ತೀವ್ರ ಮಳೆಯ ಮುನ್ಸೂಚನೆ: ತಮಿಳುನಾಡು, ಪುದುಚೇರಿಯ ಹಲವು ನಗರಗಳಲ್ಲಿ ಶಾಲೆಗಳು ಬಂದ್
ಚೆನ್ನೈ, ನ.3: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಮಿಳುನಾಡಿನ ಜನ ಹೈರಾಣಾಗಿದ್ದಾರೆ. ಇನ್ನೂ ಹಲವು ದಿನ ತಮಿಳುನಾಡಿನಾದ್ಯಂತ ಮಳೆಯಾಗುವ ಸೂಚನೆ ಇದ್ದು ತಮಿಳುನಾಡು, ಪುದುಚೇರಿಯ ಹಲವು ನಗರಗಳಲ್ಲಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇಂದು ಕಡಲೂರು, ಮೈಲಾದುತುರೈ ಮತ್ತು ವಿಲ್ಲುಪುರಂ ಸೇರಿದಂತೆ ತಮಿಳುನಾಡಿನ ಮೂರು ಜಿಲ್ಲೆಗಳಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಚೆನ್ನೈ ಹವಾಮಾನ ಕೇಂದ್ರ ತಿಳಿಸಿದೆ. ಪುದುಚೇರಿ ಸಚಿವ ಎ ನಮಸ್ಶಿವಾಯಂ ಅವರು ಮಾತನಾಡಿ, "ಇಂದು (ನವೆಂಬರ್ 03) ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಭಾರೀ ಮಳೆಯಾಗುವ ಬಗ್ಗೆ ಚೆನ್ನೈ ಹವಾಮಾನ ಕೇಂದ್ರ ಘೋಷಿಸಿದೆ. ಹೀಗಾಗಿ ಪುದುಚೇರಿ ಮತ್ತು ಕಾರೈಕಲ್‌ನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ" ಎಂದು ಹೇಳಿದರು.

ನವೆಂಬರ್ 2 ರಿಂದ ನವೆಂಬರ್ 6 ರವರೆಗೆ ತಮಿಳುನಾಡು ಮತ್ತು ಕೇರಳದಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಪ್ರತ್ಯೇಕವಾದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚೆನ್ನೈ ಪ್ರಾದೇಶಿಕ ಹವಾಮಾನ ಕೇಂದ್ರ ಗುರುವಾರ ಬೆಳಗ್ಗೆ ಬಿಡುಗಡೆ ಮಾಡಿದ ಹವಾಮಾನ ವರದಿಯ ಪ್ರಕಾರ, "ತಮಿಳುನಾಡಿನ ಕಡಲೂರು, ಅರಿಯಲೂರು, ಮೈಲಾಡುತುರೈ, ತಂಜಾವೂರು, ತಿರುವರೂರು, ನೀಲಗಿರಿ ಮತ್ತು ಕರೂರ್ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮತ್ತು ಮುಂದಿನ ಮೂರು ಗಂಟೆಗಳ ಕಾಲ ಕಾರೈಕಲ್‌ನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ"

ಮುಂದಿನ ಮೂರು ಗಂಟೆಗಳಲ್ಲಿ ತಮಿಳುನಾಡಿನ ಚೆಂಗಲ್ಪಟ್ಟು, ಕಾಂಚೀಪುರಂ, ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.












Click it and Unblock the Notifications