ಜ್ಞಾನವಾಪಿ ಮಸೀದಿ ಸಮೀಕ್ಷೆ: ಗೋಡೆ, ಕಂಬಗಳ ಮೇಲೆ ತ್ರಿಶೂಲ, ಸ್ವಸ್ತಿಕ, ಗಂಟೆ ಮತ್ತು ಹೂವಿನ ಚಿಹ್ನೆ
ವಾರಣಾಸಿ, ಆಗಸ್ಟ್. 05: ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಶುಕ್ರವಾರ ತನ್ನ ವೈಜ್ಞಾನಿಕ ಸಮೀಕ್ಷೆಯನ್ನು ಪುನರಾರಂಭಿಸಿದೆ. ಪುರಾತತ್ವ ಸಂಸ್ಥೆಯು ಜ್ಞಾನವಾಪಿ ಸಂಕೀರ್ಣದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾದ ತ್ರಿಶೂಲ, ಸ್ವಸ್ತಿಕ, ಗಂಟೆ ಮತ್ತು ಹೂವಿನಂತಹ ಚಿಹ್ನೆಯ ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಂಡಿದೆ.
ಮೊದಲ ದಿನ, ಗೋಡೆಗಳು, ಗುಮ್ಮಟಗಳು ಮತ್ತು ಕಂಬಗಳ ಮೇಲಿನ ಚಿಹ್ನೆಗಳನ್ನು ಸಮೀಕ್ಷೆ ಮಾಡಿದೆ. ನಿರ್ಮಾಣ ಶೈಲಿ ಮತ್ತು ಪ್ರತಿ ವಿನ್ಯಾಸದ ಪ್ರಾಚೀನತೆಯನ್ನು ದಾಖಲಿಸಲಾಗಿದೆ. ಸಮೀಕ್ಷೆಯು ವಿವಾದಿತ ರಚನೆಯ ಗುಮ್ಮಟಗಳು ಮತ್ತು ಕಂಬಗಳ ಮೇಲೆ ಕೆತ್ತಲಾದ ರಚನೆಗಳನ್ನು ಒಳಗೊಂಡಿದೆ. ಜ್ಞಾನವಾಪಿ ಸಂಕೀರ್ಣದ ಬಳಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ಜಿಲ್ಲಾ ಅಧಿಕಾರಿಗಳು ನಿಯೋಜಿಸಿದ್ದಾರೆ.

ಮೊದಲ ದಿನದ ಸಮೀಕ್ಷೆಯು ಸುಮಾರು ಏಳು ಗಂಟೆಗಳ ಕಾಲ ನಡೆದಿದೆ. ಈ ಸಮಯದಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇಲ್ಲಿನ ರಚನೆಗಳ ವಿನ್ಯಾಸ ಮತ್ತು ಚಿತ್ರಗಳನ್ನು ಸೆರೆಹಿಡಿದಿದೆ. ಜ್ಞಾನವಾಪಿ ಸಂಕೀರ್ಣದ ಎಲ್ಲಾ ನಾಲ್ಕು ಮೂಲೆಗಳಲ್ಲಿ ಡಯಲ್ ಪರೀಕ್ಷಾ ಸೂಚಕಗಳನ್ನು ಇರಿಸಲಾಗಿದ್ದು, ಸಂಕೀರ್ಣದ ವಿವಿಧ ಭಾಗಗಳ ಆಳ ಮತ್ತು ಎತ್ತರವನ್ನು ಅಳೆಯಲಾಯಿತು.
ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡದಲ್ಲಿ 37 ವ್ಯಕ್ತಿಗಳು ಇದ್ದು, ಇದರಲ್ಲಿ ಐಐಟಿಯ ಪರಿಣಿತ ತಂಡಗಳನ್ನು ಸೇರಿಸಿ ಒಟ್ಟು 41 ಸದಸ್ಯರು ಈ ಸಮೀಕ್ಷೆಯನ್ನು ಪ್ರಾರಂಭಿಸಸಿದ್ದಾರೆ. ಇದನ್ನು ಒಟ್ಟು ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದೆ. ಸತತ ಎರಡನೇ ದಿನವಾದ ಶನಿವಾರವೂ ಸಮೀಕ್ಷೆ ಪುನರಾರಂಭಗೊಂಡಿದ್ದು, ಮುಸ್ಲಿಂ ಕಡೆಯವರು ಇದಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಶನಿವಾರ ಬೆಳಗ್ಗೆ 9 ಗಂಟೆಗೆ ಸಮೀಕ್ಷೆ ಆರಂಭವಾಗಿದ್ದು, ಮಧ್ಯಾಹ್ನ 12.30ರವರೆಗೆ ನಡೆದಿದೆ. ಊಟದ ನಂತರ ಮಧ್ಯಾಹ್ನ 2.30 ರಿಂದ ಪುನರಾರಂಭಗೊಳ್ಳಲಿದ್ದು, ಸಂಜೆ 5 ಗಂಟೆಯವರೆಗೆ ಮುಂದುವರಿಯಲಿದೆ. "ನಿನ್ನೆ, ಎಎಸ್‌ಐನಿಂದ ವೀಡಿಯೋ ಮಾಡಲಾಗಿದೆ. ಇಂದು ಭೂಗತ ಸ್ಥಳಗಳ (ತೆಹ್ಖಾನಾ) ಸಮೀಕ್ಷೆಯನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ರಚನೆಯ ಮೇಲೆ ವಿವಿಧ ಚಿಹ್ನೆಗಳನ್ನು ನೋಡಬಹುದು. ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಮೂಲಕ ಎಲ್ಲಾ ವಿಗ್ರಹಗಳು, ಒಳಗೆ ಮುಳುಗಿರುವವವು ಪತ್ತೆಯಾಗಬಹುದು" ಎಂದು ಅರ್ಜಿದಾರರೊಬ್ಬರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ವಾರಣಾಸಿಯ ನ್ಯಾಯಾಲಯವು ಶುಕ್ರವಾರ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಎಎಸ್‌ಐಗೆ ಹೆಚ್ಚುವರಿ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಶುಕ್ರವಾರ, ಸುಪ್ರೀಂ ಕೋರ್ಟ್ ದೇಶದ ಉನ್ನತ ಪುರಾತತ್ವ ಸಂಸ್ಥೆಯಿಂದ ಜ್ಞಾನವಾಪಿ ಮಸೀದಿ ಸಮೀಕ್ಷೆಯನ್ನು ಆಕ್ರಮಣ ರೀತಿಯ ವಿಧಾನ ಬಳಸಿ ಮಾಡಬಾರದು ಎಂದು ಹೇಳಿದೆ. ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಜಿಲ್ಲಾ ನ್ಯಾಯಾಲಯದ ಸಮೀಕ್ಷೆ ಆದೇಶವನ್ನು ಪ್ರಶ್ನಿಸಿತ್ತು.
ಜ್ಞಾನವಾಪಿ ಮಸೀದಿ ವಿವಾದ
ಈ ಹಿಂದೆ ದೇವಾಲಯವೊಂದು ಅಸ್ತಿತ್ವದಲ್ಲಿತ್ತು ಎಂದು ಹೇಳಿಕೊಂಡು ಎಲ್ಲಾ ದಿನಗಳಲ್ಲಿ ಮಸೀದಿಯ ಸಂಕೀರ್ಣದಲ್ಲಿರುವ ಹಿಂದೂ ದೇವರ ಪೂಜೆಗೆ ಅನುಮತಿ ನೀಡಬೇಕು ಎಂದು ಮಹಿಳೆಯರ ಗುಂಪು ವಾರಣಾಸಿಯ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಜ್ಞಾನವಾಪಿ ಮಸೀದಿ ವಿವಾದದ ಸ್ವರೂಪ ಪಡೆದಿದೆ. ನ್ಯಾಯಾಲಯವು 2022 ರಲ್ಲಿ ಈ ಅರ್ಜಿಯ ಆಧಾರದ ಮೇಲೆ ಸಂಕೀರ್ಣದ ವೀಡಿಯೊ ಸಮೀಕ್ಷೆಗೆ ಆದೇಶಿಸಿತು. ಸಮೀಕ್ಷೆಯ ಸಮಯದಲ್ಲಿ, ಅರ್ಜಿದಾರರು 'ಶಿವಲಿಂಗ' ದ ರೀತಿಯ ರಚನೆಯಿದೆ ಎಂದು ಹೇಳಿದ್ದರು.
ಆದರೆ ಮಸೀದಿ ಆಡಳಿತ ಸಮಿತಿಯು ಈ ರಚನೆಯು 'ವಝುಖಾನಾ'ದಲ್ಲಿನ ಕಾರಂಜಿಯ ಭಾಗವಾಗಿದೆ, ಇದು ನೀರಿನಿಂದ ತುಂಬಿದ ಪ್ರದೇಶವಾಗಿದ್ದು, ಜನರು ಪ್ರಾರ್ಥನೆ ಮಾಡುವ ಮೊದಲು ಕೈಕಾಲು ತೊಳೆಯುತ್ತಾರೆ. ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್ ಆಪಾದಿತ 'ಶಿವಲಿಂಗ' ದ ಪ್ರದೇಶವನ್ನು ಸೀಲಿಂಗ್ ಮಾಡಲು ಆದೇಶಿಸಿತ್ತು.












Click it and Unblock the Notifications