ಗುಜರಾತಿನಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಮೊದಲ ವಾಣಿಜ್ಯ ಬ್ಯಾಚ್ ಬಿಡುಗಡೆ
ನವದೆಹಲಿ, ಆಗಸ್ಟ್ 29: ಭಾರತದಲ್ಲಿ ವಾಣಿಜ್ಯ ಉಪಯೋಗಕ್ಕೋಸ್ಕರ ಉತ್ಪಾದಿಸಿದ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಬ್ಯಾಚ್ ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯಾ ಬಿಡುಗಡೆಗೊಳಿಸಿದರು.
ಗುಜರಾತಿನ ಅಂಕಲೇಶ್ವರ ಕೆಂದ್ರದಲ್ಲಿ ಉತ್ಪಾದಿಸಿದ ಕೊವಾಕ್ಸಿನ್ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆಗೊಳಿಸಿದ ಕೇಂದ್ರ ಆರೋಗ್ಯ ಸಚಿವರು ಅದನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕೋವಿಡ್ -19 ವಿರುದ್ಧ ಭಾರತದ ಹೋರಾಟದಲ್ಲಿ ಇದು ಮಹತ್ವದ ಕ್ಷಣ ಎಂದು ಹೇಳಿದರು. ಕೋವಿಡ್ -19 ಲಸಿಕೆಗಳ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವು ಭಾರತದಲ್ಲಿ ಲಸಿಕೆ ನೀಡುವ ಕಾರ್ಯಕ್ರಮದ ವೇಗಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದರು.
ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದ ಕೊಡುಗೆಯ ಕುರಿತು ಮಾತನಾಡಿದ ಅವರು, "ಕೊವಿಡ್ ಪರಿಸ್ಥಿತಿ ಎದುರಿಸಲು ವಿದೇಶಗಳಿಗೆ ಅಗತ್ಯವಿರುವ ಔಷಧಿಗಳನ್ನು ಪೂರೈಸುವ ಮೂಲಕ ನೆರವು ನೀಡುವಲ್ಲಿ ಭಾರತ ಸದಾ ಮುಂಚೂಣಿಯಲ್ಲಿರುತ್ತದೆ. ಭಾರತದಲ್ಲಿ ಝೈಡಸ್ ಕ್ಯಾಡಿಲಾ ಮತ್ತು ಭಾರತ್ ಬಯೋಟೆಕ್ ಎಂಬ ಎರಡು ಕಂಪನಿಗಳು ಲಸಿಕೆ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ತೊಡಗಿರುವುದು ದೇಶಕ್ಕೆ ಹೆಮ್ಮೆ ಸಂಗತಿಯಾಗಿದೆ. ಅಂಕಲೇಶ್ವರ ಕಾರ್ಖಾನೆಯು ಇಂದಿನಿಂದ ತಿಂಗಳಿಗೆ 1 ಕೋಟಿ ಡೋಸ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ," ಎಂದು ಹೇಳಿದರು.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಹೆಚ್ಚಳ:
ಭಾರತದಲ್ಲಿ ಕೊವಾಕ್ಸಿನ್ ಉತ್ಪಾದನೆ ಸ್ಥಿತಿಯ ಕುರಿತು ಮಾತನಾಡಿದ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯಾ, ಭಾರತ್ ಬಯೋಟೆಕ್ ಸಂಸ್ಥೆಯು ಈಗಾಗಲೇ ಹೈದರಾಬಾದ್, ಮಾಲೂರು, ಬೆಂಗಳೂರು ಮತ್ತು ಪುಣೆ ಕ್ಯಾಂಪಸ್ ಗಳಲ್ಲಿ ಅನೇಕ ಉತ್ಪಾದನಾ ಸೌಲಭ್ಯಗಳನ್ನು ನಿಯೋಜಿಸಿದೆ. ಚಿರೋನ್ ಬೆಹ್ರಿಂಗ್, ಅಂಕಲೇಶ್ವರ ಕೊವಾಕ್ಸಿನ್ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು. "2020ರಲ್ಲಿ ನಿರ್ಮಿಸಲಾದ ಹೊಸ ಫೈಲಿಂಗ್ ಸೌಲಭ್ಯವನ್ನು ಈಗ ಕೊವಾಕ್ಸಿನ್ ಉತ್ಪಾದನೆಗೆ ಬಳಸಲಾಗುತ್ತಿದೆ. ಕೊವಾಕ್ಸಿನ್ ಉತ್ಪಾದನೆಯು ಜೂನ್ ಆರಂಭದಲ್ಲಿ ಪ್ರಾರಂಭವಾಯಿತು, ಮೊದಲು ತಂಡವು ಉಪಕರಣದ ಕಾರ್ಯವನ್ನು ಅಧ್ಯಯನ ಮಾಡಲು ಎಂಜಿನಿಯರಿಂಗ್ ಬ್ಯಾಚ್ಗಳನ್ನು ಕಾರ್ಯಗತಗೊಳಿಸಿತು. ಅಂಕಲೇಶ್ವರ ಸೌಲಭ್ಯಗಳಿಂದ ತಯಾರಿಸಿದ ಉತ್ಪನ್ನಗಳು ಸೆಪ್ಟೆಂಬರ್ 2021 ರಿಂದ ಪೂರೈಕೆಗೆ ಲಭ್ಯವಿರುತ್ತವೆ," ಎಂದು ಮಾಂಡವೀಯಾ ಹೇಳಿದರು.

