ಗಂಡಾಂತರ.. ಮನುಷ್ಯರಿಗೆ ಎದುರಾಯ್ತು ಮಹಾನ್ ಗಂಡಾಂತರ!
ಮನುಷ್ಯ ಪ್ರಕೃತಿ ಮೇಲೆ ನಡೆಸಬಾರದ ದೌರ್ಜನ್ಯ ನಡೆಸುತ್ತಿದ್ದಾನೆ. ಅದರಲ್ಲೂ ಭೂಮಿಗೆ ಮನುಷ್ಯ ಕೊಡುವಷ್ಟು ಟಾರ್ಚರ್ ಬೇರೆ ಯಾವ ಜೀವಿಗಳು ಕೊಟ್ಟಿಲ್ಲ. ಹೀಗೆ ಪ್ರಕೃತಿಯ ನಿಯಮ ಬುಡಮೇಲು ಮಾಡಿದ ಮಾನವನಿಗೆ ದೊಡ್ಡ ಗಂಡಾಂತರ ಎದುರಾಗಿದೆ. ಕೆಲವೇ ವರ್ಷದಲ್ಲಿ ಮಾನವ ಈ ಗಂಡಾಂತರದ ಗಾಳಿಗೆ ಸಿಲುಕಿ ನಲುಗಿ ಹೋಗಲಿದ್ದಾನೆ.
ಮನುಷ್ಯ ಬದುಕಲು ಗಾಳಿ, ನೀರು & ಆಹಾರ ಅತಿಮುಖ್ಯ. ಅದರಲ್ಲೂ ಆಹಾರ ಎರಡು, ಮೂರು ದಿನ ತಡವಾದರೂ ಓಕೆ. ಆದ್ರೆ ಗಾಳಿ & ನೀರು ಸಿಗುವುದು 1 ಕ್ಷಣ ತಡವಾದರೂ ಮನುಷ್ಯ ಜೀವ ಉಳಿಸಿಕೊಳ್ಳಲು ಆಗದು. ಹೀಗಾಗಿ ಗಾಳಿ & ನೀರನ್ನು ಮಾನವನಿಗೆ ಅತಿ ಅವಶ್ಯಕ ಇರುವ ವಸ್ತು ಎಂದು ಪರಿಗಣಿಸಲಾಗುತ್ತೆ. ಆದರೆ ಇಂತಹ ಅತಿ ಅಮೂಲ್ಯವಾದ ವಸ್ತುಗಳನ್ನೇ ಮನುಷ್ಯ ವಿಷ ಮಾಡುತ್ತಿದ್ದಾನೆ. ಅದು ಬಿಡಿ ಇರುವ ವಿಷಯುಕ್ತ ನೀರಿಗೂ ಬರ ಬರುವ ಸಾಧ್ಯತೆ ಇದೆ. ಅದರಲ್ಲೂ ಅಂತರ್ಜಲ ಇನ್ನು ಕೆಲವೇ ವರ್ಷದಲ್ಲಿ ಭೂಮಿ ಅಡಿಯಿಂದ ನಾಪತ್ತೆ ಆಗಲಿದೆಯಂತೆ!

ಹೌದು, ಅಂತರ್ಜಲ ಬಳಕೆಗೆ ಸಂಬಂಧಿಸಿದಂತೆ ಜನರ ಧೋರಣೆ ಇದೇ ರೀತಿ ಮುಂದುವರಿದರೆ 2080 ವೇಳೆಗೆ ದೇಶದಲ್ಲಿ ಅಂತರ್ಜಲ ಕಾಣೆಯಾಗಲಿದೆ. ಈಗ ಇರುವ ನೀರಿಗಿಂತ ಅಂತರ್ಜಲ ಮಟ್ಟ ಸುಮಾರು 3 ಪಟ್ಟು ಕುಸಿತ ಕಾಣುತ್ತೆ ಎಂದು ಗಂಡಾಂತರ ಎಚ್ಚರಿಕೆ ನೀಡಲಾಗಿದೆ. ಅಂತರ್ಜಲ ಮಟ್ಟ ಕುಸಿತ ಕಂಡರೆ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಆಹಾರ ಅಭಾವವು ಎದುರಾಗಲಿದೆ. ಹೀಗಾಗಿ ಕೂಡಲೇ ಅಂತರ್ಜಲ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ವಿಜ್ಞಾನಿಗಳು. ಇದಿಷ್ಟೇ ಅಲ್ಲ ಇನ್ನೂ ಅನೇಕ ಆಘಾತಕಾರಿ ಸಂಗತಿಗಳು ಬಯಲಾಗಿವೆ.
ಭಾರತದಲ್ಲಿ ಸಿಕ್ಕಾಪಟ್ಟೆ ಅಂತರ್ಜಲ ಬಳಕೆ
ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ನೀರಿನ ಮೂಲಗಳೇ ಕಡಿಮೆ. ಹೀಗಿದ್ದಾಗ ರೈತರಿಗೆ ಅಂತರ್ಜಲ ಬಳಕೆ ಅನಿವಾರ್ಯ. ಅದ್ರಲ್ಲೂ ತಾಪಮಾನ ಹೆಚ್ಚಳದ ಪರಿಣಾಮ ನೀರಾವರಿ ಉದ್ದೇಶಕ್ಕಾಗಿ ರೈತರು ಹೆಚ್ಚಾಗಿ ಅಂತರ್ಜಲ ಬಳಸುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ ಎಂದು 'ಸೈನ್ಸ್ ಅಡ್ವಾನ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಅಮೆರಿಕದ ಮಿಚಿಗನ್ ವಿವಿ ವರದಿಯಲ್ಲಿ ಸ್ಫೋಟಕ ಸತ್ಯ ಹೊರಹಾಕಲಾಗಿದೆ. ಹಾಗಾದರೆ ಇದು ಭಾರತೀಯರ ಮೇಲೆ ಅದರಲ್ಲೂ ಕೃಷಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ಮುಂದೆ ಓದಿ.
ಇನ್ನು ನೀರಿನ ಕೊರತೆಯು ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದೇಶದ ಒಟ್ಟು ಜನಸಂಖ್ಯೆಯ 3ನೇ ಒಂದರಷ್ಟು ಜನರು ಭಾರತದಲ್ಲಿ ಅಂತರ್ಜಲ ಸಮಸ್ಯೆಯ ಪರಿಣಾಮ ತೊಂದರೆಗೆ ಸಿಲುಕಲಿದ್ದಾರೆ. ಇದರ ಪರಿಣಾಮ ಜಾಗತಿಕವಾಗಿ ತಟ್ಟಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಏಕೆಂದರೆ ಇಡೀ ಜಗತ್ತಿಗೆ ಆಹಾರ ಪೂರೈಕೆ ಮಾಡುವ ದೇಶ ಭಾರತ. ಪ್ರಾದೇಶಿಕ ಹಾಗೂ ಜಾಗತಿಕ ಆಹಾರ ಪೂರೈಕೆಗೆ ಅಂತರ್ಜಲ ಮುಖ್ಯ ಸಂಪನ್ಮೂಲ. ಮುಂದೆ ಇದೇ ಸಂಪನ್ಮೂಲ ಖಾಲಿಯಾಗಿ ಹೋದರೆ ಏನು ಮಾಡಲು ಆಗುತ್ತೆ? ಭವಿಷ್ಯವೇ ಕಂಟಕಕ್ಕೆ ಸಿಲುಕುವುದು ಪಕ್ಕಾ ಅಂತಾರೆ ವಿಜ್ಞಾನಿಗಳು.

ದಕ್ಷಿಣ ಭಾರತಕ್ಕೆ ಹೆಚ್ಚು ಕಂಟಕ
ಭಾರತದ ಹಲವೆಡೆ ಅಂತರ್ಜಲ ಬಳಕೆ ಆಗುತ್ತಿದ್ದರೂ, ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಅಂತರ್ಜಲ ಬಳಕೆ ಹೆಚ್ಚು. ಹೀಗಾಗಿ ಮುಂದಿನ ದಿನಗಳಲ್ಲಿ ಇದು ದೊಡ್ಡ ಸಮಸ್ಯೆ ಸೃಷ್ಟಿ ಮಾಡಬಹುದು ಎಂದು ಅಂದಾಜು ಮಾಡಲಾಗಿದೆ. ನೀರಿನ ಬಳಕೆಯಲ್ಲಿನ ಬದಲಾವಣೆ, ಅಂತರ್ಜಲ ಮಟ್ಟ, ಹವಾಮಾನ ಸೇರಿ ಭವಿಷ್ಯದಲ್ಲಿ ಬೆಳೆ ಬೆಳೆಯಲು ಅಗತ್ಯವಿರುವ ನೀರಿನ ಲಭ್ಯತೆ ಕುರಿತು ಮಾಹಿತಿ ನೀಡಲಾಗಿದೆ. ಅದೇ ರೀತಿ ದಕ್ಷಿಣ & ಮಧ್ಯ ಭಾರತದಲ್ಲಿ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಅಂತರ್ಜಲ ರಕ್ಷಣೆಗಾಗಿ ಕ್ರಮ ಕೈಗೊಳ್ಳಲು ಸಲಹೆ ನೀಡಿಲಾಗಿದೆ.
ಒಟ್ನಲ್ಲಿ ಉತ್ತರ ಭಾರತದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಹಿಮನದಿಗಳು ಹರಿಯುತ್ತವೆ. ಈ ಕಾರಣಕ್ಕೆ ಅಲ್ಲಿ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಬಳಕೆ ಪ್ರಮಾಣ ಕಡಿಮೆ. ಆದ್ರೆ ಈ ವಾತಾವರಣ ದಕ್ಷಿಣ ಭಾರತದಲ್ಲಿ ಇಲ್ಲ. ದೊಡ್ಡ ದೊಡ್ಡ ನದಿಗಳು ಇದ್ದರೂ ಮಳೆಯನ್ನ ಆಶ್ರಯಿಸಿವೆ. ಹೀಗಾಗಿ ಅಂತರ್ಜಲ ಬಳಕೆ ಹೆಚ್ಚಾಗಿದೆ. ಆದರೆ ಇದೇ ಮುಂದೆ ದಕ್ಷಿಣ & ಮಧ್ಯ ಭಾರತಕ್ಕೆ ಸಮಸ್ಯೆ ಉಂಟುಮಾಡಲಿದೆ ಎನ್ನಲಾಗಿದೆ. ಹೀಗಾಗಿ ಸರ್ಕಾರಗಳು ಕೂಡ ಅಗತ್ಯ ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ ಪರಿಸರ ಪ್ರೇಮಿಗಳು.












Click it and Unblock the Notifications