ಆಸ್ಟ್ರೇಲಿಯಾ ಕೆಲಸ ಬಿಟ್ಟು ತಾಯ್ನಾಡಿಗೆ ಮರಳಿ ಊರಿನವರ ಸೇವೆಗೆ ನಿಂತ ಯುವಕ: ಇದು ರೈತನ ಮಗನ ಸಾಧನೆ

ಬಾಂಡೆ ಎನ್ನುವುದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸುರ್ಜಾಗಢ್ ಕಬ್ಬಿಣದ ಅದಿರು ಗಣಿಯ ಸಮೀಪವಿರುವ ಒಂದು ಕುಗ್ರಾಮ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದಿದ ಯುವಕನೊಬ್ಬ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಇಗ್ನಾಸಿಯಸ್ ಪ್ರಕಾಶ್ ಬಡಾ ಎಂಬ ಯುವಕ ಈ ಅಸಾಧ್ಯವನ್ನ ಸಾಧ್ಯವಾಗಿಸಿದ್ದಾರೆ.

ಕೇವಲ ವಿದೇಶದಲ್ಲಿ ಓದಿದ್ದು ಮಾತ್ರವಲ್ಲದೆ, ಅಲ್ಲಿನ ಆಕರ್ಷಕ ಉದ್ಯೋಗಾವಕಾಶಗಳನ್ನ ಬದಿಗೊತ್ತಿ, ತನ್ನೂರಿನ ಅಭಿವೃದ್ಧಿಗಾಗಿ ಮರಳಿ ಬಂದಿರುವ ಇವರ ಕಥೆ ಗ್ರಾಮೀಣ ಯುವಕರಿಗೆ ದೊಡ್ಡ ಸ್ಫೂರ್ತಿ ಎನ್ನಬಹುದು.

Gadchiroli Youth Ignasiyus Prakash Bada Returns From Australia To Work For Hometown Development

ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ: ಬಡತನದಿಂದ ಸಿಡಿದೆದ್ದ ಪ್ರತಿಭೆ

ಇಗ್ನಾಸಿಯಸ್ ಅವರ ತಾಯಿ ಸರಿತಾ ಅಂಗನವಾಡಿ ಸಹಾಯಕಿ ಹಾಗೆಯೇ ತಂದೆ ಪ್ರಕಾಶ್ ಕೃಷಿಕರು. ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಮಕ್ಕಳಿಗೆ ಶಿಕ್ಷಣದ ಕೊರತೆಯಾಗದಂತೆ ಅವರು ನೋಡಿಕೊಂಡರು. ಬಾಂಡೆ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇಗ್ನಾಸಿಯಸ್, ಬಳಿಕ ನಾಗ್ಪುರದಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದರು.

ಆಸ್ಟ್ರೇಲಿಯಾಕ್ಕೆ ಹೋಗಿ ಓದಬೇಕು ಎಂದು ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಕುಟುಂಬವನ್ನು ನಿರ್ವಹಿಸಬೇಕು ಎಂಬುದಷ್ಟೇ ಅವರ ಗುರಿಯಾಗಿತ್ತು. ಆದರೆ, 'ಲಾಯ್ಡ್ಸ್ ಮೆಟಲ್ಸ್ ಆ್ಯಂಡ್ ಎನರ್ಜಿ' (Lloyds Metals & Energy) ಸಂಸ್ಥೆಯು ಇವರ ಪಾಲಿಗೆ ಬೆಳಕಾಯಿತು ನೋಡಿ.

ಲಾಯ್ಡ್ಸ್ ಮೆಟಲ್ಸ್ ಆ್ಯಂಡ್ ಎನರ್ಜಿ ನೆರವಿನೊಂದಿಗೆ ಆಸ್ಟ್ರೇಲಿಯಾ ಪಯಣ

ಲಾಯ್ಡ್ಸ್ ಇನ್ಫಿನಿಟ್ ಫೌಂಡೇಶನ್‌ನ ಕರ್ಟಿನ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವ ಕಾರ್ಯಕ್ರಮದ ಅಡಿಯಲ್ಲಿ ಇಗ್ನಾಸಿಯಸ್ ಆಯ್ಕೆಯಾದರು. ಪರೀಕ್ಷೆ, ಸಂದರ್ಶನ, ಐಇಎಲ್ಟಿಎಸ್ (IELTS) ಎಲ್ಲವನ್ನೂ ಯಶಸ್ವಿಯಾಗಿ ಪೂರೈಸಿದ ಅವರಿಗೆ, ಆಸ್ಟ್ರೇಲಿಯಾದ ಪರ್ತ್‌ನಲ್ಲಿರುವ ಕರ್ಟಿನ್ ವಿಶ್ವವಿದ್ಯಾಲಯದಲ್ಲಿ 'ಇನ್ನೋವೇಶನ್ ಮತ್ತು ಎಂಟರ್‌ಪ್ರೆನ್ಯೂರ್‌‌ಶಿಪ್' ನಲ್ಲಿ ಸ್ನಾತಕೋತ್ತರ ಪದವಿ ಓದುವ ಅವಕಾಶ ಸಿಕ್ಕಿತು.

