Haryana Violence: ಹೊತ್ತಿ ಉರಿಯುತ್ತಿರುವ ಗುರುಗ್ರಾಮ- ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳಿದ ಕಂಪನಿಗಳು
ಗುರುಗ್ರಾಮ, ಆಗಸ್ಟ್ 02: ಹರಿಯಾಣದ ಮಹಾನಗರವಾದ ಗುರುಗ್ರಾಮದಲ್ಲಿ ಸೋಮವಾರ ಕೋಮ ಗಲಭೆಗಳು ಭುಗಿಲೆದ್ದಿವೆ. ಈ ವರೆಗೂ ನಡೆದ ಕೋಮ ಸಂಘರ್ಷದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಹಲವಾರು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿವೆ.
ಕೆಪಿಎಂಜಿ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್‌ನಂತಹ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿವೆ. ಸುರಕ್ಷತಾ ಕಾರಣಗಳ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಮ್ ನೀಡಲಾಗಿದೆ. ಹಲವಾರು ಖಾಸಗಿ ಬ್ಯಾಂಕ್‌ಗಳು ಮಂಗಳವಾರ ಆಫ್‌ಲೈನ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಉದ್ಯೋಗಿಗಳನ್ನು ಮನೆಗೆ ತೆರಳುವಂತೆ ತಿಳಿಸಿವೆ.

ಗುರುಗ್ರಾಮದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ 30,000 ಕ್ಕೂ ಹೆಚ್ಚು ಕಂಪನಿಗಳಿವೆ. ಇದು ಹರಿಯಾಣದ ಶೇ 70 ಆರ್ಥಿಕ ಹೂಡಿಕೆಗಳಿಗೆ ಕೊಡುಗೆ ನೀಡುತ್ತದೆ.
ಇದಲ್ಲದೇ ಶಾಲೆಗಳು, ಕಾಲೇಜುಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳನ್ನು ಬುಧವಾರ (ಆಗಸ್ಟ್ 2) ಮುಚ್ಚಲಾಗಿದೆ.
ಜುಲೈ 31 ರಂದು ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ಭಾರೀ ಕೋಮು ಹಿಂಸಾಚಾರವು ನೆರೆಯ ಗುರುಗ್ರಾಮಕ್ಕೆ ಹರಡಿದೆ. ಇಮಾಮ್ ಮತ್ತು ಇಬ್ಬರು ಹೋಮ್ ಗಾರ್ಡ್‌ಗಳು ಸೇರಿದಂತೆ ಆರು ಜನರ ಜೀವವನ್ನು ಕೋಮು ಸಂಘರ್ಷ ಬಲಿ ಪಡೆದುಕೊಂಡಿದೆ.
ಮಂಗಳವಾರ ಹರಿಯಾಣದ ಇತರ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಗುರುಗ್ರಾಮದ ಬಾದ್‌ಶಹಪುರ ಮತ್ತು ಸೊಹ್ನಾ ರಸ್ತೆಯಲ್ಲಿನ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ.

ನುಹ್ ಹಿಂಸಾಚಾರದ ಬಗ್ಗೆ ಸಿಎಂ ಖಟ್ಟರ್ ಹೇಳಿದ್ದೇನು?
ನುಹ್ ಹಿಂಸಾಚಾರವು ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಹರಿಯಾಣ ಸಿಎಂ ಖಟ್ಟರ್ ಬುಧವಾರ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ನುಹ್‌ನಲ್ಲಿ ಸೋಮವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 116 ಜನರನ್ನು ಬಂಧಿಸಲಾಗಿದೆ ಎಂದು ಕಟ್ಟರ್ ಹೇಳಿದ್ದಾರೆ.
ಕೋಮುಗಲಭೆಯಲ್ಲಿ ಇಬ್ಬರು ಗೃಹ ರಕ್ಷಕರು ಮತ್ತು ನಾಲ್ವರು ನಾಗರಿಕರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಈವರೆಗೆ 116 ಮಂದಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಯಾರನ್ನೂ ಸಹಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ಖಟ್ಟರ್ ಹೇಳಿದ್ದಾರೆ.

20 ಅರೆಸೇನಾ ಪಡೆಗಳ ನಿಯೋಜನೆ
ರಾಜ್ಯದಲ್ಲಿ ಒಟ್ಟು 20 ಅರೆಸೇನಾ ಪಡೆಗಳು ಮತ್ತು 30 ಹರಿಯಾಣ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಕಟ್ಟರ್ ಮಾಹಿತಿ ನೀಡಿದ್ದಾರೆ.
14 ಪಡೆಗಳನ್ನು ನುಹ್‌ಗೆ, ಮೂರು ಪಲ್ವಾಲ್‌ಗೆ, ಎರಡು ಫರಿದಾಬಾದ್‌ಗೆ ಮತ್ತು ಒಂದನ್ನು ಗುರುಗ್ರಾಮಕ್ಕೆ ಕಳುಹಿಸಲಾಗಿದೆ. ಪ್ರಸ್ತುತ, ನುಹ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಶಾಂತವಾಗಿದೆ. ಭದ್ರತಾ ಏಜೆನ್ಸಿಗಳನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಜುಲೈ 31 ರಂದು ಎರಡು ಗುಂಪುಗಳ ನಡುವೆ ಭುಗಿಲೆದ್ದ ಹಿಂಸಾಚಾರದ ಬೆಂಕಿ ನುಹ್ ಪಕ್ಕದ ಜಿಲ್ಲೆಗಳಾದ ಫರಿದಾಬಾದ್, ಪಲ್ವಾಲ್ ಮತ್ತು ಗುರುಗ್ರಾಮಕ್ಕೆ ಹರಡಿಕೊಂಡಿದೆ.
ನುಹ್‌ನಲ್ಲಿ ಸೋಮವಾರ ಮಧ್ಯರಾತ್ರಿಯಿಂದ 48 ಗಂಟೆಗಳ ಕಾಲ ಸೆಕ್ಷನ್ 144 ವಿಧಿಸಲಾಗಿದೆ. ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.












Click it and Unblock the Notifications