ಪ್ರತಿ ಕೆಜಿಗೆ 25 ರೂ. ನಂತೆ ಈರುಳ್ಳಿ ಮಾರಾಟ; ಎಲ್ಲಿ?, ಹೇಗೆ?, ವಿವರ
ಬೆಂಗಳೂರು, ನವೆಂಬರ್ 05: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 80, 100 ರೂ. ತಲುಪಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ಜನರಿಗೆ ನೆಮ್ಮದಿ ನೀಡುವ ಸುದ್ದಿ ಕೊಟ್ಟಿದ್ದು, ಪ್ರತಿ ಕೆಜಿಗೆ ರೂ. 25ರಂತೆ ಈರುಳ್ಳಿ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರ ಈರುಳ್ಳಿ ಪ್ರತಿ ಕೆಜಿಗೆ 25 ರೂ. ನಂತೆ ಎನ್.ಸಿ.ಸಿ.ಎಫ್, ಎನ್.ಎ.ಎಫ್.ಇ.ಡಿ, ಕೇಂದ್ರೀಯ ಭಂಡಾರ್ ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳ ಮೂಲಕ ಖರೀದಿಗೆ ವ್ಯವಸ್ಥೆ ಮಾಡಿದೆ. ಇ-ಮಾರಾಟ, ಇ-ನಾಮ್ ಹರಾಜು ಮತ್ತು ಬೃಹತ್ ಮಾರಾಟದ ಮೂಲಕ ವಿಲೇವಾರಿ ಮಾಡಲು 5.06 ಎಲ್.ಎಂ.ಟಿ.ಯೆಷ್ಟು ಈರುಳ್ಳಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಂಗ್ರಹಿಸಿದೆ.

ಈರುಳ್ಳಿ ದರ ಏರಿಕೆಗೆ ಕಾರಣವೇನು?; ಖಾರಿಫ್ ಬೆಳೆಯ ಆಗಮನದ ವಿಳಂಬದಿಂದಾಗಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಆದ್ದರಿಂದ ಗ್ರಾಹಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ ರೂ.25ರ ಸಬ್ಸಿಡಿ ದರದಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ.
ಗ್ರಾಹಕರಿಗೆ ಈರುಳ್ಳಿಯು ಕೈಗೆಟುಕುವಿಕೆಯ ಬೆಲೆಯಲ್ಲಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು, ರೈತರ ಹಿತ ಕಾಪಾಡಲು ಅಕ್ಟೋಬರ್ 29ರಿಂದಲೇ ರಫ್ತು ಮಾಡಲು ಪ್ರತಿ ಎಂ. ಟಿ. ಗೆ 800 ಯು.ಎಸ್. ಡಾಲರ್ ಬೆಲೆಯನ್ನು ಕನಿಷ್ಠ ರಫ್ತು ಬೆಲೆ (ಎಂ.ಇ.ಪಿ) ವಿಧಿಸುವಿಕೆಯಂತಹ ನಿಯಮ ಜಾರಿಗೆ ತರಲಾಗಿದೆ. ಬಳಿಕ 25 ರೂ.ಗೆ ಈರುಳ್ಳಿ ಮಾರಾಟ ಮಾಡುವ ಕ್ರಮವನ್ನು ಜಾರಿಗೊಳಿಸಿದೆ.
ಚಿಲ್ಲರೆ ಮಾರಾಟ, ಇ-ನಾಮ್ ಹರಾಜು ಮತ್ತು ಸಗಟು ಮಾರುಕಟ್ಟೆಗಳಲ್ಲಿ ಆಗಸ್ಟ್ 2023 ಎರಡನೇ ವಾರದಿಂದ ಈರುಳ್ಳಿಯ ನಿರಂತರ ಸಂಗ್ರಹಣೆ ಕಾರ್ಯ ನಡೆಯುತ್ತಿದ್ದು, 2 ಲಕ್ಷ ಟನ್ ಗಳಷ್ಟು ಹೆಚ್ಚುವರಿ ಈರುಳ್ಳಿಯನ್ನು ಸಂಗ್ರಹಣೆ ಗುರಿ ಹೊಂದಲಾಗಿತ್ತು. ಈಗಾಗಲೇ 5.06 ಲಕ್ಷ ಟನ್‌ಗಳಿಗಿಂತ ಹೆಚ್ಚು ಈರುಳ್ಳಿಯನ್ನು ಸಂಗ್ರಹಿಸಲಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಈರುಳ್ಳಿಯ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎನ್. ಸಿ. ಸಿ. ಎಫ್, ಎನ್. ಎ. ಎಫ್. ಇ. ಡಿ, ಕೇಂದ್ರೀಯ ಭಂಡಾರ್ ಮತ್ತು ಇತರ ರಾಜ್ಯ ನಿಯಂತ್ರಿತ ಸಹಕಾರಿ ಸಂಸ್ಥೆಗಳ ಮೂಲಕ ನಿರ್ವಹಿಸಲ್ಪಡುವ ಮೊಬೈಲ್ ವ್ಯಾನ್‌ಗಳ ಮೂಲಕ ಪ್ರತಿ ಕೆಜಿಗೆ ರೂ. 25ರ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿದೆ.
