G 20; ಶೃಂಗಸಭೆ ಮುಗಿಸಿ ಹೊರಟ ಅಮೆರಿಕ ಅಧ್ಯಕ್ಷ ಜೋ ಬೈಡನ್
ನವದೆಹಲಿ, ಸೆಪ್ಟೆಂಬರ್ 10; ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜಿ 20 ಶೃಂಗ ಸಭೆ ಮುಗಿಸಿ ವಾಪಸ್ ಆದರು. ಭಾನುವಾರ ಅವರು ದೆಹಲಿಯಿಂದ ವಿಯೇಟ್ನಾಂಗೆ ಪ್ರಯಾಣ ಬೆಳೆಸಿದರು. ಶುಕ್ರವಾರ ಸಂಜೆ ಅವರು ನವದೆಹಲಿಗೆ ಆಗಮಿಸಿದ್ದರು.
ಜೋ ಬೈಡಲ್ ಅಮೆರಿಕದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದರು. ಎರಡು ದಿನದ ಪ್ರವಾಸದಲ್ಲಿ ಅವರು ಹಲವು ಸಭೆಗಳಲ್ಲಿ ಪಾಲ್ಗೊಂಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರನ್ನು ಭೇಟಿಯಾದರು.

ನವದೆಹಲಿಯಲ್ಲಿ ಶನಿವಾರ ಮತ್ತು ಭಾನುವಾರ ಜಿ 20 ಶೃಂಗಸಭೆ ನಡೆಯುತ್ತಿದೆ. ಶೃಂಗಸಭೆಗೆ 12.30ಕ್ಕೆ ತೆರೆ ಬೀಳಲಿದೆ. ಇದಕ್ಕೂ ಮೊದಲೇ ಅಮೆರಿಕ ಅಧ್ಯಕ್ಷರು ತಮ್ಮ ಎಲ್ಲಾ ಕಾರ್ಯಕ್ರಮ ಮುಗಿಸಿ, ವಿಯೇಟ್ನಾಂಗೆ ತೆರಳಿದರು.
ದೆಹಲಿಯಲ್ಲಿ ವಿಮಾನ ಹತ್ತುವ ಮೊದಲು ಜೋ ಬೈಡನ್ ವಿಮಾನ ನಿಲ್ದಾಣದಲ್ಲಿ ಭಾರತದಲ್ಲಿ ನೆಲೆಸಿರುವ ಅಮೆರಿಕದ ಪ್ರಜೆಗಳೊಂದಿಗೆ ಮಾತುಕತೆ ನಡೆಸಿದರು. ಶುಕ್ರವಾರ ಸಂಜೆ ಭಾರತಕ್ಕೆ ಆಗಮಿಸಿದ ಬೈಡನ್ ಶೃಂಗ ಸಭೆ ಮುಗಿಸು ವಾಪಸ್ ಆದರು.
ಪ್ರಧಾನಿ ನರೇಂದ್ರ ಮೋದಿ ಭೇಟಿ; ಶುಕ್ರವಾರ ಸಂಜೆ ದೆಹಲಿಗೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು. ಜೋ ಬೈಡನ್ ಮತ್ತು ನರೇಂದ್ರ ಮೋದಿ ಭೇಟಿ, ಭಾರತ ಮತ್ತು ಅಮೆರಿಕದ ನಡುವೆ ಬಾಂಧವ್ಯ ವೃದ್ಧಿ ಕುರಿತಾದ ವ್ಯಾಪಕ ಅಂಶಗಳನ್ನು ಒಳಗೊಂಡಿತ್ತು ಎಂದು ಪ್ರಧಾನಿಗಳ ಕಛೇರಿ ಹೇಳಿತ್ತು.
ಮೋದಿ ಮತ್ತು ಬೈಡನ್ ಭೇಟಿಯ ಸಮಯದಲ್ಲಿ ಅಮೆರಿಕ ಹಣಕಾಸು ಇಲಾಖೆ ಕಾರ್ಯದರ್ಶಿ, ಅಮೆರಿಕದ ವಿದೇಶಾಂಗ ಸಚಿವ, ಭಾರತದ ವಿದೇಶಾಂಗ ಸಚಿವರು, ಎನ್‌ಎಸ್‌ಎ ಅಜಿತ್ ಧೋವಲ್ ಮುಂತಾದವರು ಉಪಸ್ಥಿತರಿದ್ದರು.
