ಅಡುಗೆಮನೆಯಿಂದ ಆರಂಭವಾದ ಪಯಣ: ಫೆರೆರೊ ರೋಚರ್ ಚಾಕೊಲೇಟ್‌ಗೆ ಕಚ್ಚಾವಸ್ತು ಪೂರೈಸುವ ಭಾರತೀಯ ಕಂಪನಿಯ ಯಶೋಗಾಥೆ
ಫೆರೆರೊ ರೋಚರ್ (Ferrero Rocher) ಚಾಕೊಲೇಟ್ ಯಾರಿಗೆ ಗೊತ್ತಿಲ್ಲ ಹೇಳಿ, ಸುಮ್ಮನೆ ಹೀಗೆ ಒಮ್ಮೆ ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರುಬರುತ್ತೆ. ಅದು ಬಿಡಿ ಈ ಫೆರೆರೊ ರೋಚರ್ ಚಾಕೋಲೇಟ್ ಮತ್ತು ತಮ್ಮ ಭಾರತೀಯರ ಅಡುಗೆಮನೆಗೆ ಏನೋ ಸಂಬಂಧಯಿದೆ. ಏನು ಎಂದು ನಿಮಗೆ ಗೊತ್ತಾ? ನಿಮಗೆ ಮೇಲ್ನೋಟಕ್ಕೆ ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅನಿಸಬಹುದು.
ಆದರೆ, ದಶಕಗಳ ಹಿಂದೆ ಭಾರತದ ಅಡುಗೆಮನೆಯೊಂದರಲ್ಲಿ ನಡೆದ ಆ ಒಂದು ಸಣ್ಣ ಪ್ರಯೋಗ, ಇಂದು ಜಗತ್ತಿನ ಅತಿದೊಡ್ಡ ಚಾಕೊಲೇಟ್ ಮತ್ತು ಸೌಂದರ್ಯವರ್ಧಕ ಕಂಪನಿಗಳಿಗೆ ಮುಖ್ಯವಾಗಿ ಬೇಕಾದ ಕಚ್ಚಾವಸ್ತುವನ್ನ ಪೂರೈಸುತ್ತಿದೆ. ಇದು ಛತ್ತೀಸ್‌ಗಢದ ರಾಯ್‌ಪುರದ ಸಾಮಾನ್ಯ ಕುಟುಂಬವೊಂದು ಅಸಾಮಾನ್ಯ ಸಾಧನೆ ಮಾಡಿದ ರೋಚಕ ಕಥೆ.

ಭಾರತೀಯ ಸ್ಟಾರ್ಟ್ಅಪ್ ಕಥೆ: ಅಡುಗೆಮನೆಯಿಂದ ಶುರುವಾದ ಕನಸು
1940ರ ದಶಕದಲ್ಲಿ ಜಾನಕಿಲಾಲ್ ಅಗರ್ವಾಲ್ ಅವರು ಕೆಲಸದಿಂದ ಮನೆಗೆ ಬರುವಾಗ ಕಡಲೆಕಾಯಿ ಹಾಗೂ ಇತರ ಬೀಜಗಳನ್ನ ತರುತ್ತಿದ್ದರು. ಅವರ ಪತ್ನಿ ಮನೋರಮಾ ಆ ಬೀಜಗಳನ್ನ ರುಬ್ಬಿ ಎಣ್ಣೆ ಮತ್ತು ಬೆಣ್ಣೆ ತಯಾರಿಸುತ್ತಿದ್ದರು. ಬಳಿಕ ಜಾನಕಿಲಾಲ್ ಅದನ್ನು ಮಲ್ಕಾಪುರದಲ್ಲಿ ಮಾರಿ ಸ್ವಲ್ಪ ಹೆಚ್ಚುವರಿ ಹಣ ಸಂಪಾದಿಸುತ್ತಿದ್ದರು.
