ಜ್ಞಾನವಾಪಿ ಮಸೀದಿ: ಬೌದ್ಧ ವಿಹಾರಗಳನ್ನು ಕೆಡವಿ ಹಿಂದೂ ದೇವಾಲಯಗಳ ನಿರ್ಮಾಣ ಎಂದ ಎಸ್‌ಪಿ ನಾಯಕ
ನವದೆಹಲಿ, ಜುಲೈ. 27: ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಕಾನೂನು ತಡೆ ನಡುವೆ, ಸಮಾಜವಾದಿ ಪಕ್ಷದ (ಎಸ್‌ಪಿ) ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಪ್ರಸ್ತುತ ಭಾರತದಲ್ಲಿರುವ ಅನೇಕ ಹಿಂದೂ ದೇವಾಲಯಗಳು ಮತ್ತು ಅನೇಕ ಮಠಗಳು ಹಿಂದೆ ಬೌದ್ಧ ಧಾರ್ಮಿಕ ಸ್ಥಳಗಳಾಗಿದ್ದವು ಎಂದು ಹೇಳಿದ್ದಾರೆ. ಈಗ ಸಮೀಕ್ಷೆ ನಡೆಯುವಂತಿದ್ದರೆ, ಹಿಂದೂ ದೇವಾಲಯದ ಮೊದಲು ಅಲ್ಲಿ ಏನಿದೆ ಎಂಬುದನ್ನು ಸಹ ಸಮೀಕ್ಷೆ ಮಾಡಬೇಕು ಎಂದಿದ್ದಾರೆ.
"ವಿಷಯ (ಜ್ಞಾನವಾಪಿ ವಿವಾದ) ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅದರ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಆದರೆ, ಸಮೀಕ್ಷೆ ನಡೆಯುವಂತ್ತಿದ್ದರೆ, ಹಿಂದೂ ದೇವಾಲಯದ ಮೊದಲು ಏನಿತ್ತು ಎಂಬುದನ್ನೂ ಸಮೀಕ್ಷೆ ಮಾಡಬೇಕು. ಈಗಿನ ಹೆಚ್ಚಿನ ಹಿಂದೂ ದೇವಾಲಯಗಳು, ಮಠಗಳು, ಕಲಿಕಾ ಕೇಂದ್ರಗಳಂತಹ ಬೌದ್ಧ ಧಾರ್ಮಿಕ ಸ್ಥಳಗಳಾಗಿವೆ ಎಂದು ನಾನು ನಂಬುತ್ತೇನೆ. ಅವುಗಳನ್ನು ಕೆಡವಿ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ" ಎಂದು ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.

ಆಡಳಿತಾರೂಢ ಬಿಜೆಪಿಯು ಚುನಾವಣೆಗೆ ಮುನ್ನ ರಾಜಕೀಯ ಲಾಭಾಂಶವನ್ನು ಪಡೆಯಲು ಉದ್ದೇಶಪೂರ್ವಕವಾಗಿ ಇಂತಹ ವಿಷಯಗಳನ್ನು ಮುಂಚೂಣಿಗೆ ತರುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಆರೋಪಿಸಿದ್ದಾರೆ. "ಬಿಜೆಪಿಯು ಚುನಾವಣೆಗೆ ಮುನ್ನ ರಾಜಕೀಯ ಲಾಭವನ್ನು ಪಡೆಯಲು ಉದ್ದೇಶಪೂರ್ವಕವಾಗಿ ಇಂತಹ ಸಮಸ್ಯೆಗಳನ್ನು ಮುಂಚೂಣಿಯಲ್ಲಿ ತರುವ ಮೂಲಕ ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮು ವಿಭಜನೆಯನ್ನು ಸೃಷ್ಟಿಸುತ್ತದೆ" ಎಂದು ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.
2022ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ರಾಜೀನಾಮೆ ನೀಡಿ, ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿನ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಕೇಸರಿ ಪಾಳಯದಲ್ಲಿರುವ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಅನ್ಯಾಯವಾಗಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷಕ್ಕೆ ಸೇರಿದ ಸ್ವಾಮಿ ಪ್ರಸಾದ್ ಮೌರ್ಯ ಹಲವು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.
ತುಳಸಿದಾಸರು ಬರೆದ ರಾಮಚರಿತಮಾನಗಳಲ್ಲಿ ಹಿಂದುಳಿದವರು, ದಲಿತರು ಮತ್ತು ಆದಿವಾಸಿಗಳ ವಿರುದ್ಧ ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿದೆ ಎಂದು ಜನವರಿಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಆರೋಪಿಸಿದ್ದರು. ಇದಕ್ಕಾಗಿ ಹಿಂದೂ ಬಲಪಂಥೀಯ ಸಂಘಟನೆಗಳು ಮಾಜಿ ಸಚಿವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು.












Click it and Unblock the Notifications