ಸುಮಾರು 50 ನಿಮಿಷ ಈ ಭೇಟಿಯ ವೇಳೆ ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರ ಯೋಜನೆಗಳ ಕುರಿತು ಮಹತ್ವದ ಮಾತುಕತೆ ನಡೆದಿತ್ತು. ಜೆಟ್ ಎಂಜಿನ್ ಮತ್ತು ಡ್ರೋನ್ ನಿರ್ಮಾಣ ಯೋಜನೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಎರಡು ದೇಶಗಳು ಸಹಮತ ವ್ಯಕ್ತಪಡಿಸಿದ್ದವು.
ಶನಿವಾರ ಜಿ 20 ಶೃಂಗಸಭೆಯ ಮೊದಲ ದಿನ ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದ ನಾಯಕರು ಶೃಂಗಸಭೆ ವೇದಿಕೆಯಲ್ಲಿ ಪರಸ್ಪರ ಭೇಟಿಯಾಗಿದ್ದರು. ನಾಯಕರ ಜಂಟಿ ಹೇಳಿಕೆಯಲ್ಲಿ, 'ಅಂತಾರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿರುವ ಜಿ 20ಯಲ್ಲಿ ನಮ್ಮ ಸಹಭಾಗಿತ್ವದ ಬದ್ಧತೆಯನ್ನು ಪುನರುಚ್ಚರಿಸಲು ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದ ನಾಯಕರು ಶೃಂಗಸಭೆಯ ವೇದಿಕೆಯಲ್ಲಿ ಭೇಟಿಯಾಗಿದ್ದೇವೆ' ಎಂದು ಹೇಳಿಕೆ ನೀಡಲಾಗಿತ್ತು.
'ಜಾಗತಿಕ ಸವಾಲುಗಳನ್ನು ಎದುರಿಸಲು ಪ್ರಸ್ತುತ ಮತ್ತು ಮುಂದಿನ ಮೂರು ಜಿ 20 ಅಧ್ಯಕ್ಷತೆಗಳಲ್ಲಿ, ನಾವು ಭಾರತದ ಜಿ 20 ಅಧ್ಯಕ್ಷತೆಯ ಐತಿಹಾಸಿಕ ಪ್ರಗತಿಯ ನಿಟ್ಟಿನಲ್ಲೇ ಮುಂದುವರಿಯುತ್ತೇವೆ. ವಿಶ್ವ ಬ್ಯಾಂಕ್ ಅಧ್ಯಕ್ಷರ ಜೊತೆಗೂಡಿ ಇದೇ ಉತ್ಸಾಹದಲ್ಲಿ, ಮತ್ತಷ್ಟು ಉತ್ತಮ, ಬೃಹತ್ ಮತ್ತು ಹೆಚ್ಚು ಪರಿಣಾಮಕಾರಿಯಾದ ಬಹು ಆಯಾಮದ ಅಭಿವೃದ್ಧಿಯ ಬ್ಯಾಂಕ್‌ಗಳನ್ನು ನಿರ್ಮಿಸುವ ಜಿ 20ರ ಬದ್ಧತೆಯನ್ನು ನಾವು ಸ್ವಾಗತಿಸುತ್ತೇವೆ' ಎಂದು ಹೇಳಿಕೆ ಕೊಟ್ಟಿದ್ದರು.
ಶನಿವಾರ ನಡೆದ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಸಭೆಯಲ್ಲಿಯೂ ನರೇಂದ್ರ ಮೋದಿ ಜೊತೆ ಜೋ ಬೈಡನ್ ಪಾಲ್ಗೊಂಡಿದ್ದರು. ಜಾಗತಿಕ ಜೈವಿಕ ಇಂಧನ ಒಕ್ಕೂಟ ಸುಸ್ಥಿರತೆ ಮತ್ತು ಶುದ್ಧ ಇಂಧನ ಅನ್ವೇಷಣೆಯಲ್ಲಿ ಒಂದು ಅಪೂರ್ವ ಕ್ಷಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಶುದ್ಧ ಇಂಧನ ಕಡೆಗೆ ನಮ್ಮ ಅನ್ವೇಷಣೆಯಲ್ಲಿ ಇದು ಮಹತ್ವದ ಘಟ್ಟವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಈ ಒಕ್ಕೂಟಕ್ಕೆ ಸೇರ್ಪಡೆಗೊಂಡ ಸದಸ್ಯ ರಾಷ್ಟ್ರಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದರು.












Click it and Unblock the Notifications