ಆಂಧ್ರದಲ್ಲಿ ಮನೆಗಳನ್ನೂ ಕ್ಲೀನ್ ಮಾಡಿ ಕೊಡ್ತಿದೆ ಗವರ್ನಮೆಂಟ್, ಯಾಕೆ ?
Andhra Pradesh: ಜನ ಕಲ್ಯಾಣ ಹಾಗೂ ಜನರ ಸೇವೆಗೆ ನಿಲ್ಲುವುದು ಪ್ರತಿ ಚುನಾಯಿತ ಸರ್ಕಾರದ ಕರ್ತವ್ಯ. ಆದರೆ, ಈ ರಾಜ್ಯದಲ್ಲಿ ಅಲ್ಲಿನ ಮನೆಗಳನ್ನೂ ಸಹ ರಾಜ್ಯ ಸರ್ಕಾರ ಸ್ವಚ್ಛ ಮಾಡಿಕೊಡುತ್ತಿದೆ. ಇದಕ್ಕಾಗಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ ಮೂಲಸೌಕರ್ಯವನ್ನೂ ಸಹ ಬಳಸಿಕೊಳ್ಳಲಾಗುತ್ತಿದೆ. ಮಳೆ ಸೃಷ್ಟಿಸಿದ ಅನಾಹುತದಿಂದ ದೈಹಿಕ ಹಾಗೂ ಮಾನಸಿಕವಾಗಿ ಚೇತರಿಸಿಕೊಳ್ಳುತ್ತಿರುವ ಜನರಿಗೆ ಅಲ್ಲಿನ ಸರ್ಕಾರ ಮಾಡುತ್ತಿರುವ ಸಹಾಯಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹೇಗೆ, ಎನು ಮಾಡಬೇಕು ಅಂತ ದಿಕ್ಕೇ ತೋಚಿರಲಿಲ್ಲ. ಸರ್ಕಾರವೇ ಮುಂದೆ ಬಂದು ಸಹಾಯ ಮಾಡಿದೆ ಎಂದಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತೆಲುಗು ಭಾಷೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಜನಜೀವನ ಭಾರೀ ಅಸ್ತವ್ಯಸ್ತ ಸ್ಥಿತಿಗೆ ತಲುಪಿದೆ. ಆಂಧ್ರಪ್ರದೇಶ ವಿಜಯವಾಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಸಾವು - ನೋವು ಸಂಭವಿಸಿದೆ. ಅಲ್ಲದೇ ಹಲವು ಪ್ರದೇಶ ಜಲಾವೃತವಾಗಿದ್ದು. ಜನಜೀವನ ಸಹಜ ಸ್ಥಿತಿಗೆ ಬರಲು ಇನ್ನು ಹಲವು ತಿಂಗಳುಗಳೇ ಬೇಕಾಗುವ ಸಾಧ್ಯತೆ ಇದೆ. ಇನ್ನು ಆಂಧ್ರಪ್ರದೇಶ ಸರ್ಕಾರವು ಮಳೆಯಿಂದ ಸಂಕಷ್ಟಕ್ಕೆ ಗುರಿಯಾದವರ ನೆರವಿಗೆ ಧಾವಿಸಿದೆ. ಈ ಕಾರಣಕ್ಕೆ ಜನರ ಮನೆಗಳನ್ನೂ ಸಹ ಸ್ವಚ್ಛ ಮಾಡಿಕೊಡಲಾಗುತ್ತಿದೆ.

ಮಳೆಯಿಂದ ದ್ವೀಪವಾಗಿರುವ ವಿಜಯವಾಡ
ಮಳೆಯಿಂದಾಗಿ ಆಂಧ್ರಪ್ರದೇಶದ ವಿಜಯವಾಡ ಅಕ್ಷರಶಃ ದ್ವೀಪದಂತೆ ಬದಲಾಗಿದೆ. ವಿಜಯವಾಡ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ನೀರು..ನೀರು ಎನ್ನುವಂತಾಗಿದೆ. ಅಲ್ಲಲ್ಲಿ ನೀರಿನಲ್ಲಿ ಮುಳುಗಿ ಹಾಗೂ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಮೃತದೇಹಗಳು ಸಹ ಸಿಗುತ್ತಿದ್ದು. ಜನರ ಹೃದಯವನ್ನು ನಡುಗಿಸಿದೆ. ಈ ಹಿಂದೆ ಎಂದೂ ಸಿಲುಕದಷ್ಟು ಭಯಂಕರ ಪ್ರಮಾಣದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಮಳೆ ಸಂಕಷ್ಟಕ್ಕೆ ಸಿಲುಕಿವೆ. ಅನ್ನ - ನೀರು ಇಲ್ಲದೆ ಜನ ಸಂಕಷ್ಟ ಅನುಭವಿಸಿದ್ದಾರೆ. ಈ ಮಳೆ ಪ್ರವಾಹ, ಸಂಕಷ್ಟದ ನಡುವೆ ಎರಡೂ ರಾಜ್ಯದ ಮುಖ್ಯಮಂತ್ರಿಗಳು ಜನರ ನೋವಿಗೆ ಸ್ಪಂದಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಅಲ್ಲಿನ ಜನ.
ಆಂಧ್ರಪ್ರದೇಶ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಲ್ಲಿನ ಮನೆಗಳನ್ನು ಸಹ ಸ್ವಚ್ಛ ಮಾಡಿಕೊಡುತ್ತಿದೆ. ಹೌದು ನೀವು ಓದಿದ್ದು, ಸರಿಯಾಗಿಯೇ ಇದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಂತಹದೊಂದು ಕ್ರಮಕ್ಕೆ ಮುಂದಾಗಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಈಗ ಎರಡು ಮೂರು ದಿನಗಳಿಂದ ನೀರಿನ ತೀವ್ರತೆ ತಕ್ಕಮಟ್ಟಿಗೆ ಕಡಿಮೆಯಾಗಿದ್ದು, ಪ್ರವಾಹ ಮಟ್ಟ ಇಳಿದ ಬೆನ್ನಲ್ಲೇ ಜನ ಜೀವನ ಸಹಜ ಸ್ಥಿತಿಗೆ ತಲುಪುತ್ತಿದೆ. ಜನ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದು, ಇದಕ್ಕೆ ಸರ್ಕಾರವು ಸಹ ಕೈ ಜೋಡಿಸಿದೆ.
ಮನೆಗಳನ್ನೇಕೆ ಸ್ವಚ್ಛ ಮಾಡುತ್ತಿದೆ ಸರ್ಕಾರ
ವಿಜಯವಾಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳು ಕೆಸರು ಗದ್ದೆಯಂತೆ ಬದಲಾಗಿವೆ. ಮನೆಯಲ್ಲಿರುವ ಫ್ರಿಡ್ಜ್, ಟಿವಿ, ವಾಷಿಂಗ್‌ಮಿಷನ್, ಮಕ್ಕಳ ಪುಸ್ತಕ ಹಾಗೂ ಮನೆಯ ಅಮೂಲ್ಯ ವಸ್ತುಗಳಿಗೂ ಕೆಸರು ಮೆತ್ತಿಕೊಂಡಿದ್ದು. ಅದನ್ನು ಸ್ವಚ್ಛ ಮಾಡಲು ಜನ ಪರದಾಡುತ್ತಿದ್ದಾರೆ. ಈ ರೀತಿ ಇರುವಾಗಲೇ ಸರ್ಕಾರ ಅವರ ನೆರವಿಗೆ ಧಾವಿಸಿದೆ. ಅಗ್ನಿಶಾಮಕ ದಳ, ವಾಟರ್ ಟ್ಯಾಂಕರ್‌ಗಳ ಮೂಲಕ ಯುದ್ಧೋಪಾದಿಯಲ್ಲಿ ಮನೆಗಳನ್ನು ಸ್ವಚ್ಛ ಮಾಡಿಸಲಾಗುತ್ತಿದೆ. ವಿಜಯವಾಡ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸುತ್ತಮುತ್ತಲಿನ ಜಿಲ್ಲೆಗಳ ನೆರವನ್ನು ಪಡೆದುಕೊಳ್ಳಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಕಾರ್ಪೋರೇಷನ್‌ನ ಸಿಬ್ಬಂದಿಯನ್ನು ಗುಂಪುಗಳಾಗಿ ವಿಂಗಡಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂಲಕ ಸಾರ್ವಜನಿಕರ ಮನೆಗಳನ್ನು ಸರ್ಕಾರವೇ ಸ್ವಚ್ಛ ಮಾಡಿಕೊಡುತ್ತಿದೆ. ಅಗ್ನಿಶಾಮಕ ದಳದ ಪೈಪ್‌ಗಳ ಮೂಲಕ ಮನೆಗಳಲ್ಲಿ ಸೇರಿರುವ ಕೊಳಚೆ ಹಾಗೂ ಕೆಸರು ನೀರನ್ನು ಸ್ವಚ್ಛ ಮಾಡಲಾಗುತ್ತಿದೆ. ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾತ್ರವಲ್ಲ ಶಾಸಕರು ಹಾಗೂ ಸಚಿವರು ಸಹ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇಲ್ಲಿಯವರೆಗೂ 13,000 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸ್ವಚ್ಛ ಮಾಡಿರುವುದು ವರದಿಯಾಗಿದೆ.
ಪ್ರವಾಹ ನಂತರ ಇದೀಗ ಸಾಂಕ್ರಾಮಿಕ ರೋಗದ ಭೀತಿ!
ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಭಾರೀ ಮಳೆಯ ನಂತರ ಇದೀಗ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು. ಸ್ವಚ್ಛತಾ ಕಾರ್ಯ ಜೋರಾಗಿದೆ. ಇಲ್ಲಿನ ಬೀದಿಗಳನ್ನು ಸಹ ಸ್ಥಳೀಯ ಪಾಲಿಕೆಯ ಸಿಬ್ಬಂದಿ ಸ್ವಚ್ಛ ಮಾಡುತ್ತಿದ್ದು. ಬ್ಲಿಚಿಂಗ್ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ. ರೋಗ ಹರಡದಂತೆ ಡ್ರೋಣ್‌ಗಳ ಮೂಲಕವೂ ಔಷಧಿಗಳನ್ನು ಸಿಂಪಡಣೆ ಮಾಡಲಾಗುತ್ತಿದೆ.












Click it and Unblock the Notifications