ಪುರುಷರು ತಿಲಕ, ಮಹಿಳೆ ಕುಂಕುಮ ಇಡುವುದು ತಪ್ಪಾ?
ಗೋವಾ, ಏ. 6 : ಹಿಂದೂ ಪುರುಷರು ಮನೆಯಿಂದ ಹೊರಗೆ ಕಾಲಿಡುವಾಗ ಹಣೆಗೆ ತಿಲಕ ಧರಿಸಬೇಕು, ಮಹಿಳೆಯರು ಕುಂಕುಮ ಇಟ್ಟುಕೊಳ್ಳಬೇಕು. ಭಾರತೀಯ ನಾರಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಬಾರದು. ಉದ್ರೇಕಿಸುವಂತೆ ಬಿಗಿಯಾದ ಬಟ್ಟೆ ಧರಿಸಬಾರದು ಎಂದು ಹೇಳಿಕೆ ನೀಡಿರುವ ಗೋವಾದ ಸಚಿವರ ಪತ್ನಿಯೊಬ್ಬರು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಬಟ್ಟೆ ಧರಿಸುವುದು ಬಿಡುವುದು, ಕೂದಲು ಕೆದರಿಕೊಳ್ಳುವುದು ಬಿಡುವುದು, ಮದುವೆಗೆ ಮುನ್ನ ಲೈಂಗಿಕತೆಯಲ್ಲಿ ತೊಡಗುವುದು ಬಿಡುವುಗು #MyChoice ಎಂದು ನಟಿಯರು ಹೇಳಿಕೆಕೊಟ್ಟು ಸಮಾಜದ ಕೆಂಗಣ್ಣಿಗೆ ಗುರಿಯಾಗಿರುವ ಸಂದರ್ಭದಲ್ಲಿ, ಗೋವಾದ ಸಚಿವ ದೀಪಕ್ ಧವಳಿಕರ್ ಅವರ ಹೆಂಡತಿ ಲತಾ ಅವರು ನೀಡಿರುವ ಈ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾದರೆ ಅಚ್ಚರಿಯಿಲ್ಲ.

ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲತಾ ಅವರು, ಮಡಗಾಂವ್ ನಲ್ಲಿ ಭಾನುವಾರ ಬಹಿರಂಗ ಸಭೆಯನ್ನು ಉದ್ದೇಶಿಸಿ, ಪೋಷಕರು ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸಬಾರದು, ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸಬಾರದು ಎಂದು ಭಾಷಣ ಬಿಗಿದಿದ್ದಾರೆ.
ಇಂದಿನ ಭಾರತೀಯ ಮಹಿಳೆಯರಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುವುದೇ ಫ್ಯಾಷನ್ ಆಗಿದೆ. ಅಲ್ಲದೆ, ಪ್ರಚೋದಿಸುವಂತೆ ಬಿಗಿಯಾಗಿ ಬಟ್ಟೆ ದರಿಸುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿದ್ದರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚುತ್ತಿವೆ ಎಂದು ಖಡಾಖಂಡಿತವಾಗಿ ನುಡಿದು ಪಾಶ್ಚಿಮಾತ್ಯಪ್ರಿಯರ ಕೋಪಕ್ಕೆ ಗುರಿಯಾಗಿದ್ದಾರೆ.
ಇಷ್ಟು ಮಾತ್ರವಲ್ಲದೆ, ಭಾರತೀಯರು ಜನವರಿ 1ರ ಬದಲು ಗುಡಿ ಪಡ್ವಾ (ಯುಗಾದಿ) ಹಬ್ಬವನ್ನು ಹೊಸ ವರ್ಷವನ್ನಾಗಿ ಆಚರಿಸಬೇಕು. ದೂರವಾಣಿಯಲ್ಲಿ ಮಾತನಾಡುವಾಗ ಹಲೋ ಅನ್ನುವ ಬದಲು ನಮಸ್ಕಾರ ಅಂತ ಭಾರತೀಯ ಭಾಷೆಯಲ್ಲಿ ಹೇಳಬೇಕು ಎಂದು ಕೂಡ ಲತಾ ಅವರು ತಾಕೀತು ಮಾಡಿದ್ದಾರೆ.
ಲತಾ ಅವರು ಇಂಥ ಹೇಳಿಕೆ ನೀಡಿರುವ ಕುರಿತು ಅವರ ಪತಿದೇವ ದೀಪಕ್ ಅವರನ್ನು ಸಂಪರ್ಕಿಸಿದಾಗ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಎಲ್ಲ ತಿಳಿದುಕೊಂಡ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದು ಉತ್ತರಿಸಿದ್ದಾರೆ. ಗೋವಾದ ಸಚಿವರು ಪ್ರತಿಕ್ರಿಯಿಸಲಿ ಬಿಡಲಿ, ಲತಾ ಅವರು ನೀಡಿರುವ ಹೇಳಿಕೆಯಲ್ಲಿ ಏನಾದರೂ ತಪ್ಪಿದೆಯಾ? ನೀವು ಹೇಳಿರಿ.












Click it and Unblock the Notifications