ಎನ್. ಎ. ಎಫ್. ಇ. ಡಿ (ನಫೀಡ್) ಅಡಿ 21 ರಾಜ್ಯಗಳಾದ್ಯಂತ 55 ನಗರಗಳಲ್ಲಿ ಸ್ಥಾಯಿ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳನ್ನು ಒಳಗೊಂಡಿರುವ 329 ರಿಟೇಲ್ ಕೇಂದ್ರಗಳನ್ನು ಸ್ಥಾಪಿಸಿದೆ. ಅದೇ ರೀತಿ, ಎನ್. ಸಿ. ಸಿ. ಎಫ್ 20 ರಾಜ್ಯಗಳಾದ್ಯಂತ 54 ನಗರಗಳಲ್ಲಿ 457 ರಿಟೇಲ್ ಕೇಂದ್ರಗಳನ್ನು ಸ್ಥಾಪಿಸಿದೆ.
ಕೇಂದ್ರೀಯ ಭಂಡಾರ್ ಕೂಡ ದೆಹಲಿ-ಎನ್.ಸಿ.ಆರ್. ಪ್ರದೇಶಾದ್ಯಂತ ತನ್ನ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಈರುಳ್ಳಿಯ ಪೂರೈಕೆಯನ್ನು ಪ್ರಾರಂಭಿಸಿದೆ. ಸಫಲ್ ಮದರ್ ಡೈರಿಯಲ್ಲಿ ಈ ವಾರಾಂತ್ಯದಿಂದ ಈರುಳ್ಳಿಯ ಚಿಲ್ಲರೆ ಮಾರಾಟ ಪ್ರಾರಂಭವಾಗುತ್ತದೆ. ತೆಲಂಗಾಣ ಹಾಗೂ ದಕ್ಷಿಣದ ಇತರ ರಾಜ್ಯಗಳಲ್ಲಿ ಗ್ರಾಹಕರಿಗಾಗಿ ಸಬ್ಸಿಡಿ ದರದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟವನ್ನು ಹೈದರಾಬಾದ್ ಕೃಷಿ ಸಹಕಾರ ಸಂಘ (ಹೆಚ್.ಎ.ಸಿ.ಎ.) ಮಾಡಲಿದೆ.
ಈ ವರ್ಷ ಈರುಳ್ಳಿ ಲಭ್ಯತೆ ಮತ್ತು ಸಂಗ್ರಹಣೆಯ ಗಾತ್ರವನ್ನು 2022-23 ರಲ್ಲಿ 2.5 ಎಲ್.ಎಂ.ಟಿ. ನಿಂದ 7 ಎಲ್.ಎಂ.ಟಿ. ಗೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ 5.06 ಎಲ್.ಎಂ.ಟಿ. ಈರುಳ್ಳಿಯನ್ನು ಖರೀದಿಸಲಾಗಿದೆ ಮತ್ತು ಉಳಿದ ಹೆಚ್ಚುವರಿ 2 ಎಲ್.ಎಂ.ಟಿ. ಸಂಗ್ರಹಣೆ ಕಾರ್ಯ ಪ್ರಗತಿಯಲ್ಲಿದೆ. ಮಹಾರಾಷ್ಟ್ರದ ಲಾಸಲ್ಗಾಂವ್ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗುತ್ತಿದೆ. ಮುಂದಿನ ವಾರದಿಂದ ಈರುಳ್ಳಿಯ ಚಿಲ್ಲರೆ ಮಾರಾಟ ಬೆಲೆಗಳು ಕುಸಿತವನ್ನು ಕಾಣಲಿವೆ ಎಂದು ನಿರೀಕ್ಷಿಸಲಾಗಿದೆ.
ಮುಂಗಾರು ಮಳೆ ಮತ್ತು ಬಿಳಿ ನೊಣಗಳ ಹಾವಳಿಯಿಂದ ಉಂಟಾದ ಪೂರೈಕೆ ಅಡಚಣೆಯಿಂದಾಗಿ 2023ರ ಜೂನ್ ಕೊನೆಯ ವಾರದಿಂದ ಟೊಮೆಟೊ ಬೆಲೆ ಗಗನಕ್ಕೇರಿದಾಗ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಉತ್ಪಾದನಾ ರಾಜ್ಯಗಳಿಂದ ಎನ್. ಸಿ. ಸಿ. ಎಫ್ ಮತ್ತು ಎನ್. ಎ. ಎಫ್. ಇ. ಡಿ.ಗಳು ಟೊಮೆಟೊಗಳನ್ನು ಖರೀದಿಸುವ ಮೂಲಕ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿತ್ತು.
ಆಗ ಮಹಾರಾಷ್ಟ್ರ ಮತ್ತು ಇತರ ಪ್ರಮುಖ ಕೇಂದ್ರಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಟೊಮೆಟೊ ಸರಬರಾಜು ಮಾಡಲಾಗಿತ್ತು. ಸಂಗ್ರಹಿಸಿದ ಟೊಮೆಟೊಗಳನ್ನು ಸಬ್ಸಿಡಿ ದರದಲ್ಲಿ ಗ್ರಾಹಕರಿಗೆ ಪ್ರತಿ ಕೆಜಿಗೆ ರೂ. 90 ರಿಂದ ಮಾರಾಟ ಮಾಡಲು ಪ್ರಾರಂಭಿಸಲಾಗಿತ್ತು. ಬಳಿಕ ಪ್ರತಿ ಕೆಜಿ ದರ ರೂ. 40ಕ್ಕೆ ಇಳಿಕೆಯಾಗಿತ್ತು. ಈಗ ಇದೇ ಮಾದರಿಯಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.












Click it and Unblock the Notifications