G20 Summit 2023: ಆಫ್ರಿಕನ್ ಒಕ್ಕೂಟಕ್ಕೆ ಜಿ-20 ಶಾಶ್ವತ ಸದಸ್ಯತ್ವ! ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದೇನು?
ನವದೆಹಲಿ, ಸೆಪ್ಟೆಂಬರ್ 09: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆ ಇಂದಿನಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆಫ್ರಿಕನ್ ಯೂನಿಯನ್‌ಗೆ ಜಿ-20 ಒಕ್ಕೂಟದ ಶಾಶ್ವತ ಸದಸ್ಯತ್ವವನ್ನು ಘೋಷಿಸಿದರು. ದಿಲ್ಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಮೊದಲ ಅಧಿವೇಶನದಲ್ಲಿ ಆಫ್ರಿಕಾ ಯೂನಿಯನ್‌ನ ಅಧ್ಯಕ್ಷ ಅಝಲಿ ಅಸ್ಸೌಮನಿ ಜಿ-20 ಒಕ್ಕೂಟದ ಶಾಶ್ವತ ಸದಸ್ಯರಾಗಿ ಸ್ಥಾನವನ್ನ ಅಲಂಕರಿಸಿದರು.
ತಮ್ಮ ಭಾಷಣದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೊರಾಕೊದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಪ್ರಸ್ತಾಪಿಸಿದ್ದು, ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಅಲ್ಲದೇ ನಿಮ್ಮ ನೋವಿನಲ್ಲಿ ನಾವಿದ್ದೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಅಂತಾ ಪ್ರಾರ್ಥಿಸುತ್ತೇವೆ. ಇಡೀ ಜಗತ್ತು ನಿಮ್ಮೊಂದಿಗಿದೆ ಮತ್ತು ನಾವು ನಿಮಗೆ ಎಲ್ಲಾ ಸಹಾಯವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.

ಇನ್ನೂ ಭಾರತ ನಿಮ್ಮನ್ನು ಸ್ವಾಗತಿಸುತ್ತದೆ ಎಂದು ಹೇಳುವ ಮೂಲಕ ದೇಶದ ಹೆಸರನ್ನು ಅಧಿಕೃತವಾಗಿ ಇಂಡಿಯಾ ಬದಲು Bharat ಎಂದು ಪ್ರತಿಪಾದಿಸಿದರು. ಅಲ್ಲದೇ ಜಾಗತಿಕ ನಂಬಿಕೆಯ ಕೊರತೆಯನ್ನು ಹೊಗಲಾಡಿಸಿ ರಾಷ್ಟ್ರಗಳ ನಡುವೆ ವಿಶ್ವಾಸ ಮತ್ತು ಅವಲಂಬನೆ ಸೃಷ್ಟಿಸುವ ಅಗತ್ಯ ಇದೆ. ಇಡೀ ವಿಶ್ವವೂ ಒಂದಾಗಿ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದರು.
ಸೈಬರ್ ದಾಳಿ ಭಯೋತ್ಪಾದನೆಯ ಭೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಿಂತಿಸಬೇಕಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು. ಕೋವಿಡ್ ಸಾಂಕ್ರಾಮಿಕದ ಬಳಿಕ ಜಗತ್ತು ನಂಬಿಕೆ ಕೊರತೆ ಎಂಬ ಹೊಸ ಸವಾಲನ್ನು ಎದುರಿಸುತ್ತಿದೆ. ಯುದ್ಧಗಳು ಕೂಡ ಇದನ್ನೆ ಅವಲಂಭಿಸಿರುವುದು ದುರದೃಷ್ಟಕರ. ಆದರೆ, ನಾವು ಕೋವಿಡ್‌ನಂತಹ ಸಾಂಕ್ರಾಮಿಕ ರೋಗವನ್ನೇ ಸೋಲಿಸಿರುವಾಗ ನಂಬಿಕೆ ಕೊರತೆಯ ಸವಾಲನ್ನು ಕೂಡ ನಾವು ಗೆಲ್ಲಬಹುದು ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನೂ G-20ಯ ಅಧ್ಯಕ್ಷತೆ ವಹಿಸಿರುವ ಭಾರತವು ಇಂದು ಜಾಗತಿಕ ನಂಬಿಕೆ ಕೊರತೆಯನ್ನು ನಂಬಿಕೆ ಮತ್ತು ಆತ್ಮವಿಶ್ವಾಸವನ್ನಾಗಿ ಬದಲಾಯಿಸಲು ಇಡೀ ಜಗತ್ತನ್ನು ಆಹ್ವಾನಿಸುತ್ತದೆ. ಎಲ್ಲರೂ ಜೊತೆಯಾಗಿ ನಡೆಯಲು ಇದು ಸಮಯ ಎಂದ ಅವರು, ಈ ಸಮಯದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಮಂತ್ರ ವಿಶ್ವಕ್ಕೆ ಮಾರ್ಗದರ್ಶಿಯಾಗಬಲ್ಲದು.
21 ನೇ ಶತಮಾನದ ಈ ಸಮಯವು ಇಡೀ ಜಗತ್ತಿಗೆ ತೋರಿಸಲು ಮತ್ತು ನಿರ್ದೇಶನವನ್ನು ನೀಡಲಿದೆ ಎಂದರು. ನಾವು ಮಾನವ ಕೇಂದ್ರಿತ ವಿಧಾನದೊಂದಿಗೆ ಮುನ್ನಡೆಯಬೇಕು. ಉತ್ತರ ಹಾಗೂ ದಕ್ಷಿಣ ನಡುವೆ ಪ್ರತ್ಯೇಕತೆ ಇದ್ದರೂ, ಪಶ್ಚಿಮ ಮತ್ತು ಪೂರ್ವದ ನಡುವೆ ಅಂತರವಿದ್ದರೂ, ನಾವು ಮುಂದಿನ ಪೀಳಿಗೆಗಳಿಗಾಗಿ ಆಹಾರ ಮತ್ತು ಇಂಧನದ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಭದ್ರತೆ, ಆರೋಗ್ಯ, ಶಕ್ತಿ ಮತ್ತು ನೀರಿನ ಸುರಕ್ಷತೆಗಾಗಿ ಸಮರ್ಥವಾದ ಪರಿಹಾರವನ್ನು ಹುಡುಕಬೇಕಾಗಿದೆ ಎಂದು ಕರೆ ನೀಡಿದರು.












Click it and Unblock the Notifications