ಭಾರೀ ಮಳೆಗೆ ಅಹಮದಾಬಾದ್ ವಿಮಾನ ನಿಲ್ದಾಣ ಜಲಾವೃತ: ವಿಡಿಯೋ ವೈರಲ್
ಅಹಮದಾಬಾದ್, ಜುಲೈ. 23: ಗುಜರಾತ್‌ನ ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶನಿವಾರ ರಾತ್ರಿ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ವಿಮಾನ ನಿಲ್ದಾಣ ಜಲಾವೃತವಾಗಿದೆ. ಮೊಣಕಾಲಿನವರೆಗೂ ನೀರು ತುಂಬಿದ್ದು, ಅದೇ ನೀರಿನಲ್ಲಿ ಪ್ರಯಾಣಿಕರು ತೆರಳುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
Shared by a friend who landed at Ahmedabad airport at 10 pm. #AhmedabadRain pic.twitter.com/WsP9YpvG2z
— Kumar Manish (@kumarmanish9) July 22, 2023
ಕಾಂಗ್ರೆಸ್ ನಾಯಕರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಮಾನ ನಿಲ್ದಾಣವು ಪ್ರವಾಹಕ್ಕೆ ಸಿಲುಕಿದೆ ಎಂದು ತೋರಿಸಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದ ರನ್‌ವೇಗಳು ಮತ್ತು ಟರ್ಮಿನಲ್ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ನಿಲ್ದಾಣದಲ್ಲಿ ನೀರು ನಿಂತಿರುವುದರಿಂದ ಪ್ರಯಾಣಿಕರು ತಮ್ಮ ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ತಲುಪಲು ತೊಂದರೆಯನ್ನು ಎದುರಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ತಮ್ಮ ವಿಮಾನಗಳ ಬಗ್ಗೆ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸುವಂತೆ ಪ್ರಯಾಣಿಕರಿಗೆ ಸೂಚಿಸಿದ್ದಾರೆ ಎಂದು ವರೆದಿಯಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ದೀಪಕ್ ಖತ್ರಿ ಅವರು ಅಹಮದಾಬಾದ್ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊರಗೆ ನೀರು ತುಂಬಿರುವ ರಸ್ತೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 28 ವರ್ಷಗಳ ಬಿಜೆಪಿ ಆಡಳಿತದ ನಂತರ ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದ ಪರಿಸ್ಥಿತಿ ಇದು. ಇದು ನರೇಂದ್ರ ಮೋದಿಯವರ ಮಾದರಿ ರಾಜ್ಯ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಟರ್ಮಿನಲ್‌ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ, "ಇದು ಅದಾನಿ ನಿರ್ವಹಣಾ ವಿಮಾನ ನಿಲ್ದಾಣ, ಅಹಮದಾಬಾದ್, ಗುಜರಾತ್." ಎಂದಿದ್ದಾರೆ. ಇನ್ನೋಬ್ಬರು, "ರಾತ್ರಿ 10 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸ್ನೇಹಿತರೊಬ್ಬರು ಇದನ್ನು ಹಂಚಿಕೊಂಡಿದ್ದಾರೆ" ಎಂದು ಹೇಳಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಶನಿವಾರ ಗುಜರಾತಿನ ದಕ್ಷಿಣ ಮತ್ತು ಸೌರಾಷ್ಟ್ರ ಪ್ರದೇಶಗಳಲ್ಲಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ನಗರ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಉಂಟುಮಾಡಿದೆ. ಅಣೆಕಟ್ಟುಗಳು ಮತ್ತು ನದಿಗಳಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟಕ್ಕೆ ಏರುತ್ತಿದೆ. ರಾಷ್ಟ್ರೀಯ ರಕ್ಷಣಾ ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡ ಶನಿವಾರ ಈ ಪ್ರದೇಶದ ಜುನಾಗಢ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಪ್ರವಾಹ ಮತ್ತು ಜಲಾವೃತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸಿದ್ದಾರೆ.

ಜುನಾಗಢದಲ್ಲಿ ರೆಡ್ ಅಲರ್ಟ್
ಜುನಾಗಢ್‌ನಲ್ಲಿ, ಶನಿವಾರ ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ 219 ಮಿಮೀ ಮಳೆ ಸುರಿದಿದೆ. ಇದರಿಂದ ಹತ್ತಾರು ಕಾರುಗಳು ಮತ್ತು ಜಾನುವಾರುಗಳು ಹರಿಯುವ ನೀರಿನಲ್ಲಿ ಕೊಚ್ಚಿಹೋಗಿವೆ. ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರಲ್ಲಿ ಕೆಲವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಸ್ವಯಂಸೇವಕರು ಅವರನ್ನು ರಕ್ಷಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ನವಸಾರಿ ಮತ್ತು ಜುನಾಗಢ್ ಜಿಲ್ಲೆಗಳು ಹಾನಿಗೊಳಗಾಗಿವೆ. ಅಧಿಕಾರಿಗಳು ಜನರಿಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಹೇಳಿದ್ದಾರೆ. ಅಣೆಕಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಭಾರೀ ಮಳೆಯಿಂದಾಗಿ ನವಸಾರಿ ಬಳಿ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ಗುಜರಾತ್‌ನ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಜಿಲ್ಲೆಯ ಸಿಲ್ವಾಸ್ಸಾ ಪಟ್ಟಣದ ಕಾರು ಕೊಚ್ಚಿ ಹೋಗಿ ತಂದೆ-ಮಗ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ರಕ್ಷಣಾ ತಂಡವು ಶನಿವಾರ ಮಧ್ಯಾಹ್ನ ಅವರ ದೇಹಗಳನ್ನು ವಾಹನದೊಳಗೆ ಪತ್ತೆ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ-ಕಚ್ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಅತ್ಯಂತ ಭಾರೀ ಮಳೆಯೊಂದಿಗೆ ಭಾರೀ ಮತ್ತು ಅತಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ-ಕಚ್‌ನ ಇತರ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯು ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ. ಜುಲೈ 22 ರಿಂದ ಜುಲೈ 26 ರವರೆಗೆ ಉತ್ತರ ಗುಜರಾತ್ ಕರಾವಳಿಯ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.












Click it and Unblock the Notifications