Himachal Politics: ಕಾಂಗ್ರೆಸ್‌ಗೆ ಕೈ ಕೊಟ್ಟ 6 ಶಾಸಕರು, ಬಿಜೆಪಿ ಸೇರ್ಪಡೆ
ಶಿಮ್ಲಾ ಮಾರ್ಚ್ 23: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಪಕ್ಷದ ಬಂಡಾಯ ಮಾಜಿ ಶಾಸಕರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಹೌದು... ರಾಜೇಂದ್ರ ರಾಣಾ, ಸುಧೀರ್ ಶರ್ಮಾ, ಚೈತನ್ಯ ಶರ್ಮಾ, ರವಿ ಠಾಕೂರ್, ಇಂದರ್ ದತ್ ಲಖನ್‌ಪಾಲ್ ಮತ್ತು ದೇವೇಂದ್ರ ಕುಮಾರ್ ಒಟ್ಟು ಆರು ಜನ ಶಾಸಕರು ಬಿಜೆಪಿ ಪಕ್ಷ ಸೇರಿದ್ದಾರೆ. ಈ ಶಾಸಕರನ್ನು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಉಚ್ಛಾಟಿಸಿದ್ದರು.

ಹಿಮಾಚಲದಲ್ಲಿ ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆದ ವೇಳೆ ಕಾಂಗ್ರೆಸ್‌ಗೆ ಶಾಸಕರ ಸಂಖ್ಯೆ ಹೆಚ್ಚಾಗಿದ್ದು ಕಾಂಗ್ರೆಸ್ ಪಕ್ಷ ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ಆದರೆ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಜೊತೆಗೆ ಮೂರು ಜನ ಪಕ್ಷೇತರ ಶಾಸಕರ ಮತದಾನದಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸಮಬಲ ಬಂದಿತು. ಬಳಿಕ ಲಾಟ್ ಎತ್ತುವ ಮೂಲಕ ಬಿಜೆಪಿಯ ಹರ್ಷ್ ಮಹಾಜನ್ ಗೆದ್ದರು. ಇದರಿಂದಾಗಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಆರು ಶಾಸಕರ ವಿರುದ್ಧದ ದೂರನ್ನು ಶಾಸಕ ಮತ್ತು ಸಚಿವ ಹರ್ಷವರ್ಧನ್ ಸ್ಪೀಕ್‌ಗೆ ನೀಡಿದ್ದರು. ನಂತರ ಸ್ವೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಎರಡು ಪಕ್ಷಗಳ ವಾದ ಆಲಿಸಿ ಪಕ್ಷದ ವಿಪ್ ಉಲ್ಲಂಘಿಸಿದ ಎಲ್ಲಾ ಆರು ಶಾಸಕರನ್ನು ಅನರ್ಹಗೊಳಿಸಿದ್ದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ 3 ಜನ ಸ್ವತಂತ್ರ ಶಾಸಕರು ವಿಧಾನಸಭೆ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದರು. ಸುಮಾರು 25 ದಿನಗಳ ನಂತರ ಹಿಮಾಚಲಕ್ಕೆ ಮರಳಿದ ಈ ಸ್ವತಂತ್ರ ಶಾಸಕರು ಶಿಮ್ಲಾದಲ್ಲಿ ಅಸೆಂಬ್ಲಿ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದರು.
ಸದ್ಯ ಒಟ್ಟು 68 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಈಗ 34 ಸ್ಥಾನಗಳಿಗೆ ಕುಸಿದಿದೆ. ಅದೇ ಸಮಯದಲ್ಲಿ, ಉಚ್ಛಾಟನೆಗೊಂಡಿರುವ 6 ಬಂಡಾಯ (ಮಾಜಿ) ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದರಿಂದ ಮತ್ತು 3 ಸ್ವತಂತ್ರ ಶಾಸಕರು ರಾಜೀನಾಮೆ ನೀಡಿದ ಕಾರಣ ಬಿಜೆಪಿಯ ಸಂಖ್ಯೆಯೇನು ಹೆಚ್ಚಾಗುವುದಿಲ್ಲ.
ಹಮೀರ್‌ಪುರ ಸದರ್‌ನ ಸ್ವತಂತ್ರ ಶಾಸಕ ಆಶಿಶ್ ಶರ್ಮಾ, ನಲಗಢದಿಂದ ಕೆಎಲ್ ಠಾಕೂರ್ ಮತ್ತು ಡೆಹ್ರಾದಿಂದ ಹೋಶಿಯಾರ್ ಸಿಂಗ್ ಅವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ರಾಜ್ಯದ ಮಾಜಿ ಸಿಎಂ ಜೈರಾಮ್ ಠಾಕೂರ್ ಕೂಡ ಜೊತೆಗಿದ್ದರು. ಎಲ್ಲರೂ ಚಾರ್ಟರ್ಡ್ ವಿಮಾನದ ಮೂಲಕ ದೆಹಲಿಯಿಂದ ಶಿಮ್ಲಾ ತಲುಪಿದ್ದರು ಎಂದು ಹೇಳಲಾಗಿದೆ.
ರಾಜ್ಯಪಾಲರ ಭೇಟಿ
ಹಿಮಾಚಲ ಪ್ರದೇಶ ವಿಧಾನಸಭೆಯ ಮೂವರು ಸ್ವತಂತ್ರ ಸದಸ್ಯರು, ಡೆಹ್ರಾ ವಿಧಾನಸಭಾ ಕ್ಷೇತ್ರದ ಹೋಶಿಯಾರ್ ಸಿಂಗ್, ನಲಗಢ ವಿಧಾನಸಭಾ ಕ್ಷೇತ್ರದ ಕೆಎಲ್ ಠಾಕೂರ್ ಮತ್ತು ಹಮೀರ್‌ಪುರ ವಿಧಾನಸಭಾ ಕ್ಷೇತ್ರದ ಆಶಿಶ್ ಶರ್ಮಾ ಅವರು ಶುಕ್ರವಾರ ರಾಜಭವನದಲ್ಲಿ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿಯಾದರು. ಈ ಶಾಸಕರು ವಿಧಾನಸಭೆ ಸ್ಪೀಕರ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ರಾಜ್ಯಪಾಲರಿಗೆ ತಿಳಿಸಿದರು. ವಿಧಾನಸಭಾಧ್ಯಕ್ಷರನ್ನು ಭೇಟಿಯಾಗದ ಕಾರಣ ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.












Click it and Unblock the Notifications