1 ಬಿಲಿಯನ್ ಡೋಸ್ ಲಸಿಕೆ ಉತ್ಪಾದನೆ ಗುರಿ:
"ಜಾಗತಿಕ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಾನದಂಡಗಳೊಂದಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ನಮ್ಮ ಗುರಿಯನ್ನು ಈಗ ಸಾಧಿಸಲಾಗಿದೆ. ನಾವು ಈಗ ವಾರ್ಷಿಕ 1.0 ಬಿಲಿಯನ್ ಡೋಸ್ ಸಾಮರ್ಥ್ಯದ ಗುರಿಯತ್ತ ಸಾಗುತ್ತಿದ್ದೇವೆ." ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣಾ ಎಲ್ಲಾ ಹೇಳಿದ್ದಾರೆ. ಭಾರತ್ ಬಯೋಟೆಕ್ ಹೆಚ್ಚಿನ ಉತ್ಪಾದನೆಗಾಗಿ ಜೈವಿಕ ಸುರಕ್ಷತೆ ನಿಯಂತ್ರಣದಲ್ಲಿ ನಿಷ್ಕ್ರಿಯಗೊಳಿಸಿದ ವೈರಲ್ ಲಸಿಕೆಗಳ ವಾಣಿಜ್ಯ ಪ್ರಮಾಣದ ತಯಾರಿಕೆಯಲ್ಲಿ ಪೂರ್ವ ಪರಿಣತಿಯನ್ನು ಹೊಂದಿರುವ ಇತರ ದೇಶಗಳ ತಯಾರಕರೊಂದಿಗೆ ಉತ್ಪಾದನಾ ಪಾಲುದಾರಿಕೆ ಅನ್ವೇಷಿಸುತ್ತಿದೆ ಎಂದು ಹೇಳಿದರು.
ಲಸಿಕೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಗಣ್ಯರು:
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಮನ್ಸುಖ್ ಮಾಂಡವಿಯಾ ಇಂದು ಕೊವ್ಯಾಕ್ಸಿನ್ ಮೊದಲ ವಾಣಿಜ್ಯ ಬ್ಯಾಚ್ ಅನ್ನು ಗುಜರಾತ್ ಅಂಕಲೇಶ್ವರದಲ್ಲಿರುವ ಭಾರತ್ ಬಯೋಟೆಕ್ ನ ಚಿರೋನ್ ಬೆಹ್ರಿಂಗ್ ಲಸಿಕೆ ಕೆಂದ್ರದಿಂದ ಬಿಡುಗಡೆ ಮಾಡಿದರು. ನವಸಾರಿಯ ಸಂಸದ ಸಿ ಆರ್ ಪಾಟೀಲ್, ಅಂಕಲೇಶ್ವರ ಶಾಸಕ ಈಶ್ವರ ಸಿಂಹ ಪಟೇಲ್, ಶಾಸಕ ದುಷ್ಯಂತ್ ಪಟೇಲ್ ಮತ್ತು ಭಾರತ್ ಬಯೋಟೆಕ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣಾ ಎಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications