ಉತ್ತರಾಖಂಡದಲ್ಲಿ ಭೀಕರ ಮಳೆ: ಕನಿಷ್ಠ 18 ಮಂದಿ ನಾಪತ್ತೆ, ಕೊಚ್ಚಿಹೋದ ಇಪ್ಪತ್ತು ಮನೆಗಳು
ಡೆಹ್ರಾಡೂನ್ (ಉತ್ತರಾಖಂಡ), ಆಗಸ್ಟ್ 18: ಟೌಂಸ್ ನದಿಯಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟು, ಕನಿಷ್ಠ 18 ಮಂದಿ ನಾಪತ್ತೆಯಾಗಿ, ಇಪ್ಪತ್ತು ಮನೆಗಳು ಕೊಚ್ಚಿಹೋದ ಘಟನೆ ಭಾನುವಾರ ಉತ್ತರಾಖಂಡ್ ರಾಜ್ಯದ ಉತ್ತರಕಾಶಿಯಲ್ಲಿ ನಡೆದಿದೆ. ಉತ್ತರ ಕಾಶಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಟೌಂಸ್ ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ.
ಈಚೆಗೆ ಸ್ಥಳೀಯ ಮಾರುಕಟ್ಟೆಗಳ ಒಳಗೂ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ಘೋಷಿಸಲಾಗಿದೆ. ಇನ್ನು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಉತ್ತರ ಕಾಶಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ವಿಪತ್ತು ನಿರ್ವಹಣಾ ಕಾರ್ಯದರ್ಶಿಗೆ ಸೂಕ್ತ ಪರಿಹಾರ ಕಾಮಗಾರಿ ಹಾಗೂ ಸ್ಥಳಾಂತರ ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಜತೆಗೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಂತೆ ನಿರ್ದೇಶಿಸಿದ್ದಾರೆ.
ರಾಜ್ಯ ಸರಕಾರದಿಂದ ಇಂಡೋ- ಟಿಬೆಟನ್ ಬಾರ್ಡರ್ ಫೋರ್ಸ್ (ಐಟಿಬಿಪಿ), ಎನ್ ಡಿಆರ್ ಎಫ್, ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿದೆ. ಆದರೆ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ.

ಈ ಭಾಗದಲ್ಲಿ ಗಂಗೋತ್ರಿ ಹೆದ್ದಾರಿ ಅತಿ ಮುಖ್ಯವಾದ ರಸ್ತೆಯಾಗಿದ್ದು, ಭೂ ಕುಸಿತದ ಕಾರಣಕ್ಕೆ ಬಂದ್ ಮಾಡಲಾಗಿದೆ. ದಿಢೀರ್ ಪ್ರವಾಹ ಹಾಗೂ ಮೇಘ ಸ್ಫೋಟದ ಕಾರಣಕ್ಕೆ ರಾಜ್ಯದ ಹಲವು ಪ್ರದೇಶದಲ್ಲಿ ಜನ ಜೀವನ ಅತಂತ್ರವಾಗಿದೆ. ಸೋಮವಾರದಂದು ಶಾಲೆಗಳಿಗೆ ರಜಾ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಮುಂದಿನ ಮೂರು ದಿನದಲ್ಲಿ ಉತ್ತರ ಕಾಶಿಯ ಜತೆಗೆ ಚಮೋಲಿ, ಪಿತೋರ್ ಘರ್, ಡೆಹ್ರಾಡೂನ್, ಪೌರಿ ಹಾಗೂ ನೈನಿತಾಲ್ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications