ದಿಶಾ ರವಿ ಬಂಧನದ ಬಗ್ಗೆ ಗ್ರೆಟಾ ಥನ್‌ಬರ್ಗ್ ಮೊದಲ ಪ್ರತಿಕ್ರಿಯೆ
ನವದೆಹಲಿ, ಫೆಬ್ರವರಿ 20: ಟೂಲ್‌ಕಿಟ್ ಪ್ರಕರಣದಲ್ಲಿ ದಿಶಾ ರವಿ ಬಂಧನವಾದ ಒಂದು ವಾರದ ಬಳಿಕ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಪ್ರತಿಕ್ರಿಯೆ ನೀಡಿದ್ದಾರೆ. ರೈತರ ಪ್ರತಿಭಟನೆ ಕುರಿತು ತಮಗೆ ನೀಡಿದ್ದ ಟೂಲ್‌ಕಿಟ್‌ಅನ್ನು ತಪ್ಪಾಗಿ ಹಂಚಿಕೊಂಡಿದ್ದ ಗ್ರೆಟಾ ಮಾಡಿದ ಯಡವಟ್ಟಿನಿಂದ ದಿಶಾ ಸಿಕ್ಕಿಬಿದ್ದಿದ್ದರು. ಈಗ ಸ್ವೀಡಿಶ್ ಮೂಲದ ಗ್ರೆಟಾ, ಮೊದಲ ಬಾರಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ದಿಶಾ ರವಿ ಬಂಧನದ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಗ್ರೆಟಾ, 'ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಹಕ್ಕು ಹಾಗೂ ಜತೆಗೂಡುವುದು ಬದಲಿಸಲು ಸಾಧ್ಯವಿಲ್ಲದ ಮಾನವಹಕ್ಕುಗಳು. ಇದು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಭಾಗವಾಗಿರಬೇಕು' ಎಂದು ಹೇಳಿದ್ದಾರೆ.
'ಸ್ಟ್ಯಾಂಡ್ ವಿತ್ ದಿಶಾ ರವಿ' ಎಂಬ ಹ್ಯಾಶ್‌ಟ್ಯಾಗ್ ಬಳಸಿರುವ ಗ್ರೆಟಾ, ಫ್ರೈಡೇಸ್ ಫಾರ್ ಫ್ಯೂಚರ್ ಸಂಸ್ಥೆಯ ಭಾರತ ಘಟಕದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
'ನಾವು ನಮ್ಮ ಯೋಜನೆಯಲ್ಲಿ ಅಚಲವಾಗಿದ್ದೇವೆ. ನಮ್ಮ ಪರಿಸರವನ್ನು ರಕ್ಷಿಸಲು ಶಾಂತಿಯುತ ಹಾಗೂ ಸಕ್ರಿಯವಾಗಿ ಇರುವುದನ್ನು ಮುಂದುವರಿಸುವ ಗುರಿ ಹೊಂದಿದ್ದೇವೆ' ಎಂದು ಸಂಸ್ಥೆ ಹೇಳಿಕೆ ನೀಡಿತ್ತು.
ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿಶಾ ರವಿ ಅವರನ್ನು ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯವು ಶುಕ್ರವಾರದ ವಿಚಾರಣೆ ಬಳಿಕ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.