆಸ್ ಸೂಚನೆ ನೀಡಿತ್ತು. ಇದೀಗ ಕಾಂಗ್ರೆಸ್ ಪಕ್ಷ ತಮ್ಮ ಅಭ್ಯರ್ಥಿಗಳನ್ನು ಉಳಿಸಿಕೊಳ್ಳಲು ಮುಂದಾಗಿದೆ.












Click it and Unblock the Notifications