ಸಂಸ್ಥೆಯೇ ಅವರ ಬೋಧನಾ ಶುಲ್ಕ, ವಸತಿ ಮತ್ತು ಪ್ರಯಾಣ ವೆಚ್ಚವನ್ನ ಭರಿಸಿತು. ಆರಂಭದಲ್ಲಿ ಹೊಸ ದೇಶ, ಹೊಸ ಭಾಷೆ ಹಾಗೂ ಬೇರೆಯದೇ ಆದ ಕಲಿಸುವ ವಿಧಾನಗಳು ಅವರಿಗೆ ಸವಾಲಾಗಿ ಪರಿಣಮಿಸಿದವು. ಆದರೆ "ನನಗೆ ಗೊತ್ತಿಲ್ಲದ್ದನ್ನ ನಾನು ಕಲಿಯಬಲ್ಲೆ" ಎಂಬ ವಿಶ್ವಾಸ ಅವರನ್ನ ಮುನ್ನಡೆಸಿತು.

ಬಿಸಿನೆಸ್ ಅನಾಲಿಟಿಕ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಹಾಗೂ ಮಾರುಕಟ್ಟೆ ತಂತ್ರಗಳ ಬಗ್ಗೆ ಅವರು ಆಳವಾದ ಜ್ಞಾನ ಸಂಪಾದಿಸಿದರು.

ತಾಯ್ನಾಡಿಗೆ ಮರಳಿದ ಯುವಕ: ತನ್ನೂರಿನ ಸೇವೆಗೆ ಸಮರ್ಪಣೆ

ಸ್ನಾತಕೋತ್ತರ ಪದವಿ ಮುಗಿದ ಬಳಿಕ ಇಗ್ನಾಸಿಯಸ್ ಆಸ್ಟ್ರೇಲಿಯಾದಲ್ಲೇ ಉನ್ನತ ಹುದ್ದೆ ಗಿಟ್ಟಿಸಬಹುದಿತ್ತು. ಆದರೆ, ಅವರು ಗಡ್ಚಿರೋಲಿಗೆ ಮರಳಿ, ತಮಗೆ ನೆರವಾದ ಲಾಯ್ಡ್ಸ್ ಮೆಟಲ್ಸ್ ಆ್ಯಂಡ್ ಎನರ್ಜಿ ಕಂಪನಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ವೃತ್ತಿಜೀವನ ಆರಂಭಿಸಿದರು. ಗಡ್ಚಿರೋಲಿಯಂತಹ ಸೂಕ್ಷ್ಮ ಹಾಗೂ ಸಂಘರ್ಷಪೀಡಿತ ಪ್ರದೇಶವು ಇಂದು ಕೈಗಾರಿಕಾ ಕೇಂದ್ರವಾಗಿ ಬದಲಾಗುತ್ತಿರುವುದನ್ನು ಅವರು ಹತ್ತಿರದಿಂದ ಕಂಡಿದ್ದಾರೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ. ಪ್ರಭಾಕರನ್ ಅವರ ದೃಷ್ಟಿಕೋನವು ಇವರ ಮೇಲೆ ಅಪಾರ ಪ್ರಭಾವ ಬೀರಿದೆ. ಕೈಗಾರಿಕೆ ಎಂದರೆ ಕೇವಲ ಲಾಭ ಸಂಪಾದನೆಯಲ್ಲ, ಅದರ ಸುತ್ತಮುತ್ತಲಿನ ಸಮುದಾಯದ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯೂ ಹೌದು ಎಂಬುದನ್ನ ಇಗ್ನಾಸಿಯಸ್ ಅರಿತಿದ್ದಾರೆ. ಕಲಿಯುವುದು ಇನ್ನೂ ಬಹಳಷ್ಟಿದೆ, ಹಾಗಾಗಿ ಸದ್ಯಕ್ಕೆ ಪ್ರಾಯೋಗಿಕ ಅನುಭವ ಪಡೆಯುವುದರತ್ತ ಗಮನಹರಿಸುವುದಾಗಿ ಅವರು ತಿಳಿಸಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಫೂರ್ತಿ

ಇಂದು ಇಗ್ನಾಸಿಯಸ್ ಅವರ ಕುಟುಂಬವು ಮಗನ ಈ ಅಸಾಧಾರಣ ಸಾಧನೆಯನ್ನ ಕಂಡು ಹೆಮ್ಮೆಪಡುತ್ತಿದೆ. ತಂದೆ-ತಾಯಿ ಪಟ್ಟ ಕಷ್ಟದ ಫಲವಾಗಿ, ನಾಲ್ಕು ಮಕ್ಕಳಲ್ಲಿ ಒಬ್ಬರಾದ ಇಗ್ನಾಸಿಯಸ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. "ನಾವು ಎಲ್ಲಿಂದ ಬಂದಿದ್ದೇವೆ ಎಂಬುದು, ನಾವು ಎಷ್ಟು ದೂರ ಸಾಗುತ್ತೇವೆ ಎಂಬುದನ್ನು ಎಂದಿಗೂ ನಿರ್ಧರಿಸುವುದಿಲ್ಲ. ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನವಿದ್ದರೆ ಗ್ರಾಮೀಣ ವಿದ್ಯಾರ್ಥಿಗಳು ಸಹ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು" ಎಂದು ಅವರು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+