ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಮನೆಗಳು
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಗಡ್ಸಾ ಕಣಿವೆಯಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವುದರ ಜೊತೆಗೆ ಆ ಪ್ರದೇಶದಲ್ಲಿನ ಕೆಲವು ಮನೆಗಳು ಮತ್ತು ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಸೇತುವೆಗಳು ಮತ್ತು ಕೆಲವು ಜಾನುವಾರುಗಳು ಕೊಚ್ಚಿಹೋಗಿವೆ ಮತ್ತು ಭುಂತರ್-ಗಡ್ಸಾ ರಸ್ತೆಯು ಹಲವಾರು ಕಡೆಗಳಲ್ಲಿ ಹಾಳಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ.

ಈ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲ ಸಂಪರ್ಕ ರಸ್ತೆಗಳು ಬಂದ್ ಆಗಿವೆ. ಮಲಾನಾ ಅಣೆಕಟ್ಟಿನ ಗೇಟ್‌ನಲ್ಲಿ ಅಸಮರ್ಪಕ ಕಾರ್ಯದಿಂದಾಗಿ ನೀರು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ, ಕುಲು ಜಿಲ್ಲಾಡಳಿತ ಪಾರ್ವತಿ ನದಿಯ ದಡದಲ್ಲಿ ವಾಸಿಸುವ ಸ್ಥಳೀಯರಿಗೆ ಜಾಗರೂಕರಾಗಿರಲು ಸೂಚಿಸಿದೆ.
ನದಿ ದಡದ ಜನರಿಗೆ ಎಚ್ಚರಿಕೆ
"ನದಿಯ ದಡದಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಿದ್ದೇವೆ, ಮಲಾನಾ ಅಣೆಕಟ್ಟು 2 ಒಡೆದರೆ ಅಲ್ಲಿನ ಜನರನ್ನು ಸ್ಥಳಾಂತರಿಸಲಾಗುವುದು" ಎಂದು ಕುಲು ಉಪ ಆಯುಕ್ತ ಅಶುತೋಷ್ ಗಾರ್ಗ್ ಪಿಟಿಐಗೆ ತಿಳಿಸಿದ್ದಾರೆ.
ಇಲ್ಲಿಯವರೆಗೆ 30 ಕ್ಯೂಸೆಕ್ ನೀರು ಮಾತ್ರ ತುಂಬಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿಲ್ಲ, ಹೊಳೆ ಕೆಳಗಿರುವ ಮಲಾನಾ ಅಣೆಕಟ್ಟೆ 1 ಒಡೆದರೆ ಕೆಲಕಾಲ ನೀರು ಹಿಡಿದಿಟ್ಟು ತೆರವಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಸ್ಥಳೀಯ ಹವಾಮಾನ ಕಚೇರಿಯು ಜುಲೈ 26 ಮತ್ತು 27 ರಂದು ರಾಜ್ಯದ 12 ಜಿಲ್ಲೆಗಳಲ್ಲಿ ಎಂಟು ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಆರೆಂಜ್ ಅಲರ್ಟ್ ನೀಡಿತ್ತು ಮತ್ತು ಭೂಕುಸಿತ, ಹಠಾತ್ ಪ್ರವಾಹ, ಮಣ್ಣಿನ ಕುಸಿತ ಮತ್ತು ನದಿಗಳಲ್ಲಿ ಹೆಚ್ಚಿದ ಹರಿವಿನ ಬಗ್ಗೆ ಎಚ್ಚರಿಕೆ ನೀಡಿದೆ.
ರಾಜ್ಯ ತುರ್ತು ಸ್ಪಂದನಾ ಕೇಂದ್ರದ ಪ್ರಕಾರ, ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ 164 ಜನರು ಸಾವನ್ನಪ್ಪಿದ್ದಾರೆ ಮತ್ತು ಜೂನ್ 24 ರಂದು ಮುಂಗಾರು ಪ್ರಾರಂಭವಾದಾಗಿನಿಂದ ರಾಜ್ಯವು 5,269 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿದೆ.
ಹಲವು ರಾಜ್ಯಗಳಲ್ಲಿ ಮುಂದುವರೆದ ಮಳೆ
ಉತ್ತರ ಭಾರತ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗುಜರಾತ್, ರಾಜಸ್ಥಾನ, ದೆಹಲಿ, ಉತ್ತಾರಖಂಡ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕೂಡ ವ್ಯಾಪಕ ಮಳೆಯಾಗುತ್ತಿದೆ. ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications