ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದಿದ್ದ 22 ವರ್ಷದ ಯುವಕ ಇದೀಗ ಮೊದಲ ಯತ್ನದಲ್ಲೇ UPSC ಪಾಸ್

ಹಿಮಾಚಲ ಪ್ರದೇಶದ 22 ವರ್ಷದ ಯುವಕ ವಿಕಾಸ್ ಸಿಂಗ್ ಪನ್ವಾರ್ ಕೇವಲ ಕೆಲವೇ ತಿಂಗಳ ಅಂತರದಲ್ಲಿ ಎರಡು ದೊಡ್ಡ ಮೈಲಿಗಲ್ಲುಗಳನ್ನ ತಲುಪುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.

ಹೌದು, ಟೆಲಿವಿಷನ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯಲ್ಲಿ (ಕೆಬಿಸಿ) ಲಕ್ಷಾಂತರ ರೂಪಾಯಿ ಗೆದ್ದಿದ್ದ ಈ ಯುವಕ, ಇದೀಗ ದೇಶದ ಅತ್ಯಂತ ಕಠಿಣ ನಾಗರಿಕ ಸೇವಾ ಪರೀಕ್ಷೆಯಲ್ಲೂ (UPSC) ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅಸಂಖ್ಯಾತ ಯುವಜನತೆಗೆ ಮಾದರಿಯಾಗಿದ್ದಾರೆ.

From Winning Rs 50 Lakh on KBC Vikas Singh Panwar Passed UPSC in First Attempt With AIR 159

ಕೌನ್ ಬನೇಗಾ ಕರೋಡ್‌ಪತಿ ವೇದಿಕೆಯಲ್ಲಿ 50 ಲಕ್ಷ ರೂ. ಗೆಲುವು

ಒಂದೆಡೆ ಯುಪಿಎಸ್‌ಸಿ ಪರೀಕ್ಷೆಗೆ ಕಠಿಣ ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲೇ ವಿಕಾಸ್ ಸಿಂಗ್ ಪನ್ವಾರ್ ಅವರು 2025ರ ನವೆಂಬರ್‌ನಲ್ಲಿ ಖ್ಯಾತ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 17ರ ಹಾಟ್ ಸೀಟ್ ಏರುವ ಅವಕಾಶ ಪಡೆದಿದ್ದರು. ತಮ್ಮ ಅದ್ಭುತ ಜ್ಞಾನದ ಮೂಲಕ ಒಂದೊಂದೇ ಪ್ರಶ್ನೆಗಳಿಗೆ ನಿಖರ ಉತ್ತರ ನೀಡುತ್ತಾ ಹೋದ ಅವರು ಬರೋಬ್ಬರಿ 50 ಲಕ್ಷ ರೂಪಾಯಿಗಳನ್ನ ಗೆದ್ದುಕೊಂಡರು.

1 ಕೋಟಿ ರೂಪಾಯಿಯ ಪ್ರಶ್ನೆಯವರೆಗೂ ತಲುಪಿದ್ದ ವಿಕಾಸ್, ಅಲ್ಲಿ ತಪ್ಪು ಉತ್ತರ ನೀಡಿ ಗೆದ್ದ ಹಣವನ್ನ ಕಳೆದುಕೊಳ್ಳುವ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದೆ ಆಟದಿಂದ ಹಿಂದೆ ಸರಿದಿದ್ದರು. ಆದರೆ, ವಿಶೇಷವೆಂದರೆ ಕ್ವಿಟ್ ಆದ ನಂತರ ಅವರು ಊಹಿಸಿದ್ದ ಆ ಒಂದು ಕೋಟಿ ರೂ. ಪ್ರಶ್ನೆಯ ಉತ್ತರವು ಸಂಪೂರ್ಣವಾಗಿ ಸರಿಯಾಗಿತ್ತು. ಅವರ ಈ ಚಾಣಾಕ್ಷತೆ ವೀಕ್ಷಕರ ಹಾಗೂ ಖುದ್ದು ಅಮಿತಾಭ್ ಬಚ್ಚನ್ ಅವರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮೊದಲ ಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 159ನೇ ರ‍್ಯಾಂಕ್

ಕೆಬಿಸಿಯಲ್ಲಿ ಗೆದ್ದ ಖುಷಿ ಮಾಸುವ ಮುನ್ನವೇ, ಕೇವಲ ಕೆಲವೇ ತಿಂಗಳುಗಳಲ್ಲಿ ವಿಕಾಸ್ ಅವರು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಓದಿನಲ್ಲಿ ಅತ್ಯಂತ ಚಾಣಾಕ್ಷರಾಗಿರುವ ಇವರು, 2025ನೇ ಸಾಲಿನ ಪ್ರತಿಷ್ಠಿತ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 159ನೇ ರ‍್ಯಾಂಕ್ (AIR 159) ಗಳಿಸಿದ್ದಾರೆ.

ವರದಿಗಳ ಪ್ರಕಾರ, ಅವರು ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಒಟ್ಟು 988 ಅಂಕಗಳನ್ನ ಪಡೆಯುವ ಮೂಲಕ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಸತತ ಅಧ್ಯಯನ, ಪ್ರಚಲಿತ ವಿದ್ಯಮಾನಗಳ ಮೇಲಿನ ಹಿಡಿತ ಮತ್ತು ಏಕಾಗ್ರತೆಯೇ ಇವರ ಈ ಭಾರಿ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಹಿಮಾಚಲ ಪ್ರದೇಶದಿಂದ ದೆಹಲಿ ವಿಶ್ವವಿದ್ಯಾಲಯದವರೆಗಿನ ಶೈಕ್ಷಣಿಕ ಪಯಣ

ಹಿಮಾಚಲ ಪ್ರದೇಶದ ಜುಬ್ಲಿ ಎಂಬ ಪುಟ್ಟ ಮತ್ತು ಸುಂದರ ಗ್ರಾಮದಿಂದ ಬಂದ ವಿಕಾಸ್ ಅವರ ಶೈಕ್ಷಣಿಕ ಪಯಣ ಕೂಡ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದರೂ ದೊಡ್ಡ ಕನಸುಗಳನ್ನ ಕಂಡಿದ್ದ ಅವರು, ಉನ್ನತ ವ್ಯಾಸಂಗಕ್ಕಾಗಿ ನವದೆಹಲಿಗೆ ಆಗಮಿಸಿದರು.

ಅಲ್ಲಿ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಹಿಂದೂ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು. ವಿಶೇಷವೆಂದರೆ, ಪದವಿಯಲ್ಲಿ ತಾವು ಆಳವಾಗಿ ಓದಿದ್ದ ಅದೇ ರಾಜ್ಯಶಾಸ್ತ್ರ ವಿಷಯವನ್ನೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತಮ್ಮ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಈ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ.

ಬಿಗ್ ಬಿ ಅಮಿತಾಭ್ ಬಚ್ಚನ್ ಎದುರು ಕೆಬಿಸಿ ಹಾಟ್ ಸೀಟ್‌ನಲ್ಲಿ ಕುಳಿತು ದೇಶದ ಜನರಲ್ಲಿ ಬೆರಗು ಮೂಡಿಸಿದಾಗಿನಿಂದ ಹಿಡಿದು, ಇಂದು ಭಾರತದ ಪ್ರತಿಷ್ಠಿತ ನಾಗರಿಕ ಸೇವೆಗೆ ಆಯ್ಕೆಯಾಗಿ ಅಧಿಕಾರಿಯಾಗುವವರೆಗೆ ವಿಕಾಸ್ ಅವರ ಪ್ರಯಾಣ ನಿಜಕ್ಕೂ ರೋಮಾಂಚಕಾರಿ.

ಸಣ್ಣ ಹಳ್ಳಿಯಿಂದ ಬಂದರೂ ಗುರಿ ಸ್ಪಷ್ಟವಿದ್ದರೆ ಏನನ್ನಾದರೂ ಸಾಧಿಸಬಹುದು ಮತ್ತು ಒಂದು ಸಾಧನೆ ಮತ್ತೊಂದು ದೊಡ್ಡ ಯಶಸ್ಸಿಗೆ ಹೇಗೆ ಮೆಟ್ಟಿಲಾಗಬಹುದು ಎಂಬುದಕ್ಕೆ ಕೇವಲ 22ರ ಹರೆಯದ ವಿಕಾಸ್ ಸಿಂಗ್ ಪನ್ವಾರ್ ಅವರ ಈ ಯಶೋಗಾಥೆಯೇ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+