ಯುಪಿಎ ಕೊಡುಗೆ: ಕೇಂದ್ರ ಸರಕಾರಿ ನೌಕರರಿಗೆ ಸಿಹಿಸುದ್ದಿ

ಲೋಕಸಭೆ ಚುನಾವಣೆ ಎದುರಿಗೇ ಇರುವಾಗ ಕೇಂದ್ರ ಸರಕಾರವು ಆಯೋಗ ರಚನೆಗೆ ಕೈಹಾಕಿರುವುದು ಗಮನಾರ್ಹವಾಗಿದೆ. ತನ್ಮೂಲಕ ಚುನಾವಣೆ ಸಂದರ್ಭದಲ್ಲಿ ಜನಪ್ರಿಯ ನೀತಿಗಳನ್ನು ಪ್ರಕಟಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ.
ಇದೇ ವೇಳೆ Confederation of Central Government Employees and Workers ಒಕ್ಕೂಟವು UPA-II ಸರಕಾರದ ಈ ನಿರ್ಧಾರವನ್ನು ಶ್ಲಾಘಿಸಿದ್ದು, 2011ರ ಜನವರಿಯಿಂದ ಪೂರ್ವಾನ್ವಯವಾಗುವಂತೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತಾಗಬೇಕು ಎಂದು ಆಶಿಸಿದೆ.
7ನೇ ವೇತನ ಆಯೋಗ ಸ್ಥಾಪನೆ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ಈಗಾಗಲೇ ಕ್ಯಾಬಿನೆಟ್ ಪ್ರಸ್ತಾಪವನ್ನು ಸಿದ್ಧಪಡಿಸುತ್ತಿದೆ. ಮುಂದಿನ ಕೆಲವೇ ವಾರಗಳಲ್ಲಿ ಸಂಪುಟದ ಮುಂದೆ ಇದನ್ನು ಮಂಡಿಸಲಾಗುವುದು
ಎಂದು ಮೂಲಗಳು ತಿಳಿಸಿವೆ.
7ನೇ ವೇತನ ಆಯೋಗ ಸ್ಥಾಪನೆಗಾಗಿ ಕೋರಲಾಗಿದ್ದ 3.5 ಕೋಟಿ ರೂ ಅನುದಾನಕ್ಕೆ ಇತ್ತೀಚೆಗಷ್ಟೇ ಪೂರ್ಣಗೊಂಡ ಚಳಿಗಾಲದ ಅಧಿವೇಶನದಲ್ಲಿ ಒಪ್ಪಿಗೆ ಸಿಕ್ಕಿತ್ತು. ಹಾಗಾಗಿ ಲೋಕಸಭೆ ಚುನಾವಣೆಗೆ ಮೊದಲೇ ಆಯೋಗ ರಚಿಸಲು ಸರಕಾರ ಉದ್ದೇಶಿಸಿದೆ.
7ನೇ ವೇತನ ಆಯೋಗವು 2 ವರ್ಷದಲ್ಲಿ ತನ್ನ ವರದಿ ಸಲ್ಲಿಸಲಿದ್ದು, ಆಯೋಗದ ಸಲಹೆಗಳು 2016ರ ಜನವರಿಯಿಂದ ಜಾರಿಯಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಸುಪ್ರೀಂಕೋರ್ಟಿನ ನಿವೃತ್ತ ಜಡ್ಜ್ ಆಯೋಗದ ನೇತೃತ್ವದ ವಹಿಸಲಿದ್ದಾರೆ.
ಈ ಮಧ್ಯೆ, ನೌಕರರಿಗೆ ಕನಿಷ್ಠ ಪಿಂಚಣಿ ಮೊತ್ತವನ್ನು 1,000 ರೂಪಾಯಿಗೆ ನಿಗದಿಪಡಿಸುವ EPFO ಸಂಸ್ಥೆಯ ಪ್ರಸ್ತಾವನೆಗೆ ಕೇಂದ್ರ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಖಾಸಗಿ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ನೌಕರರಿಗೆ Provident Fund ಉಪಲಬ್ದಿಯಾಗುವಂತಾಗಲು ಗರಿಷ್ಠ ಮೂಲ ವೇತನ ಮೊತ್ತವನ್ನು ಈಗಿರುವ 6,500 ರೂ. ಗಳಿಂದ 15,000 ರೂ. ಗೆ ಏರಿಸಲು ನಿರ್ಧರಿಸಿದೆ.
6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 2006ರ ಜನವರಿಯಿಂದ, 5ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 1996ರ ಜನವರಿಯಿಂದ ಮತ್ತು 4ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 1886ರ ಜನವರಿಯಿಂದ ಜಾರಿಗೊಳಿಸಲಾಗಿದೆ. ಹಾಗಾಗಿ ಮುಂದಿನ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 2016ರ ಜನವರಿಯಿಂದ ಜಾರಿಗೊಳಿಸುವ ಸಾಧ್ಯತೆಗಳಿವೆ.












Click it and Unblock the Notifications