ಹಿಮಪಾತದಲ್ಲಿ ಬಲಿಯಾದ ಚಾರಣಿಗರ ಕೊನೆಯ ವಿಡಿಯೋ ಬಹಿರಂಗ
ನವದೆಹಲಿ, ಜುಲೈ 9: ಹಿಮಾಲಯದ ತುದಿಗೇರುವ ಸಾಹಸದ ವೇಳೆಗೆ ಹಿಮಪಾತಕ್ಕೆ ಬಲಿಯಾದ ಅಂತಾರಾಷ್ಟ್ರೀಯ ಪರ್ವತಾರೋಹಿಗಳ ತಂಡದ ಕೊನೆಯ ಹೃದಯ ಕಲಕುವ ವಿಡಿಯೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಪ್ರಖರವಾದ ಬೆಳಕಿನಲ್ಲಿ ಹಿಮಚ್ಛಾದಿತ ಬೆಟ್ಟದ ಕಡಿದಾದ ಹಾದಿಯಲ್ಲಿ ಸಾಗುವ ನಾಲ್ವರು ಬ್ರಿಟನ್, ಇಬ್ಬರು ಅಮೆರಿಕ ಮತ್ತು ಆಸ್ಟ್ರೇಲಿಯಾದ ಒಬ್ಬ ಪರ್ವತಾರೋಹಿ ಹಾಗೂ ಭಾರತದ ಗೈಡ್ ಅವರ 154 ಸೆಕೆಂಡ್‌ಗಳ ವಿಡಿಯೋ ಈಗ ವೈರಲ್ ಆಗಿದೆ.
ಅಲ್ಲಿನ ವಾತಾವರಣ ಪರಿಸ್ಥಿತಿಯಿಂದ ತಳಮಳಕ್ಕೆ ಒಳಗಾಗಿದ್ದ ಚಾರಣಿಗರು ರೋಪ್ ಆಧಾರಿಸಿಕೊಂಡು ಕಷ್ಟಪಟ್ಟು ಹೆಜ್ಜೆ ಹಾಕುತ್ತಿರುತ್ತಾರೆ. ಹಿಮದ ರಾಶಿ ತುಂಬಿಕೊಂಡಿದ್ದ ತುದಿಯತ್ತ ಸಾಗುವುದನ್ನು ವಿಡಿಯೋ ತೋರಿಸುತ್ತದೆ.
'ಇದ್ದಕ್ಕಿದ್ದಂತೆ ಭಾರಿ ಸದ್ದು ಕೇಳಿಸುತ್ತದೆ. ಆ ವಿಡಿಯೋ ಬ್ಲಾಂಕ್ ಆಗಿ ಸ್ಥಗಿತಗೊಳ್ಳುತ್ತದೆ' ಎಂದು ಇಂಡೋ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ವಕ್ತಾರ ವಿವೇಕ್ ಕುಮಾರ್ ಪಾಂಡೆ ತಿಳಿಸಿದರು.

ಅವರು ಅತ್ಯಂತ ಅಪಾಯಕಾರಿ ಮಾರ್ಗವನ್ನು ದಾಟುತ್ತಿದ್ದರು. ಆ ಹಿಮದ ರಾಶಿಯು ಅವರ ತೂಕದ ಕಾರಣ ಕುಸಿದು ಹೋಗಿರಬೇಕು. ಇದರಿಂದ ಹಿಮಪಾತ ಸಂಭವಿಸಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಚಾರಣಿಗರ ಸಾಲಿನಲ್ಲಿ ಕೊನೆಯಲ್ಲಿದ್ದ ಪರ್ವತಾರೋಹಿಗಳು ಕ್ಯಾಮೆರಾದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಚಾರಣಿಗರ ಪೈಕಿ ಏಳು ಮಂದಿಯ ದೇಹ ಹಿಮದೊಳಗೆ ಹೂತುಹೋಗಿತ್ತು.
ಬ್ರಿಟಿಷ್ ತಂಡ ನಾಯಕ, ಮತ್ತೊಬ್ಬ ಪರ್ವತಾರೋಹಿ ಮಾರ್ಟಿನ್ ಮೋರನ್ ಅವರು ಇನ್ನೂ ನಾಪತ್ತೆಯಾಗಿದ್ದಾರೆ. ಬ್ರಿಟನ್‌ನ ಜಾನ್ ಮೆಕ್‌ಲಾರೆನ್, ರುಪರ್ಟ್ ವೆವೆಲ್ ಮತ್ತು ಯಾರ್ಕ್ ವಿಶ್ವವಿದ್ಯಾಲಯದ ಉಪನ್ಯಾಸಕ ರಿಚರ್ಡ್ ಪೇಯ್ನ್, ಅಮೆರಿಕದ ಆಂಟೊನಿ ಸುಡೆಕುಮ್ ಮತ್ತು ರೊನಾಲ್ಡ್ ಬೀಮೆಲ್, ಆಸ್ಟ್ರೇಲಿಯಾದ ಮಹಿಳೆ ರುತ್ ಮೆಕ್‌ಕ್ಯಾನ್ಸ್ ಮತ್ತು ಭಾರತದ ಗೈಡ್ ಚೇತನ್ ಪಾಂಡೆ ಹಿಮಪಾತಕ್ಕೆ ಬಲಿಯಾಗಿದ್ದಾರೆ.
ಒಟ್ಟು 12 ಪರ್ವತಾರೋಹಿಗಳು ಭಾರತದ ಎರಡನೆಯ ಅತ್ಯಂತ ಎತ್ತರದ ಪರ್ವತ ನಂದಾ ದೇವಿಯನ್ನು ಏರಲು ಹೊರಟಿದ್ದರು. ಅವರಲ್ಲಿ ಪರ್ವತದ ಬುಡದಲ್ಲಿದ್ದ ನಾಲ್ವರು ಬ್ರಿಟಿಷ್ ಚಾರಣಿಗರನ್ನು ಪತ್ತೆಹಚ್ಚಿ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿತ್ತು. ರಕ್ಷಿಸಲಾದ ನಾಲ್ವರು ಬ್ರಿಟಿಷರು, ಹಿಮಪಾತಕ್ಕೆ ಬಲಿಯಾದ ಎಂಟು ಮಂದಿಯ ತಂಡದಲ್ಲಿ ಇರಲಿಲ್ಲ. ಅವರು ಪ್ರತ್ಯೇಕವಾಗಿ ಪರ್ವತಾರೋಹಣ ಮಾಡುತ್ತಿದ್ದರು. ಭಾರಿ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದ ಕಾರಣ ಅವರು ಪರ್ವತದ ತಳಭಾಗದಲ್ಲಿಯೇ ಇದ್ದರು. ಇದರಿಂದ ಅವರು ಅಪಾಯದಿಂದ ಪಾರಾಗಿದ್ದರು.
6,100 ಮೀಟರ್ ಎತ್ತರದ ಹಿಮಾವೃತ ಪರ್ವತ ಪ್ರದೇಶದಲ್ಲಿನ ಪ್ರತಿಕೂಲ ಹವಾಮಾನದಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚುವುದು ಅತ್ಯಂತ ಕಷ್ಟಕರವಾಗಿತ್ತು. ಮೇ 26ರಂದು ಈ ತಂಡ ನಾಪತ್ತೆಯಾಗಿತ್ತು. ಸತತ ಹುಡುಕಾಟದ ಬಳಿಕ ಜೂನ್ 3ರಂದು ಸೇನಾ ಹೆಲಿಕಾಪ್ಟರ್ ಕೆಲವು ದೇಹಗಳನ್ನು ಮತ್ತು ಸಾಧನಗಳನ್ನು ಪತ್ತೆಹಚ್ಚಿತ್ತು. ಆದರೆ, ವಿಪರೀತ ಶೀತ ಗಾಳಿಯ ಕಾರಣ ಅಲ್ಲಿ ಇಳಿಯಲು ಸಾಧ್ಯವಾಗುತ್ತಿರಲಿಲ್ಲ.
ಜೀವ ಪಣವಾಗಿಟ್ಟು ಕಾರ್ಯಾಚರಣೆ ನಡೆಸಿದ್ದ ಐಟಿಬಿಪಿ ಸಿಬ್ಬಂದಿ ಕಾಲ್ನಡಿಗೆಯಲ್ಲಿ ತೆರಳಿದ್ದರು. ಮೃತದೇಹಗಳನ್ನು ಹೊತ್ತು ತರುವ ಹಲವು ದಿನ ಅವುಗಳ ಪಕ್ಕವೇ ಮಲಗುವಂತಾಗಿತ್ತು. ಟೆಂಟ್‌ಗಳ ಹೊರಗೆ ಹಿಮ ಮುಚ್ಚಿಕೊಳ್ಳುತ್ತಿದ್ದರಿಂದ ನಾವು ಆ ಮೃತದೇಹಗಳೊಂದಿಗೆ ಸಮಾಧಿಯಾಗುತ್ತಿದ್ದೆವು. ಆದರೆ, ಅದಕ್ಕೆ ನಾವು ಹೆದರಲಿಲ್ಲ. ಇದೆಲ್ಲವೂ ಮಾನವೀಯತೆಯ ಭಾಗ ಎಂದುಕೊಂಡಿದ್ದೆವು ಎಂದು ಐಟಿಬಿಪಿಯ ತಂಡವನ್ನು ಮುನ್ನಡೆಸಿದ್ದ ರತನ್ ಸಿಂಗ್ ಸೊನಾಲ್ ಹೇಳಿದರು.
ವಿಡಿಯೋವನ್ನು ಈ ಕೊಂಡಿಯಲ್ಲಿ ವೀಕ್ಷಿಸಬಹುದು:












Click it and Unblock the Notifications