Rain Update: ಭೀಕರ ಮಳೆ, ಗಾಳಿಗೆ ತತ್ತರಿಸಿದ ದೇವರ ನಾಡು!
ಕೇರಳ: ಕರ್ನಾಟಕದಲ್ಲಿ ಭಾರಿ ಪ್ರಮಾಣದ ಮಳೆ ಬೀಳುತ್ತಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಎಡಬಿಡದೆ ಮಳೆ ಸುರಿಯುತ್ತಿದೆ. ಇದೇ ಸಂದರ್ಭದಲ್ಲಿ ಕೇರಳ ಕೂಡ ಭೀಕರ ಮಳೆಗೆ ತತ್ತರಿಸಿ ಹೋಗಿದ್ದು, ಮಳೆಯ ಆರ್ಭಟಕ್ಕೆ ಹಲವು ಜಿಲ್ಲೆಗಳ ಜನರು ನರಳುವ ಪರಿಸ್ಥಿತಿ ಬಂದಿದೆ. ಹಾಗಾದ್ರೆ ಕೇರಳದಲ್ಲಿ ಮಳೆಯಾದರೆ ಕರ್ನಾಟಕಕ್ಕೂ ಎಫೆಕ್ಟ್ ಇದೆಯಾ? ಬನ್ನಿ ತಿಳಿಯೋಣ.
ಈ ಬಾರಿ ಮುಂಗಾರು ಮಳೆಯ ಆಗಮನವೇ ತಡವಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಮುಂಗಾರು ನಿಧಾನವಾಗಿದ್ದು ಭಾರಿ ಆತಂಕ ಮೂಡಿಸಿತ್ತು. ಆದರೆ ಲೇಟ್ ಆಗಿ ಬಂದರೂ ಲೇಟೆಸ್ಟ್ ಎಂಟ್ರಿ ಕೊಟ್ಟಿದ್ದಾನೆ ಮಳೆರಾಯ. ಬರೋಬ್ಬರಿ 1 ತಿಂಗಳಿಂದ ಮಳೆ ಅಬ್ಬರಿಸಿದೆ. ಅದರಲ್ಲೂ ಕರ್ನಾಟಕದ ಮಲೆನಾಡು ಭಾಗ & ಕರವಾಳಿ ಪ್ರದೇಶದಲ್ಲಿ ಮಳೆಯಾರ್ಭಟ ತೀವ್ರವಾಗಿದೆ. ಅದೇ ರೀತಿ ಮುಂಗಾರು ಎಂಟ್ರಿ ಕೊಡುವ ರಾಜ್ಯ ಕೇರಳದಲ್ಲೂ ಮಳೆಯ ಆರ್ಭಟ ಬಲು ಜೋರಾಗಿದೆ. ಹೀಗಾಗಿ ಕೇರಳದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ ಹವಾಮಾನ ಇಲಾಖೆ.

ಭಾರಿ ಮಳೆ ಭೀತಿ, ಶಾಲೆಗಳಿಗೆ ರಜೆ!
ಕೇರಳದ ಕಣ್ಣೂರು, ಕೋಝಿಕೋಡ್, ವಯನಾಡು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯ ಭೀತಿ ಆವರಿಸಿದೆ. ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ನದಿಗಳ ಬಳಿ ಸುಳಿಯದಂತೆ ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲೇ ಪ್ರವಾಸಿಗರಿಗೆ ಕೂಡ ಎಚ್ಚರಿಕೆ ಸಂದೇಶ ರವಾನಿಸಿದೆ ಸ್ಥಳೀಯ ಆಡಳಿತ. ಅಲ್ಲದೆ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮಳೆ ಕಡಿಮೆ ಆದ ನಂತರ ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಕಾವೇರಿ ನದಿಗೆ ಭಾರಿ ನೀರು?
ಇನ್ನು ಕೇರಳದಲ್ಲಿ ಅದರಲ್ಲೂ ವಯನಾಡು ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯು ಬೀಳುತ್ತಿದ್ದು, ಕಾವೇರಿ ನದಿ ಪಾತ್ರದಲ್ಲೂ ನೀರಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರು ಹಾಗೂ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಆರ್‌ಎಸ್ ಜಲಾಶಯ ಈ ಬಾರಿ ಕೂಡ ತುಂಬುವ ನಿರೀಕ್ಷೆ ಇದೆ. ಹಾಗೇ ಕೊಡಗು ಜಿಲ್ಲೆ ಕೂಡ ಭಾರಿ ಮಳೆ ಕಾರಣ ಪರದಾಡುತ್ತಿದೆ. ಕಳೆದ ತಿಂಗಳು ಒಣಗಿ ಹೋಗಿದ್ದ ಡ್ಯಾಂಗಳು ಈಗ ಮತ್ತೆ ತುಂಬಿ ತುಳುಕುತ್ತಿವೆ. ರೈತರ ಮೊಗದಲ್ಲಿ ಹರ್ಷ ಹರಡಿದ್ದರೂ, ನೆರೆ ಆತಂಕ ಕೂಡ ಆವರಿಸಿದೆ.

ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್
ಇನ್ನು ಕನ್ನಡಿಗರ ನಾಡಿನ ಜೀವನದಿ ಕಾವೇರಿ ಹುಟ್ಟುವ ಪುಣ್ಯಸ್ಥಳ ಕೊಡಗು ಕೂಡ ಭಾರಿ ಮಳೆಗೆ ತತ್ತರಿಸಿದೆ. ಕೊಡಗಿನಲ್ಲಿ ಧಾರಾಕಾರ ಮಳೆಯಾಗಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ & ಕೊಡಗು ಜಿಲ್ಲೆಗಳಲ್ಲಿ ಜುಲೈ 24 ಹಾಗೂ 25ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 26ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ. ಹೀಗಾಗಿ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನ ಕೈಗೊಳ್ಳಲಾಗಿದೆ.
ಮಲೆನಾಡು ಭಾಗ ಹಾಗೂ ಕರಾವಳಿ ಮಾತ್ರವಲ್ಲದೆ ಬೆಳಗಾವಿ, ಹಾಸನ, ಹಾವೇರಿ ಸೇರಿ ಬಳ್ಳಾರಿಯಲ್ಲೂ 24ರಿಂದ 28ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಹೀಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯಪುರದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.











Click it and Unblock the Notifications