Ghosi bypoll: ಮೊದಲ ಸಂಘರ್ಷದಲ್ಲೇ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಬಿಜೆಪಿಗೆ ಸೋಲು- ಯುಪಿಯಲ್ಲಿ ಬದಲಾಗುತ್ತಿದೆಯಾ ಹವಾ?
ಲಖನೌ, ಸೆಪ್ಟೆಂಬರ್ 09: ಉತ್ತರಪ್ರದೇಶದ ಘೋಸಿ ವಿಧಾನಸಭಾ ಉಪಚುನಾವಣೆಯು ಆಡಳಿತಾರೂಢ ಬಿಜೆಪಿಗೆ ಆಘಾತ ನೀಡಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ಸುಧಾಕರ್ ಸಿಂಗ್ ಅವರು ಬಿಜೆಪಿಯ ದಾರಾ ಸಿಂಗ್ ಚೌಹಾಣ್ ಅವರನ್ನು 42,759 ಮತಗಳಿಂದ ಸೋಲಿಸಿದ್ದಾರೆ. ಹಾಲಿ ಶಾಸಕರಾಗಿದ್ದ ಚೌಹಾಣ್ ಜುಲೈನಲ್ಲಿ ಎಸ್‌ಪಿ ತೊರೆದು ಬಿಜೆಪಿ ಸೇರಿದ್ದರಿಂದ ಉಪಚುನಾವಣೆ ನಡೆದಿದೆ.
ಕ್ಷೇತ್ರವು ಗಮನಾರ್ಹ ಸಂಖ್ಯೆಯ ರಾಜ್‌ಭರ್ ಸಮುದಾಯದ ಮತದಾರರನ್ನು ಹೊಂದಿದೆ. ಎನ್‌ಡಿಎ ಮೈತ್ರಿಕೂಟದ ಪಕ್ಷವಾಗಿರುವ ಒಪಿ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷಕ್ಕೂ ಈ ಸೋಲು ಭಾರೀ ನಿರಾಶೆ ಉಂಟುಮಾಡಿದೆ.

ಪ್ರತಿಪಕ್ಷಗಳ ಮೈತ್ರಿಕೂಟವಾದ 'ಇಂಡಿಯಾ' ಬಣಕ್ಕೆ ಈ ಗೆಲುವು ಹೆಚ್ಚು ಬಲತಂದುಕೊಟ್ಟಿದೆ. ಇದು ಇಂಡಿಯಾ ಮೈತ್ರಿಕೂಟ ರಚನೆಯ ನಂತರ ಬಿಜೆಪಿ ವಿರುದ್ಧದ ಮೊದಲ ಚುನಾವಣಾ ಮುಖಾಮುಖಿಯಾಗಿದೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದು ಸಮಾಜವಾದಿ ಪಕ್ಷದ ಗೆಲುವಿಗೆ ನೆರವಾಗಿದೆ.
ಎಸ್‌ಪಿ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲ ಘೋಷಿಸಿತ್ತು. ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ನೋಟಾಗೆ ಮತ ಹಾಕುವಂತೆ ಮತದಾರರಿಗೆ ಮನವಿ ಮಾಡಿದ್ದರು.
ಉಪಚುನಾವಣೆಯಲ್ಲಿ ಗೆದ್ದರೆ ಒಬಿಸಿ ನಾಯಕ ಚೌಹಾಣ್ ಅವರು ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಈಗ ಅಸಾಧ್ಯವಾಗಿದೆ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ತಿಳಿಯಿರಿ.
ಚೌಹಾಣ್ ವಿರುದ್ಧ ಅಸಮಾಧಾನ
ಪಕ್ಷ ನಿಷ್ಠೆ ಬದಲಿಸಿ ಚುನಾವಣೆಗೆ ಹೋಗಿದ್ದರಿಂದ ಚೌಹಾಣ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಚೌಹಾಣ್ ಅವರು 2017 ರಲ್ಲಿ ಆದಿತ್ಯನಾಥ್ ಅವರ ಮೊದಲ ಅವಧಿಯಲ್ಲಿ ಸಚಿವರಾಗಿದ್ದರು. 2022 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸಮಾಜವಾದಿ ಪಕ್ಷಕ್ಕೆ ಸೇರಿಕೊಂಡರು. ಬಿಜೆಪಿಯ ವಿಜಯ್ ಕುಮಾರ್ ರಾಜ್‌ಭರ್ ವಿರುದ್ಧ 22,000 ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರು. ಅವರು ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಜನರಲ್ಲಿ ಅಸಮಾಧಾನವಿತ್ತು ಎಂದು ಹೇಳಲಾಗುತ್ತಿದೆ.
ಸ್ಥಳೀಯರ ವಿರುದ್ಧ ಹೊರಗಿನವರು: ಸುಧಾಕರ್ ಸಿಂಗ್ ಸ್ಥಳೀಯ ರಾಜಕಾರಣಿ ಎಂಬುದು ವಿಚಾರವು ಅವರ ಪರವಾಗಿ ಕೆಲಸ ಮಾಡಿದೆ. ಕ್ಷೇತ್ರದಲ್ಲಿ ವಾಸವಾಗಿರುವ ಅವರು ಈ ಹಿಂದೆಯೂ ಶಾಸಕರಾಗಿ ಕೆಲಸ ಮಾಡಿದ್ದಾರೆ. ಚೌಹಾಣ್ ಅವರು ಮಧುಬನ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಘೋಸಿ ಟಿಕೆಟ್ ಪಡೆದು ಗೆಲುವು ಸಾಧಿಸಿದರು. ಚೌಹಾಣ್ ಹೊರಗಿನವರು ಸ್ಥಳೀಯರು ಭಾವಿಸಿದರು. ಹೀಗಾಗಿ ಬಿಜೆಪಿ ಸೋಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಇಂಡಿಯಾ ಮೈತ್ರಿಕೂಟಕ್ಕೆ ನೆರವಾದ ಬಿಜೆಪಿ ಮೌನ
ಬಿಎಸ್‌ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಮೌನವಾಗಿ ಉಳಿಯಿತು. ಇದು ಇಂಡಿಯಾ ಮೈತ್ರಿಕೂಟಕ್ಕೆ ಹೆಚ್ಚು ಬಲತಂದುಕೊಟ್ಟಿತು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಿಎಸ್‌ಪಿ ಕಣಕ್ಕೆ ಇಳಿದಿದ್ದರೆ, ಇಂಡಿಯಾ ಮೈತ್ರಿಕೂಟದ ಗೆಲುವು ಕಷ್ಟವಾಗುತ್ತಿತ್ತು. ಕಾರಣ, ಪಕ್ಷವು ಘೋಸಿಯಲ್ಲಿ ನೆಲೆಯನ್ನು ಹೊಂದಿದೆ. ದಲಿತರ ಮತಗಳ ದೊಡ್ಡ ಪಾಲು ಸುಧಾಕರ್ ಸಿಂಗ್ ಪಾಲಾಗಿದೆ. ಪಕ್ಷದ ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ಬಿಎಸ್‌ಪಿ ಮತಗಳು ಇಂಡಿಯಾ ಮೈತ್ರಿಕೂಟಕ್ಕೆ ಹೋಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications