India Weather: ವಾಯಭಾರ ಕುಸಿತ ನಿರೀಕ್ಷೆ, 7 ದಿನ ಈ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ
ನವದೆಹಲಿ, ಜನವರಿ 27: ದೇಶದ ಅರ್ಧ ಭಾಗದಲ್ಲಿ ಒಣಹವೆ ದಾಖಲಾದರೆ, ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಮಳೆಯ ಎಚ್ಚರಿಕೆ ನೀಡಲಾಗಿದೆ. ಜನವರಿ ಅಂತ್ಯಕ್ಕೆ ದೇಶದ ಪಶ್ಚಿಮ ಭಾಗಗಳಲ್ಲಿ ಎರಡು ಮೂರು ಕಡೆಗಳಲ್ಲಿ ವಾಯುಭಾರ ಕುಸಿತ ಕಂಡು ಬರುವ ನಿರೀಕ್ಷೆಗಳು ದಟ್ಟವಾಗಿದೆ. ಪರಿಣಾಮವಾಗಿ ಫೆಬ್ರವರಿ ಮೊದಲ ವಾರಪೂರ್ತಿ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಇದೇ ಜನವರಿ 29 ರಂದು ಹಿಮಾಲಯ ವ್ಯಾಪ್ತಿಯಲ್ಲಿ ಹಾಗೂ ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತಗಳು ಸಂಭವಿಸಲಿವೆ. ಈ ಹವಾಮಾನ ಬದಲಾವಣೆಗಳು, ನಿರಂತರ ವೈಪರಿತ್ಯಗಳ ಪ್ರಭಾವದಿಂದ ಫೆಬ್ರವರಿ ತಿಂಗಳು ಮೊದಲ ವಾರವೇ ಭಾರೀ ಮಳೆ ಎಚ್ಚರಿಕೆ ಕೊಡಲಾಗಿದೆ.

ಫೆಬ್ರವರಿ ಮೊದಲ ವಾರ ಎಲ್ಲೆಲ್ಲಿ ಮಳೆ
ಈಗಾಗಲೇ ತೀವ್ರ ಚಳಿಗೆ, ಜೋರು ಮಳೆಗೆ ದೆಹಲಿ, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳು ಸೇರಿದಂತೆ ಪ್ರಯಾಗರಾಜ್ ಮೊದಲಾದ ಪ್ರದೇಶಗಳು ತತ್ತರಿಸಿವೆ. ಇದೀಗ ಮತ್ತೆ ಫೆಬ್ರವರಿ ಮೊದಲ ವಾರದಲ್ಲಿ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಲಕ್ಷಣಗಳು ಇವೆ.
ಫೆಬ್ರವರಿ 1ರಿಂದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತಿ ಧಾರಾಕಾರ ಮಳೆ ಆಗಲಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜ್ಯಗಳ ಅನೇಕ ಪ್ರದೇಶಗಳಲ್ಲಿಯೂ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕೆಲವು ಕಡೆಗಳಲ್ಲಿ ಹಿಮಪಾತದ ಮುನ್ಸೂಚನೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಉತ್ತರ ಭಾರತ ಉದ್ದೇಶಿತ ಮಳೆ ಬರುವ ರಾಜ್ಯಗಳ ಹೊರತಾಗಿ ಅಸ್ಸಾಂ, ಮೇಘಾಲಯ, ಗುಜರಾತ್, ಉತ್ತರ ಪ್ರದೇಶದ ಕೆಲವು ಪ್ರದೇಶಗಳು ಒಳಗೊಂಡಂತೆ ವಿವಿಧ ಕಡೆಗಳಲ್ಲಿ ಶೀತ ಅಲೆಯ ನಿರೀಕ್ಷೆ ಇದೆ. ಚಳಿ ಮಳೆ ನಡುವೆ ದಕ್ಷಿಣ ಭಾರತದ ಕೆಲವು ಕಡೆಗಳಲ್ಲಿ ಒಣಹವೆ ಮುಂದುವರಿಯಲಿದೆ.

ಇನ್ನೂ ಮುಂದಿನ 24ಗಂಟೆಗಳ ಕಾಲ ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಚಳಿ ಮುಂದುವರಿಯಲಿದೆ. ಕನಿಷ್ಠ ತಾಪಮಾನ ಎರಡರಿಂದ ನಾಲ್ಕು ಡಿಗ್ರಿಗಳವರೆಗೆ ಹೆಚ್ಚಾಗಬಹುದು. ನಂತರ ಚಳಿ ಕ್ರಮೇಣ ಇಳಿಕೆ ಆಗಿ ಫೆಬ್ರವರಿ ಮೊದಲ ವಾರದ ಹೊತ್ತಿಗೆ ಈ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಉಂಟಾಗಲಿದೆ. ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ಹಿಂಗಾರು ಮಳೆ ಅಂತ್ಯ ಶೀಘ್ರ
ದೇಶದ ಪಶ್ಚಿಮ ಭಾಗಗಳಲ್ಲಿ ಉಂಟಾಗುವ ಹವಾಮಾನ ವೈಪರಿತ್ಯಗಳಿಂದ ಮುಂದಿನ ಒಂದು ವಾರದ ಮಳೆ ಆಗಲಿದೆ. ಮಳೆ ಆರ್ಭಟ ನಡುವೆಯೋ ಹಿಂಗಾರು ಮಾರುತುಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆ ಇದೆ. ಕೆಲವೇ ದಿನಗಳಲ್ಲಿ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಶೀಗ್ರವೇ ವಿದಾಯ ಹೇಳಲಿದೆ. ಬಿರು ಬೇಸಿಗೆ ಮುಂದುವರಿಯಲಿದೆ.












Click it and Unblock the Notifications