Haryana Assembly Election 2024: ಕಾಂಗ್ರೆಸ್ ತೊರೆಯಲು ಮುಂದಾದ ದೀಪಕ್ ಬಬಾರಿಯಾ
ನವದೆಹಲಿ, ಅಕ್ಟೋಬರ್ 14: ಕಾಂಗ್ರೆಸ್ ಪಕ್ಷಕ್ಕೆ ಹರಿಯಾಣ ವಿಧಾನಸಭೆ ಚುನಾವಣೆ 2024ರ ಸೋಲು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರಂದು ಮತದಾನ ನಡೆದಿತ್ತು. ಅಕ್ಟೋಬರ್ 8ರಂದು ಮತ ಎಣಿಕೆ ನಡೆದಿದ್ದು, ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಸೋಲು ಕಂಡಿತ್ತು. 48 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಸತತ 3ನೇ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ.
ಹರಿಯಾಣ ವಿಧಾನಸಭೆ ಚುನಾವಣೆ 2024ರಲ್ಲಿ ಕಾಂಗ್ರೆಸ್ 37, ಬಿಜೆಪಿ 48, ಐಎನ್‌ಎಲ್‌ಡಿ 2, ಪಕ್ಷೇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ಸೇರಿದ್ದು, ವಿಧಾನಸಭೆಯಲ್ಲಿ ಬಿಜೆಪಿಯ ಬಲ 50ಕ್ಕೆ ಏರಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಅಕ್ಟೋಬರ್ 17ರಂದು ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಕಾಂಗ್ರೆಸ್ ನಾಯಕನ ರಾಜೀನಾಮೆ: ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹರಿಯಾಣ ರಾಜ್ಯ ಉಸ್ತುವಾರಿ ದೀಪಕ್ ಬಬಾರಿಯಾ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ಆದರೆ ಮತ ಎಣಿಕೆ ದಿನದ ಚಿತ್ರಣವೇ ಬೇರೆಯಾಗಿತ್ತು.
ಚುನಾವಣಾ ಫಲಿತಾಂಶದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಅನಿರೀಕ್ಷಿತ ಫಲಿತಾಂಶ. ನಾವು ಸೋಲಿನ ಕಾರಣ ತಿಳಿಯಲು ಪಕ್ಷದ ಸಮಿತಿ ರಚನೆ ಮಾಡುತ್ತೇವೆ. ಪಕ್ಷವನ್ನು ಬೆಂಬಲಿಸಿದ ರಾಜ್ಯದ ಜನರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ಹೇಳಿದ್ದರು.
ಹರಿಯಾಣ ಚುನಾವಣೆ ಫಲಿತಾಂಶದ ಕುರಿತು ಚರ್ಚಿಸಲು ದೀಪಕ್ ಬಬಾರಿಯಾ ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ಸಭೆಯನ್ನು ನಡೆಸಿದ್ದರು. ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆದರೆ ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಮತ್ತು ಸಿಎಲ್‌ಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ರಾಜ್ಯದ ಯಾವುದೇ ಹಿರಿಯ ನಾಯಕರನ್ನು ಸಭೆಗೆ ಆಹ್ವಾನಿಸಿರಲಿಲ್ಲ. ಈ ಸಭೆಯಲ್ಲಿ ಚುನಾವಣಾ ಸೋಲಿನ ಕುರಿತು ವಿವರವಾದ ಚರ್ಚೆ ನಡೆದಿತ್ತು. ಸೋಲಿನ ಕಾರಣ ತಿಳಿಯಲು ಸೋತ ಎಲ್ಲಾ ಅಭ್ಯರ್ಥಿಗಳ ಜೊತೆ ಸಭೆ ನಡೆಸಲು ಸತ್ಯಶೋಧನಾ ಸಮಿತಿ ರಚನೆ ಮಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿತ್ತು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಹರಿಯಾಣ ರಾಜ್ಯ ಉಸ್ತುವಾರಿ ದೀಪಕ್ ಬಬಾರಿಯಾ ಸೋಮವಾರ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಇದಕ್ಕೆ ಒಪ್ಪಿಗೆ ಕೊಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ದಲಿತ ಮತ್ತು ಜಾಟ್ ಸಮುದಾಯದ ಮತಗಳನ್ನು ಪಡೆಯಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿತ್ತು. ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಬಿಜೆಪಿ ಮತಗಳಿಕೆ ಹೆಚ್ಚಿಸಿಕೊಂಡರೆ ಸಾಂಪ್ರದಾಯಿಕ ಮತಗಳನ್ನು ಪಡೆಯುವಲ್ಲಿಯೂ ವಿಫಲವಾಗಿತ್ತು. ನಾಯಕತ್ವದ ಗೊಂದಲ, ಮುಖ್ಯಮಂತ್ರಿ ಹುದ್ದೆಯ ಪೈಪೋಟಿ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಭಾರೀ ಹಿನ್ನಡೆಯನ್ನು ತಂದಿತು.












Click it and Unblock the Notifications