1955ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗುತ್ತಿದ್ದ ಕುಟುಂಬವೊಂದು ಬೀಜಗಳನ್ನ ಪುಡಿಮಾಡುವ ಯಂತ್ರವನ್ನು (ಪಿಸ್ಟನ್ ಎಕ್ಸ್‌ಪೆಲ್ಲರ್) ಮಾರಾಟ ಮಾಡುತ್ತಿರುವುದನ್ನ ಜಾನಕಿಲಾಲ್ ತಿಳಿದರು. ಆ ಯಂತ್ರವನ್ನ ಮನೆಗೆ ತರುವ ಬದಲು, ಆ ಯಂತ್ರವಿದ್ದ ಸ್ಥಳದಲ್ಲೇ ತಮ್ಮದೇ ಆದ ಸಣ್ಣ ವ್ಯಾಪಾರವನ್ನ ಅವರು ಶುರು ಮಾಡಿದರು.
ಮ್ಯಾಂಗೋ ಬಟರ್ ಮತ್ತು ಫ್ಯಾಟ್ ಕೆಮಿಸ್ಟ್ರಿ ಶೋಧ
ಕೇವಲ ಬೀಜಗಳನ್ನ ಪುಡಿ ಮಾಡುವುದಕ್ಕೆ ಜಾನಕಿಲಾಲ್ ಸೀಮಿತರಾಗಲಿಲ್ಲ. ಹೆಚ್ಚಿನ ಅಧ್ಯಯನಕ್ಕಾಗಿ ಸ್ಕಾಲರ್‌ಶಿಪ್ ಪಡೆದು ಲಂಡನ್‌ಗೆ ತೆರಳಿದ ಅವರು, ಫ್ಯಾಟ್ ಕೆಮಿಸ್ಟ್ರಿಯಲ್ಲಿ (Fat chemistry) ಪಿಎಚ್‌ಡಿ ಪದವಿ ಪಡೆದರು. ಭಾರತಕ್ಕೆ ಮರಳಿದ ಬಳಿಕ ತಮ್ಮದೇ ಪ್ರಯೋಗಾಲಯದಲ್ಲಿ ಸಂಶೋಧನೆ ಆರಂಭಿಸಿದರು. ಈ ವೇಳೆ ಅವರಿಗೆ ಹೊಸ ಐಡಿಯಾ ಹೊಳೆಯಿತು. ಬಾಳೆಹಣ್ಣಿನ ಸಿಪ್ಪೆ, ಮಾವಿನ ಓಟೆ ಹಾಗೂ ಸಾಲ್ ಮರದ ಬೀಜಗಳಿಂದ ಚಾಕೊಲೇಟ್ ತಯಾರಿಕೆಗೆ ಉಪಯುಕ್ತವಾದ ಎಣ್ಣೆಯನ್ನ ತೆಗೆಯಬಹುದು ಎಂಬುದನ್ನು ಅವರು ಸಾಬೀತುಪಡಿಸಿದರು.
ಫೆರೆರೊ ರೋಚರ್ ಫೌಂಡರ್ ಭೇಟಿ
ತಮ್ಮ ಈ ವಿಶಿಷ್ಟ ಉತ್ಪನ್ನಗಳನ್ನ ಜಗತ್ತಿಗೆ ಪರಿಚಯಿಸಲು ಜಾನಕಿಲಾಲ್ ಜಪಾನ್ ಮತ್ತು ಜರ್ಮನಿಯ ವ್ಯಾಪಾರ ಮೇಳಗಳಿಗೆ ತೆರಳಿದರು. ಆದರೆ ಅಲ್ಲಿ ಮಳಿಗೆ ಹಾಕಲು ಅವರ ಬಳಿ ಹಣವಿರಲಿಲ್ಲ. ಹೀಗಾಗಿ ಜನರ ಗಮನ ಸೆಳೆಯಲು ಅವರು ತಮ್ಮ ಉತ್ಪನ್ನಗಳನ್ನ ತಮ್ಮ ದೇಹದ ಮೇಲೆ ಸವರಿಕೊಂಡು ಪ್ರದರ್ಶನ ನೀಡಿದರು.
ಅವರ ಈ ವಿಶಿಷ್ಟ ಹಾಗೂ ಧೈರ್ಯಶಾಲಿ ಪ್ರಯತ್ನ ನೇರವಾಗಿ ಮೈಕೆಲ್ ಫೆರೆರೊ (Michael Ferrero) ಅವರ ಗಮನ ಸೆಳೆಯಿತು. ತಮ್ಮ ಉತ್ಪನ್ನದಿಂದ ಚಾಕೊಲೇಟ್ ಗುಣಮಟ್ಟವನ್ನು ಹೇಗೆ ಹೆಚ್ಚಿಸಬಹುದು ಎಂದು ಜಾನಕಿಲಾಲ್ ವಿವರಿಸಿದರು. ಈ ಭೇಟಿಯು ಜಾಗತಿಕ ಚಾಕೊಲೇಟ್ ಉದ್ಯಮದ ಬಾಗಿಲು ಭಾರತೀಯರಿಗೆ ತೆರೆಯಿತು.
ಮನೋರಮಾ ಇಂಡಸ್ಟ್ರೀಸ್ ಮರುಹುಟ್ಟು: 1,357 ಕೋಟಿಯ ಸಾಮ್ರಾಜ್ಯ
ಕಾಲಕ್ರಮೇಣ, ಅಂದರೆ 2000ನೇ ಇಸವಿಯಲ್ಲಿ ಈ ವ್ಯವಹಾರ ಸ್ಥಗಿತಗೊಂಡಿತು. ಐದು ವರ್ಷಗಳ ಕಾಲ ಈ ಕಂಪನಿಯ ಕೆಲಸಕಾರ್ಯಗಳು ಮುಚ್ಚಿಹೋಗಿದ್ದವು. ಆದರೆ, 2005ರಲ್ಲಿ ಜಾನಕಿಲಾಲ್ ಅವರ ಮೊಮ್ಮಗ ಆಶಿಶ್ ಸರಾಫ್ ಅವರು ಮನೋರಮಾ ಇಂಡಸ್ಟ್ರೀಸ್ ಹೆಸರಿನಲ್ಲಿ ಈ ವ್ಯವಹಾರಕ್ಕೆ ಮರುಜೀವ ನೀಡಿದರು. ಕೇವಲ ಅಡುಗೆಮನೆಯಲ್ಲಿ ಶುರುವಾಗಿದ್ದ ಈ ಕನಸು, ಇಂದು ಬರೋಬ್ಬರಿ 1,357.7 ಕೋಟಿ ರೂ. ಮೌಲ್ಯದ ಬೃಹತ್ ಜಾಗತಿಕ ಕಂಪನಿಯಾಗಿ ಬೆಳೆದು ನಿಂತಿದೆ.
ಇದರ ಅತಿ ದೊಡ್ಡ ವಿಶೇಷತೆ ಎಂದರೆ, ಈ ಉತ್ಪನ್ನಗಳು ಯಾವುದೇ ವಿದೇಶಿ ಲ್ಯಾಬ್‌ಗಳಿಂದ ಬರುತ್ತಿಲ್ಲ. ಬದಲಾಗಿ, ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಬುಡಕಟ್ಟು ಮಹಿಳೆಯರು ಸಂಗ್ರಹಿಸುವ ವಿವಿಧ ರೀತಿಯ ಬೀಜಗಳನ್ನ ಈ ಕಂಪನಿ ಖರೀದಿಸುತ್ತಿದೆ.
ರಾಯ್‌ಪುರದಿಂದ ಶುರುವಾಗುವ ಈ ಕಚ್ಚಾವಸ್ತುಗಳ ಪಯಣ ಇಂದು ವಿಶ್ವದ 84 ದೇಶಗಳನ್ನ ತಲುಪುತ್ತಿದೆ. ಮುಂದಿನ ಬಾರಿ ನೀವು ಫೆರೆರೊ ರೋಚರ್ ಚಾಕೊಲೇಟ್ ಸವಿಯುವಾಗ ಅಥವಾ ದಿ ಬಾಡಿ ಶಾಪ್‌ನ ಮ್ಯಾಂಗೋ ಬಟರ್ ಬಳಸುವಾಗ, ಅದರ ಹಿಂದೆ ಬೀಜಗಳನ್ನ ರುಬ್ಬುತ್ತಿದ್ದ ಭಾರತೀಯ ಮಹಿಳೆಯೊಬ್ಬರ ಶ್ರಮವಿದೆ ಎಂಬುದನ್ನು ಮರೆಯದಿರಿ.


Click it and Unblock the Notifications
