ಹಿಮಾಚಲ, ಉತ್ತಾರಖಂಡದಲ್ಲಿ ಮುಂದಿನ ಎರಡು ದಿನ ವರುಣಾರ್ಭಟ: ಉಳಿದ ರಾಜ್ಯಗಳ ಹವಾಮಾನ ವರದಿ
ಮುಂದಿನ ಎರಡು ದಿನಗಳ ಕಾಲ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ತಿಳಿಸಿದೆ. ಭಾರತದ ಕೆಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜುಲೈ 17 ರಿಂದ ಪಶ್ಚಿಮ ಕರಾವಳಿಯಲ್ಲಿ ಮಳೆ ಹೆಚ್ಚಳವಾಗಲಿದ್ದು, ಈಶಾನ್ಯ ಭಾರತದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.
ಹಮಾಮಾನ ಇಲಾಖೆ ನೀಡಿರುವ ವರದಿಯಲ್ಲಿ, ಹಿಮಾಚಲ ಪ್ರದೇಶದಲ್ಲಿ ಮುಂದಿನ ಐದು ದಿನಗಳವರೆಗೆ ವ್ಯಾಪಕ ಮಳೆಯಾಗಲಿದೆ ಮತ್ತು ಉತ್ತರಾಖಂಡ ಮತ್ತು ಪೂರ್ವ ಉತ್ತರ ಪ್ರದೇಶವು ಮುಂದಿನ ಮೂರು ದಿನಗಳವರೆಗೆ ಭಾರಿ ಮಳೆಗೆ ಸಾಕ್ಷಿಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಮುಂದಿನ ಐದು ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಜಾರ್ಖಂಡ್ ಮತ್ತು ಒಡಿಶಾದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು. ಜುಲೈ 16-18ರ ಅವಧಿಯಲ್ಲಿ ಮಧ್ಯಪ್ರದೇಶದ ಪೂರ್ವ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜುಲೈ 16 ಮತ್ತು 18 ರಂದು ಮಧ್ಯಪ್ರದೇಶದ ಪಶ್ಚಿಮ ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶ, ಜುಲೈ 16-17 ರಂದು ಛತ್ತೀಸ್‌ಗಢದಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದೆ.
ಭಾರತದ ಇತರೆ ರಾಜ್ಯಗಳಲ್ಲಿ ಹವಾಮಾನ ಮುನ್ಸೂಚನೆ
ದೇಶದ ಪಶ್ಚಿಮ ಭಾಗದಲ್ಲಿ, ಮುಂದಿನ 5 ದಿನಗಳಲ್ಲಿ ಪ್ರತ್ಯೇಕ ಭಾರೀ ಮಳೆಯೊಂದಿಗೆ ಹಗುರದಿಂದ ಸಾಧಾರಣ ಮಳೆಯು ಮುಂದುವರಿಯುವ ಸಾಧ್ಯತೆಯಿದೆ. ಗೋವಾ ಮತ್ತು ಮಧ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಜುಲೈ 18-20 ರವರೆಗೆ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ.
ಗುಜರಾತ್ ರಾಜ್ಯಗಳ ಹಲವು ಭಾಗಗಳಲ್ಲಿ ಜುಲೈ 19-20 ರಂದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಜುಲೈ 16 ರಂದು ಅರುಣಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಮತ್ತು ಮಿಂಚಿನೊಂದಿಗೆ ಸಾಕಷ್ಟು ವ್ಯಾಪಕವಾದ ಮಳೆಯಾಗುತ್ತದೆ; ಜುಲೈ 16 ಮತ್ತು 17 ರಂದು ಅಸ್ಸಾಂ ಮತ್ತು ಮೇಘಾಲಯ, ಜುಲೈ 16 ಮತ್ತು 17 ರಂದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಉತ್ತಮ ಮಳೆಯಾಗಲಿದೆ.
ವಾಯುವ್ಯ ಹಿಮಾಲಯ ಪ್ರದೇಶಗಳಲ್ಲಿ ನಿರಂತರ ಮಳೆಯ ನಡುವೆ ಭೂಕುಸಿತದಿಂದಾಗಿ ಹಲವಾರು ರಸ್ತೆಗಳಲ್ಲಿ ಪ್ರಯಾಣ ನಿರ್ಬಂಧಿಸಲಾಗಿದೆ ಮತ್ತು ಹಲವು ಜನ ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಭಾನುವಾರ ಪಿಥೋರಗಢ್ ಜಿಲ್ಲೆಯ ಗಡಿ ಪ್ರದೇಶದ ಧಾರ್ಚುಲಾದಲ್ಲಿ ಭೂಕುಸಿತವಾಗಿದ್ದು ಬಲ್ವಕೋಟ್-ಧಾರ್ಚುಲಾ ರಸ್ತೆಯನ್ನು ನಿರ್ಬಂಧಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಉತ್ತರಾಖಂಡದ ಗರ್ವಾಲ್ ಜಿಲ್ಲೆಯ ಪೌರಿ ತೆಹಸಿಲ್‌ನ ಚಾಮಿ ಗ್ರಾಮದ ಬಳಿ ಭೂಕುಸಿದು, ಬಂಡೆಗಳು ರಸ್ತೆಗಳ ಮೇಲೆ ಉರುಳಿದ ಕಾರಣ ಯಮುನೋತ್ರಿ ಹೆದ್ದಾರಿ ಸಂಖ್ಯೆ 123 ಅನ್ನು ನಿರ್ಬಂಧಿಸಲಾಗಿದೆ.
ಪ್ರವಾದಿಂದ ಹಿಮಾಚಲ ಪ್ರದೇಶದಲ್ಲಿ ಸುಮಾರು ₹ 5,000 ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಕಳೆದ ವರ್ಷಗಳಲ್ಲಿ ಇಂತಹ ಪರಿಸ್ಥಿತಿಯನ್ನು ನಾನು ನೋಡಿಲ್ಲ, ಮನೆ ಸಂಪೂರ್ಣ ಹಾನಿಗೀಡಾದವರಿಗೆ ₹1,45,000 ನೀಡಿದ್ದೇವೆ ಮತ್ತು ಮನೆ ಭಾಗಶಃ ಹಾನಿಗೊಳಗಾದವರಿಗೆ ₹1 ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಿಎಂ ಸುಖು ಹೇಳಿದರು.












Click it and Unblock the Notifications